ಮಡಿಕೇರಿ, ಏ. 12 : ಕರ್ನಾಟಕವನ್ನು ಪ್ರವಾಸಿಯಾಗಿ ನೋಡುವ ದೃಷ್ಟಿಕೋನವನ್ನೇ ಬದಲಾಯಿಸಬೇಕು ಎಂಬ ಆಶಯ ಹೊತ್ತು ನಡೆದು ನೋಡು ಕರ್ನಾಟಕ ನಡಿಗೆ ಕಾರ್ಯಕ್ರಮ ಮತ್ತು ಚಿಂತನಶೀಲ ಸಮಾಜಮುಖಿ ಪತ್ರಿಕೆಯ ಏಪ್ರಿಲ್ ಸಂಚಿಕೆಗೆ ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಚಾಲನೆ ನೀಡಲಾಯಿತು.
ಪ್ರಜಾಸತ್ಯ ದಿನಪತ್ರಿಕೆ ಮತ್ತು ಕೊಡಗು ಪ್ರೆಸ್‍ಕ್ಲಬ್ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಅವರು ಮಾತನಾಡಿ, ನಡೆದು ನೋಡು ಕರ್ನಾಟಕ ತಂಡವು ಕೊಡಗಿನ ಬೆಡಗನ್ನು ನೋಡುವ ಜೊತೆಗೆ ಪ್ರಕೃತಿ ವಿಕೋಪದಿಂದ ಉಂಟಾದ ನೋವನ್ನು ನೋಡು ವಂತಾಗಿದೆ. ಜಿಲ್ಲೆಯ ಬೆಳೆಗಳಾದ ಕಾಫಿ, ಏಲಕ್ಕಿ ಹಾಗೂ ಇನ್ನಿತರ ಕೃಷಿ ಉತ್ಪನ್ನಗಳಿಗೆ ನಷ್ಟ ಉಂಟಾಗಿದೆಯಲ್ಲದೆ, ಬೆಲೆಯೂ ಕ್ಷೀಣಿಸಿದೆ.
ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಜನರ ನಡುವೆ ಹಣಕಾಸಿನ ವಹಿವಾಟು ಕೂಡ ಕಡಿಮೆ ಯಾದಂತಿದೆ. ಜಿಲ್ಲೆಯಲ್ಲಿ ಹಲವು ಮಂದಿ ಪ್ರವಾಸೋದ್ಯಮವನ್ನು ನಂಬಿ ಜೀವಿಸುತ್ತಿರುವವರೂ ಇದ್ದಾರೆ. ಆದರೆ, ಜಿಲ್ಲೆಗೆ ನೈಸರ್ಗಿಕ ಪ್ರವಾಸೋದ್ಯಮ ಬೇಕಾಗಿದೆ. ಅಲ್ಲದೆ ಕೊಡಗಿನ ಸಂಸ್ಕೃತಿ, ಆಚರಣೆ ಉಳಿಸಲು ಪೂರಕವಾದ ಪ್ರವಾಸೋದ್ಯಮವನ್ನು ನಾವು ಅನುಸರಿಸ ಬೇಕಾಗಿದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರು ಮಾತನಾಡಿ, ಬೇರೆಯವರಿಗೆ ಉಪದೇಶಮಾಡುವ ಮೊದಲು ನಾವು ಬದಲಾಗಬೇಕು. ಜನರೇ ಅಧಿಕಾರಿಗಳನ್ನು ಭ್ರಷ್ಟರನ್ನಾಗಿ ಮಾಡುತ್ತಿರುವದು. ಜನರು ತಮ್ಮ ಹಕ್ಕನ್ನು ಮಾತ್ರ ಪ್ರಶ್ನಿಸುತ್ತಾರೆ ತಮ್ಮ ಜವಾಬ್ದಾರಿ ಮರೆಯುತ್ತಾರೆ ಎಂದರು.
