ಗೋಣಿಕೊಪ್ಪಲು, ಏ.12: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಡಗು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮುಂದಾಳತ್ವದಲ್ಲಿ ರೈತರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗಡಿಭಾಗ ಕುಟ್ಟದಿಂದ ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ವಾಹನ ಜಾಥಾ ನಡೆಸಲಾಯಿತು.

ಕುಟ್ಟ ಬಸ್ ನಿಲ್ದಾಣದಲ್ಲಿ ಕೊಡಗು ಜಿಲ್ಲಾ ರೈತ ಸಂಘದ ನೂರಾರು ಸದಸ್ಯರು ಪಾಲ್ಗೊಂಡು ಮಾನವ ಸರಪಳಿ ನಿರ್ಮಿಸಿ ರೈತರಿಗೆ ಆಗುತ್ತಿರುವ ತೊಂದರೆ, ಸಮಸ್ಯೆಗಳ ಬಗ್ಗೆ ರೈತ ಮುಖಂಡರುಗಳು ಸಾರ್ವಜನಿಕ ರನ್ನು ಉದ್ದೇಶಿಸಿ ಮಾತನಾಡಿದರು. ಕುಟ್ಟ ಭಾಗದ ಪ್ರಗತಿಪರ ಕೃಷಿಕರು ಕಾಫಿ ಬೆಳೆಗಾರ ಮಾಚಿಮಾಡ ಸಿ.ಸುಬ್ಬಯ್ಯ ಹಸಿರು ನಿಶಾನೆ ತೋರಿಸುವ ಮೂಲಕ ವಾಹನ ಜಾಥಾಕ್ಕೆ ಚಾಲನೆ ನೀಡಿದರು.

ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಕೃಷಿ ವಿಶ್ವ ವಿದ್ಯಾನಿಲಯದ ಮಾಜಿ ಸೆನೆಟ್ ಸದಸ್ಯ ಪ್ರಗತಿಪರ ರೈತ ಪುಚ್ಚಿಮಾಡ ಲಾಲಾ ಪೂಣಚ್ಚ, ರೈತರ ಪರ ಹೋರಾಟ ಯಾರಿಂದಲೂ ನಡೆಯುತ್ತಿಲ್ಲ. ಇದರಿಂದ ಶಕ್ತಿಯಾಗಿ ಬೆಳೆಯುತ್ತಿರುವ ರೈತ ಸಂಘದಿಂದ ರೈತರ ಪರ ಹೋರಾಟ ನಡೆಯುತ್ತಿದೆ. ಜಿಲ್ಲೆಯ ರೈತರು ರೈತ ಸಂಘದೊಂದಿಗೆ ಪಾಲ್ಗೊಂಡು ನ್ಯಾಯಯುತವಾಗಿ ರೈತರಿಗೆ ಸಿಗಬೇಕಾದ ಸವಲತ್ತುಗಳನ್ನು ಹೋರಾಟದ ಮೂಲಕ ಪಡೆದು ಕೊಳ್ಳಲು ಕೈ ಜೋಡಿಸಬೇಕೆಂದು ಕರೆ ನೀಡಿದರು.

ರಾಜ್ಯ ಕೃಷಿ ಪುರಸÀ್ಕøತ ಪ್ರಶಸ್ತಿ ವಿಜೇತ ಯೋಧ ಸೋಮೆಯಂಗಡ ಗಣೇಶ್ ಮಾತನಾಡಿ, ರೈತರ ಬೆಳೆಗಳಿಗೆ ಬೆಂಬಲ ಬೆಲೆ ದೊರೆಯುತ್ತಿಲ್ಲ. ಸಾಲ ಮನ್ನಾ ವಿಚಾರದಲ್ಲಿ ಸರ್ಕಾರ ರೈತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಕೂಡಲೇ ರೈತರ ಹೋರಾಟಕ್ಕೆ ಸ್ಪಂದಿಸಿ ರೈತರ ಸಮಸ್ಯೆಗಳನ್ನು ಸರ್ಕಾರ ಈಡೇರಿಸಬೇಕೆಂದು ಒತ್ತಾಯಿಸಿದರು.

