ವೀರಾಜಪೇಟೆ, ಏ. 13: ವಿದ್ಯಾರ್ಥಿಗಳು ಸರಕಾರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದೇವೆಂಬ ಕೀಳರಿಮೆ ಬೇಡ. ಶಿಸ್ತು ಮತ್ತು ಛಲದಿಂದ ಜೀವನದಲ್ಲಿ ಅಂದು ಕೊಂಡಿರುವ ಗುರಿ ಮುಟ್ಟುವಂತಾ ಗಬೇಕು ಎಂದು ನಿವೃತ್ತ ಪೊಲೀಸ್ ಡಿವೈಎಸ್‍ಪಿ ಎಂ.ಎ. ಅಪ್ಪಯ್ಯ ಹೇಳಿದರು.

ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಸಮಿತಿ ಹಾಗೂ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ ವಿದ್ಯಾರ್ಥಿ ಜೀವನ ಎಂಬದು ಮಹತ್ವವಾದ ಘಟ್ಟ, ಬದುಕಿನಲ್ಲಿ ಏನಾದರೂ ಉತ್ತಮ ಸಾಧನೆ ಮಾಡಬೇಕೆಂಬ ಛಲದಿಂದ ಶಿಕ್ಷಣವನ್ನು ಮುಂದುವರಿಸಿ ಸೇನೆಗೆ ಹೋಗಲು ಪ್ರಯತ್ನಿಸಬೇಕು. ದುಷ್ಚಟಗಳನ್ನು ದೂರ ಮಾಡಿ ದಿನ ನಿತ್ಯ ಪತ್ರಿಕೆಗಳು ಹಾಗೂ ಪುಸ್ತಕವನ್ನು ಓದುವ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಂಡು ಪೋಷಕರ ಆಸೆಯನ್ನು ಈಡೇರಿಸು ವಂತಾಗಬೇಕು. ಗುರು ಹಿರಿಯರಿಗೆ ಗೌರವ ನೀಡುವದರೊಂದಿಗೆ ದೇಶದ ಉತ್ತಮ ಪ್ರಜೆಗಳಾಗಬೇಕು ಎಂದರು.

ಅಂತರರಾಷ್ಟ್ರೀಯ ಹಾಕಿ ಆಟಗಾರ ಬೊವ್ವೇರಿಯಂಡ ಸುಬ್ಬಯ್ಯ ಕುಟ್ಟಪ್ಪ ಅವರು ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡೆಯಲ್ಲೂ ಹೆಚ್ಚು ಭಾಗವಹಿಸಬೇಕು. ಜೀವನದಲ್ಲಿ ಎಷ್ಟೇ ಬಡತನ ಇತರ ಕಷ್ಟಗಳಿದ್ದರೂ ಕ್ರೀಡೆ ಹಾಗೂ ಶಿಕ್ಷಣದಲ್ಲಿ ತಮ್ಮ ಗುರಿ ಸಾಧಿಸಬೇಕು ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಶಿಸ್ತು ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಉನ್ನತ ಶಿಕ್ಷಣದೊಂದಿಗೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಹೇಳಿದರು. ವೇದಿಕೆಯಲ್ಲಿ ಕಾಲೇಜಿನ ಸಾಂಸ್ಕøತಿಕ ಸಮಿತಿಯ ಸಂಚಾಲಕ ಪ್ರೊ. ಪಿ.ಎನ್. ನಾಗರಾಜಮೂರ್ತಿ, ಕ್ರೀಡಾ ಮತ್ತು ರೇಂಜರ್ ವಿಭಾಗದ ಸಂಚಾಲಕ ಪ್ರೊ. ಎಂ. ರಾಖಿ ಪೂವಣ್ಣ, ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷ ಎಂ.ಆರ್. ರಂಜಿತ್, ಕಾರ್ಯದರ್ಶಿ ಬಿ.ಎಸ್. ವಿನುತ, ಸುನೂಫ್, ನವೀನ್‍ಕುಮಾರ್, ನಿಖಿಲ್, ತಮ್ಮಯ್ಯ ಉಪಸ್ಥಿತರಿದ್ದರು.

ಕನ್ನಡ ವಿಭಾಗದ ಉಷಾ ಸ್ವಾಗತಿಸಿದರು. ನಾಗರಾಜಮೂರ್ತಿ ಮತ್ತು ರಾಖಿ ಪೂವಣ್ಣ ಅವರು ವಾರ್ಷಿಕ ವರದಿ ಮಂಡಿಸಿದರು. ವಿದ್ಯಾರ್ಥಿ ವಿ.ಆರ್. ಮಧುರ ಮತ್ತು ಚಾಂದಿನಿ ನಿರೂಪಿಸಿದರೆ. ಉಪನ್ಯಾಸಕಿ ಆರ್. ದಿವ್ಯ ವಂದಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.