ಕುಶಾಲನಗರ, ಏ. 12: ಸಂಚಾರಿ ನಿಯಮಗಳ ಬಗ್ಗೆ ಪ್ರತಿಯೊಬ್ಬರೂ ಅರಿವು ಹೊಂದಬೇಕು ಎಂದು ಸೋಮವಾರಪೇಟೆ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ ದಿನಕರ ಶೆಟ್ಟಿ ತಿಳಿಸಿದ್ದಾರೆ. ಕುಶಾಲನಗರ ಸಂಚಾರಿ ಪೊಲೀಸ್ ಠಾಣೆ ಆಶ್ರಯದಲ್ಲಿ ನಡೆದ ದ್ವಿಚಕ್ರ ವಾಹನ ಹೆಲ್ಮೆಟ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದ್ವಿಚಕ್ರ ವಾಹನ ಸವಾರ, ಹಿಂಬದಿ ಸವಾರ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಮೂಲಕ ಸಂಚಾರಿ ನಿಯಮ ಪಾಲಿಸುವದರೊಂದಿಗೆ ತಮ್ಮ ಪ್ರಾಣ ರಕ್ಷಿಸಿಕೊಳ್ಳುವದು ಜವಾಬ್ದಾರಿಯಾಗಿದೆ ಎಂದರು.

ಹೆಲ್ಮೆಟ್ ಧರಿಸದೆ ಚಾಲನೆ ಮಾಡುವದು ನಿಯಮಬಾಹಿರವಾಗಿದೆ. ರಸ್ತೆ ಸುರಕ್ಷತೆ ನಿಯಮ ಪಾಲಿಸುವದು ಕಡ್ಡಾಯವಾಗಿದೆ. ಕಳೆದ ಸಾಲಿನಲ್ಲಿ ಕುಶಾಲನಗರ ವ್ಯಾಪ್ತಿಯಲ್ಲಿ 70 ರಸ್ತೆ ಅಪಘಾತ ಪ್ರಕರಣಗಳು ಸಂಭವಿಸಿದ್ದು 14 ಮಂದಿ ಸಾವನ್ನಪ್ಪಿದ್ದಾರೆ. 56 ಮಂದಿಗೆ ತೀವ್ರ ಗಾಯ ಉಂಟಾಗಿ ತಮ್ಮ ಭವಿಷ್ಯವನ್ನು ಕಳೆದುಕೊಂಡಿದ್ದಾರೆ ಎಂದ ದಿನಕರ ಶೆಟ್ಟಿ, ಈ ಸಾರಿ ಕೇವಲ 3 ತಿಂಗಳಲ್ಲಿ 30 ದ್ವಿಚಕ್ರ ವಾಹನಗಳ ಅಪಘಾತ ಸಂಭವಿಸಿದ್ದು 10 ಕ್ಕೂ ಅಧಿಕ ಜೀವಹಾನಿಗಳಾಗಿವೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಮಾತನಾಡಿದ ಕಾರ್ಯಕ್ರಮ ಸಂಯೋಜಕರು ಹಾಗೂ ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ದಿನೇಶ್‍ಕುಮಾರ್, ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ವಾಹನಗಳ ಸಂಚಾರ ಒತ್ತಡ ಅಧಿಕವಾಗಿದ್ದು ಅಪಘಾತ ಪ್ರಕರಣಗಳು ಏರತೊಡಗಿವೆ. ಈ ನಿಟ್ಟಿನಲ್ಲಿ ದ್ವಿಚಕ್ರ ವಾಹನ ಚಾಲಕರಿಗೆ ಹೆಲ್ಮೆಟ್ ಧಾರಣೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸ್ಥಳೀಯ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ವಿಶೇಷ ಅಭಿಯಾನ ಹಮ್ಮಿ ಕೊಂಡಿದ್ದಾರೆ. ಹೆಲ್ಮೆಟ್ ರಹಿತ ಸವಾರರಿಗೆ ಚಾಕಲೆಟ್ ನೀಡುವ ಮೂಲಕ ಈ ಬಗ್ಗೆ ತಿಳಿಹೇಳಿ ಸಂಚಾರಿ ನಿಯಮಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಈ ಸಂಬಂಧ ಪಟ್ಟಣದಲ್ಲಿ 5 ಕಡೆ ಸಂಚಾರಿ ಪೊಲೀಸರ 5 ತಂಡಗಳು ಕಾರ್ಯಕ್ರಮ ಗಳನ್ನು ರೂಪಿಸಿವೆ ಎಂದು ತಿಳಿಸಿದ್ದಾರೆ.

ಮತ್ತೆ ನಿಯಮ ಉಲ್ಲಂಘಿಸಿದಲ್ಲಿ ಅಂತಹ ವಾಹನಗಳನ್ನು ವಶಪಡಿಸಿ ಕೊಂಡು ಕಾನೂನು ಕ್ರಮ ಕೈಗೊಳ್ಳಲಾಗುವದು ಎಂದು ಹೇಳಿದರು.

ಕುಶಾಲನಗರ ಸಂಚಾರಿ ಠಾಣೆಯ ಠಾಣಾಧಿಕಾರಿ ಸೋಮೇಗೌಡ, ಸಹಾಯಕ ಠಾಣಾಧಿಕಾರಿ ಮೋಹನ್ ಕುಮಾರ್, ಕುಶಾಲನಗರ ಟೌನ್ ಠಾಣಾಧಿಕಾರಿ ಜಗದೀಶ್ ಮತ್ತು ಸಿಬ್ಬಂದಿಗಳು ಇದ್ದರು.