ಮಡಿಕೇರಿ, ಏ. 13: ಭಾರತದಲ್ಲಿ ಮತದಾನವು ಶ್ರೇಷ್ಠವಾಗಿದೆ. ಆ ದಿಸೆಯಲ್ಲಿ ಮತದಾನದಂದು ಚುನಾವಣೆಯು ವ್ಯವಸ್ಥಿತವಾಗಿ ನಡೆಯುತ್ತಿದೆಯೇ ಎಂಬ ಬಗ್ಗೆ ಮೈಕ್ರೋ ವೀಕ್ಷಕರು ಮಾಹಿತಿ ಒದಗಿಸಬೇಕು ಎಂದು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕ ಕುಲದೀಪ್ ನಾರಾಯಣ ತಿಳಿಸಿದರು.

ನಗರದ ಸಂತ ಜೋಸೆಫರ ಶಾಲೆಯಲ್ಲಿ ಮೈಕ್ರೋ ವೀಕ್ಷಕರಿಗೆ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆಗಳಿಗೆ ಮೈಕ್ರೋ ವೀಕ್ಷಕರನ್ನು ನಿಯೋಜಿಸಲಾಗುತ್ತಿದ್ದು, ಈ ಮತಗಟ್ಟೆಗಳಲ್ಲಿ ಚುನಾವಣಾ ಆಯೋಗದ ನಿರ್ದೇಶನಗಳನ್ನು ಪಾಲಿಸಲಾಗುತ್ತದೆಯೇ ಎಂಬ ಬಗ್ಗೆ ವರದಿ ನೀಡಬೇಕು ಎಂದು ತಿಳಿಸಿದರು.

ಪ್ರತಿ ಎರಡು ಗಂಟೆಗಳಿಗೊಮ್ಮೆ ಶೇಕಡಾವಾರು ಮತದಾನದ ಮಾಹಿತಿ ನೀಡುವದು. ಯಾವದೇ ರೀತಿಯ ಅಡಚಣೆ ಅಥವಾ ಗೊಂದಲ ಉಂಟಾದಲ್ಲಿ ತಕ್ಷಣವೇ ಮಾಹಿತಿ ನೀಡಬೇಕು. ಮತದಾನ ಮುಕ್ತಾಯ ಸಮಯದಲ್ಲಿ ಎಲ್ಲಾ ಚುನಾವಣಾ ಕಾರ್ಯಗಳು ಸುಗಮವಾಗಿ ನಡೆದಿವೆಯೇ ಎಂಬ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ, ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಮತದಾನ ಸುಗಮವಾಗಿ ನಡೆಯುತ್ತಿದೆಯೇ ಎಂಬದನ್ನು ಗಮನಿಸಬೇಕು. ಮತಗಟ್ಟೆಯಲ್ಲಿ ನಿರ್ವಹಿಸಬೇಕಾದ ಕರ್ತವ್ಯದ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಪಿ. ಶಿವರಾಜು, ಮಾಸ್ಟರ್ ತರಬೇತಿದಾರರಾದ ವಾಲ್ಟರ್ ಡಿಮೆಲ್ಲೊ, ಷಂಶುದ್ದೀನ್, ಮಚ್ಚಾಡೋ, ನೋಡಲ್ ಅಧಿಕಾರಿಗಳಾದ ನಟರಾಜು, ಪ್ರಮೋದ್ ಇತರರು ಇದ್ದರು.