ಆಲೂರು ಸಿದ್ದಾಪುರ, ಏ. 12: ಕಳೆದ 5 ದಿನಗಳಿಂದ ಬಾಣವಾರ ಕಾಡು ಹಾಡಿಯಲ್ಲಿ ಗಾಯಗೊಂಡ ಒಂಟಿ ಸಲಗಕ್ಕೆ ಅರಣ್ಯ ಇಲಾಖೆಯಿಂದ ಚಿಕಿತ್ಸೆ ನೀಡಲಾಗುತ್ತಿದ್ದು ಇದೀಗ ಕಾಡಾನೆಯಲ್ಲಿ ಸ್ವಲ್ಪಮಟ್ಟಿಗೆ ಚೇತರಿಕೆ ಕಂಡುಬಂದಿದೆ. ಬುಧವಾರ ‘ಶಕ್ತಿ’ಯಲ್ಲಿ ಪ್ರಕಟಗೊಂಡ ಕಾಡಾನೆಯ ಗೋಳು ಕೇಳುವವರು ಯಾರು ಎಂಬ ಶಿರ್ಷಿಕೆಯಡಿಯಲ್ಲಿ ಪ್ರಕಟವಾದ ವರದಿಗೆ ಸ್ಪಂದಿಸಿದ ಇಲಾಖಾಧಿಕಾರಿಗಳು ಇದೀಗ ಕಾಡಾನೆಗೆ ಚಿಕಿತ್ಸೆ ನೀಡುತ್ತಿರುವ ಸ್ಥಳಕ್ಕೆ ಯಾರನ್ನೂ ಒಳ ಬಿಡುತ್ತಿಲ್ಲ; ಆ ಸ್ಥಳದ ಸುತ್ತ ತಂತಿ ಬೇಲಿ ನಿರ್ಮಿಸಿದ್ದಾರೆ.

ಒಂದು ಕಾಲಿನಲ್ಲಿ ಬಲವಾದ ಗಾಯವಾಗಿದ್ದರೆ ಇನ್ನೊಂದು ಕಾಲಿಗೆ ಇಲಾಖೆಯಿಂದ ಬಲವಾಗಿ ಹಗ್ಗದಿಂದ ಕಟ್ಟಲಾಗಿತ್ತು ಇದರಿಂದ ಕಾಡಾನೆ ದಿನದಿಂದ ದಿನಕ್ಕೆ ತನ್ನ ನಿಯಂತ್ರಣವನ್ನು ಕಳೆದುಕೊಳ್ಳುತ್ತಿತ್ತು ಈ ಕುರಿತು ವರದಿಯಲ್ಲಿ ಪ್ರಕಟಿಸಲಾಗಿತ್ತು. ಇದರಿಂದ ಎಚ್ಚೆತ್ತ ಇಲಾಖೆ ಬಲವಾಗಿ ಬಿಗಿಯಲಾಗಿದ್ದ ಹಗ್ಗವನ್ನು ಕಾಲಿನಿಂದ ಬಿಚ್ಚಿದ್ದಾರೆ. ಇದೀಗ ಇತರ ಆನೆಗಳಿಗೆ ಹಾಕುವಂತೆ ಸಾಮಾನ್ಯ ಸರಪಳಿಯಿಂದ ಕಟ್ಟಲಾಗಿದೆ. ಬೈನೆ ಸೊಪ್ಪು ಇನ್ನಿತರ ಸೊಪ್ಪುಗಳನ್ನು ಯಾವದೆ ಭಯ ಭೀತಿಯಿಲ್ಲದೆ ತಿನ್ನುತ್ತಿದೆ.

ನಾಗರಹೊಳೆ ರಾಜೀವಗಾಂಧಿ ರಾಷ್ಟ್ರೀಯ ಅಭಯಾರಣ್ಯದ ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಡಾ.ಮುಜೀದ್ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಶಾಂತ, ಜನರು ಇಲ್ಲದ ಸ್ಥಳದಲ್ಲಿ ಗಾಯಗೊಂಡ ಆನೆಗೆ ಚಿಕಿತ್ಸೆ ನೀಡಲಾಗುತ್ತಿದೆ.

ಚಿಕಿತ್ಸೆಯಿಂದ ಇದೀಗ ಗಾಯದ ಹುಣ್ಣು ಒಡೆದು ಹುಳು ಹೊರಬಂದು ನಾಶವಾಗುತ್ತಿದೆ. ಆನೆ ಗಾಯಗೊಂಡಿದ್ದ ಕಾಲನ್ನು ನೆಲಕ್ಕೆ ಊರುತ್ತಿದೆ, ಆನೆ ಚೇತರಿಕೆ ಕಂಡಿರುವದರಿಂದ ಅಧಿಕಾರಿಗಳಿಗೆ ಹಾಗೂ ನೊಡುಗರೀಗೆ ಒಂದಷ್ಟು ಸಮಾಧಾನ ತಂದಿದೆ, ಈ ಕಾಡಾನೆ ಮತ್ತೆ ಕಾಡು ಸೇರುವದು ಮಾತ್ರ ಅನುಮಾನವಾಗಿದ್ದು, ಜನರಿಗೆ ಹೊಂದಿಕೊಂಡಂತಿದೆ.

-ಚಿತ್ರ, ವರದಿ: ದಿನೇಶ್ ಮಾಲಂಬಿ