ಕೊಡಗಿನಲ್ಲಿ ಹುಟ್ಟಿ ಹರಿಯುವ ಕಾವೇರಿ ನದಿಯ ಕೊಡುಗೆಯನ್ನು ಕೊಡಗಿನಿಂದ ಹೊರಗಿರುವ ಜನ ಮರೆತಿದ್ದಾರೆ. ಕೊಡಗಿನಲ್ಲಿ ಕಾಡು ಬೆಳೆದು ಕೊಡಗಿನ ಜನ ಕಾಡು ಮನುಷ್ಯರಂತೆ ಬದುಕಬೇಕು ಎಂಬ ಚಿಂತನೆ ತುಂಬಾ ಜನರಲ್ಲಿದೆ ಇದು ತಪ್ಪು. ಪತ್ರಿಕೆ ವತಿಯಿಂದ ನಡೆಯುತ್ತಿರುವ ಈ ಕಾರ್ಯಕ್ರಮ ಕೇವಲ ಪ್ರವಾಸ ಮಾತ್ರವಾಗದೆ ಭವಿಷ್ಯದ ಪ್ರಜೆಗಳನ್ನು ಗಮನದಲ್ಲಿಟ್ಟು ಕೊಂಡು ಸಮಾಜ ಮುಖಿಯಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ ಎಂದು ಕರೆ ನೀಡಿದರು.
ಪ್ರಜಾಸತ್ಯ ಪತ್ರಿಕೆಯ ಸಂಪಾದಕ ಡಾ. ಬಿ.ಸಿ ನವೀನ್ ಕುಮಾರ್ ಮಾತನಾಡಿ, ಸಮಾಜದ ಉನ್ನತಿಗೆ ಪತ್ರಿಕೆ, ಮಾಧ್ಯಮಗಳ ಪಾತ್ರ ಅತೀ ಮುಖ್ಯವಾಗಿದೆ. ಪತ್ರಿಕೆ-ಮಾಧ್ಯಮಗಳು ಇದ್ದರೆ ಮಾತ್ರ ದೇಶ ಉನ್ನತಿಯತ್ತ ಸಾಗಲು ಸಾಧ್ಯವಾಗಿದೆ. ಮಾಧ್ಯಮಗಳು ಹಲವಾರು ಭ್ರಷ್ಟಾಚಾರ ತಡೆಯಲು ಪಾತ್ರವಹಿಸಿವೆಯಾದರೂ ಇತ್ತೀಚಿನ ದಿನಗಳಲ್ಲಿ ಇದು ವ್ಯಾಪಾರವಾಗಿ ಬದಲಾಗುತ್ತಿರುವದು ದುರಂತವೇ ಸರಿ ಎಂದರು.
ಯಾವದೇ ಪತ್ರಿಕೆಗಳಾದರೂ ಗ್ರಾಮೀಣ ಪ್ರದೇಶಗಳತ್ತ ಚಿಂತನೆ ಹರಿಸುವದು ಅತ್ಯವಶ್ಯಕವಾಗಿದೆ. ಹೆಚ್ಚಿನ ದಾಗಿ ಗ್ರಾಮೀಣ ಭಾಗದಲ್ಲೇ ಜನರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಆ ಭಾಗಗಳಲ್ಲಿ ಜನರು ಸಮಸ್ಯೆಗಳನ್ನು ಪ್ರಶ್ನಿಸುವವರು ಕಡಿಮೆ ಇರುತ್ತಾರೆ ಮಾಧ್ಯಮಗಳು ಗ್ರಾಮೀಣ ಭಾಗದಲ್ಲಿ ಹೆಚ್ಚು ಕಾರ್ಯನಿರ್ವಹಿಸ ಬೇಕಾಗಿದೆ ಎಂದು ಹೇಳಿದರು. ಸಮಾಜಮುಖಿ ಪತ್ರಿಕೆಯ ಕುರಿತು ಬಸವರಾಜು ಗೋ ಶಾಲೆ ಅವರು ಪ್ರಾಸ್ತಾವಿಕವಾಗಿ ತಿಳಿಸಿದರು. ದಾರವಾಡದ ಶಿವಶಂಕರ್ ಹಿರೇಮಠ್ ಅವರು ಪತ್ರಿಕೆ ಕುರಿತು ಅನಿಸಿಕೆಯನ್ನು ಹಂಚಿಕೊಂಡರು. ಕಿಶೋರ್ ರೈ ಕತ್ತಲೆಕಾಡು ಅವರು ಕಾರ್ಯಕ್ರಮ ನಿರೂಪಿಸಿದರೆ, ಚಿತ್ರ ಪ್ರಾರ್ಥಿಸಿದರು.