ಕುಟ್ಟ ಭಾಗದ ಕೃಷಿಕ, ವಿಎಸ್‍ಎಸ್‍ಎನ್‍ನÀ ಅಧ್ಯಕ್ಷ ಮಚ್ಚಮಾಡ ಸುಬ್ರಮಣಿ ಮಾತನಾಡಿ ರಾಜಕೀಯ ರಹಿತವಾಗಿ ರೈತ ಸಂಘ ನಡೆಸುತ್ತಿರುವ ಹೋರಾಟಕ್ಕೆ ರಾಜ್ಯ ವ್ಯಾಪ್ತಿ ಬೆಂಬಲ ವ್ಯಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ಕೊಡಗಿನ ರೈತರು ರೈತ ಸಂಘದೊಂದಿಗೆ ಕೈ ಜೋಡಿಸಿ ಹೋರಾಟವನ್ನು ಮತ್ತಷ್ಟು ಗಟ್ಟಿಗೊಳಿಸೋಣವೆಂದು ಕರೆ ನೀಡಿದರು. ರೈತರ ಬೇಡಿಕೆಗಳ ವಿಚಾರದಲ್ಲಿ ಪ್ರಾಸ್ತಾವಿಕವಾಗಿ ತಿತಿಮತಿಯ ರೈತ ಮುಖಂಡ ಚೆಪ್ಪುಡೀರ ಕಾರ್ಯಪ್ಪ ಮಾತನಾಡಿದರು. ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಮಾತನಾಡಿ, ಪ್ರಸ್ತುತ ಲೋಕಸಭೆ ಚುನಾವಣೆ ನಡೆಯುತ್ತಿರುವದರಿಂದ ರೈತರ ಸಮಸ್ಯೆಗಳನ್ನು ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳು ಗಮನ ಹರಿಸಿ ರೈತರ ಸಂಕಷ್ಟದಲ್ಲಿ ಕೈ ಜೋಡಿಸಬೇಕೆಂದು ಒತ್ತಾಯಿಸಿದರು. ಕರಿಮೆಣಸು ಆಮದು ನೀತಿಯಿಂದ, ಕಳ್ಳಸಾಗಣಿಕೆಯ ಮೂಲಕ ವಿಯಟ್ನಾಂ ಕರಿಮೆಣಸು ಆಮದಾಗುತ್ತಿರುವದರಿಂದ ಬೆಲೆ ಕುಸಿತ ಕಂಡಿದೆ. ಇದರಿಂದ ರೈತರ ಸಂಕಷ್ಟ ಮುಗಿಲು ಮುಟ್ಟಿದೆ. ಬೆಳೆದ ಭತ್ತದ ಬೆಳೆಗೆ ಬೆಂಬಲ ಬೆಲೆ ಇಲ್ಲದೆ ರೈತ ಸಂಕಷ್ಟದಲ್ಲಿ ಸಿಲುಕಿದ್ದಾನೆ. ಸರ್ಕಾರ ಕೂಡಲೇ ರೈತರ ಸಮಸ್ಯೆ ಗಳಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ನಂತರ ಜಾಥಾವು ಶ್ರೀಮಂಗಲ ಪಟ್ಟಣದಲ್ಲಿ ಸಮಾಗಮಗೊಂಡು ಉಪಾಧ್ಯಕ್ಷ ಶಂಕರಪ್ಪ, ರೈತ ಮುಖಂಡರುಗಳಾದ ಕಳ್ಳೆಂಗಡ ಸುರೇಶ್, ಪೆಮ್ಮಂಡ ರಾಜ ಕುಶಾಲಪ್ಪ, ಮುಂತಾದವರು ಮಾತನಾಡಿದರು. ಜಾಥಾವು ಹುದಿಕೇರಿ, ಪೊನ್ನಂಪೇಟೆ, ಗೋಣಿಕೊಪ್ಪ ವೀರಾಜಪೇಟೆ, ಮೂರ್ನಾಡು, ಮಾರ್ಗವಾಗಿ ಮಡಿಕೇರಿಗೆ ಆಗಮಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿತು. ರೈತ ಮುಖಂಡರುಗಳಾದ ಪುಚ್ಚಿಮಾಡ ಶುಭಾಶ್ ಸುಬ್ಬಯ್ಯ, ಚೆಟ್ರುಮಾಡ ಸುಜಯ್ ಬೋಪಯ್ಯ, ಅಜ್ಜಮಾಡ ಚಂಗಪ್ಪ, ಬಾಚಮಾಡ ಭವಿ ಕುಮಾರ್, ಮಂಡೇಪಂಡ ಪ್ರವೀಣ್, ಚಂಗುಲಂಡ ಸೂರಜ್, ದೇವಣಿರ ಸಿ.ಬೋಪಣ್ಣ, ಸಭಿತ ಭೀಮಯ್ಯ, ಕುಕ್ಕನೂರು ಎ.ಸೋಮಣ್ಣ, ಪೀಟರ್ ಜಾನ್, ಐಚೆಟ್ಟಿರ ಸುಬ್ಬಯ್ಯ, ಕೆ.ಬಿ.ಗಣಪತಿ, ಆಲೇಮಾಡ ಮಂಜುನಾಥ್, ಸೇರಿದಂತೆ ಇನ್ನಿತರ ಮುಖಂಡರು ಜಾಥಾದಲ್ಲಿ ಪಾಲ್ಗೊಂಡಿದ್ದರು. ಡಿವೈಎಸ್ಪಿ ನಾಗಪ್ಪ ಮಡಿಕೇರಿ ಡಿವೈಎಸ್ಪಿ ಸುಂದರಾಜ್ ನೇತೃತ್ವದಲ್ಲಿ ಬಿಗಿಬಂದೋಬಸ್ತ್ ಕಲ್ಪಿಸಲಾಗಿತ್ತು. -ಹೆಚ್.ಕೆ.ಜಗದೀಶ್