ಶ್ರೀಮಂಗಲ, ಏ. 12: ಕೊಡವ ಮದುವೆ ಪದ್ಧತಿಯ ನೀರ್ ಎಡ್‍ಪೊ (ಗಂಗಾಪೂಜೆ) ಸಂದರ್ಭ ಮದ್ಯ ನಿಷೇಧ ಮಾಡಿರುವ ಅಮ್ಮತ್ತಿ ಕೊಡವ ಸಮಾಜದ ನಿಲುವನ್ನು ಟಿ. ಶೆಟ್ಟಿಗೇರಿಯ ತಾವಳಗೇರಿ ಮಂದ್‍ನಾಡ್ ಕೊಡವ ಸಮಾಜದಲ್ಲೂ ಅನುಷ್ಠಾನಗೊಳಿಸಲು ಸಮಾಜದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದ ಆಡಳಿತ ಮಂಡಳಿ ಸಭೆ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂದರ್ಭ ಟಿ. ಶೆಟ್ಟಿಗೇರಿ ಸಮಾಜದಲ್ಲೂ ಈ ತೀರ್ಮಾನವನ್ನು ಕೈಗೊಂಡಿದ್ದು, ಈ ವ್ಯವಸ್ಥೆಯನ್ನು ಎಲ್ಲಾ ಕೊಡವ ಸಮಾಜಗಳಲ್ಲೂ ಕಾರ್ಯಗತಗೊಳಿಸಬೇಕೆಂದು ಮನವಿ ಮಾಡಲಾಯಿತು. ನೀರ್ ಎಡ್‍ಪ ಸಂದರ್ಭದಲ್ಲಿ ವರನ ಸೋದರ ಸಂಬಂಧಿಗಳು ಮಾತ್ರ ವಧುವಿನ ಮುಂಭಾಗದಲ್ಲಿ ನೃತ್ಯ ಮಾಡಬಹುದು ಉಳಿದವರು ದೂರದಲ್ಲಿ ನೃತ್ಯ ಮಾಡುವದು ಕೊಡವ ಪದ್ಧತಿಯ ಕ್ರಮವಾಗಿದ್ದು ಅಖಿಲ ಕೊಡವ ಸಮಾಜ ಮತ್ತು ಕೊಡವ ಸಮಾಜ ಒಕ್ಕೂಟ ಈ ಬಗ್ಗೆ ಎಲ್ಲಾ ಕೊಡವ ಸಮಾಜಗಳೊಂದಿಗೆ ವ್ಯವಹರಿಸಬೇಕೆಂದು ಸಭೆಯಲ್ಲಿ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು. ಇದರೊಂದಿಗೆ ಮದುವೆಯ ದಂಪತಿ ಮುಹೂರ್ತ ಮುಗಿದ ನಂತರ ವಧುವನ್ನು ಕೈ ಹಿಡಿದು ವರನ ಕೈಗೆ ಒಪ್ಪಿಸಿದ ನಂತರ ವಧುವನ್ನು ವರನ ಕೋಣೆಗೆ ಕರೆದುಕೊಂಡು ಹೋಗಬೇಕು. ಹಾಗಾದಲ್ಲಿ ಮಾತ್ರ ಅದುವರೆಗೆ ವಧುವಿನ ಮನೆಯಾಗಿದ್ದ ಕಲ್ಯಾಣ ಮಂಟಪವು ಮುಂದಿನ ಕಾರ್ಯಕ್ಕೆ ವರನ ಮನೆ ಎನಿಸಿಕೊಳ್ಳುತ್ತದೆ. ಇದು ಕೊಡವ ಮದುವೆಯ ನೈಜ ಪದ್ದತಿಯಾಗಿದ್ದು ಕೊಡವ ಕುಟುಂಬದವರು ಇದನ್ನು ಪಾಲಿಸುವಂತೆ ಕ್ರಮ ವಹಿಸಬೇಕೆಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಯಿತು.

ಚಿಹ್ನೆ ದುರ್ಬಳಕೆಗೆ ಆಕ್ಷೇಪ

ಅನಾದಿ ಕಾಲದಿಂದಲೂ ಕೊಡವ ಸಂಸ್ಕøತಿಯ ಪೀಚೆಕತ್ತಿ, ಒಡಿಕತ್ತಿ ಹಾಗೂ ಕೋವಿಯನ್ನು ಹೊಂದಿರುವ ಕೊಡವ ಚಿಹ್ನೆಯು ಕೊಡವರದ್ದೇ ಮೂಲ ಚಿಹ್ನೆಯಾಗಿದ್ದು ಇದನ್ನು ಕೊಡವರು ಮಾತ್ರ ಬಳಸಲು ಹಕ್ಕು ಹಾಗೂ ಅರ್ಹತೆ ಹೊಂದಿರುವುದಾಗಿದೆ. ಆದರೆ ಇತ್ತೀಚೆಗೆ ಕೊಡವ ಸಮುದಾಯದವರಲ್ಲದ ಹೊರಜಿಲ್ಲೆ ಹಾಗೂ ಹೊರರಾಜ್ಯದಿಂದ ಬಂದವರೂ ಸೇರಿದಂತೆ ಅನ್ಯ ಜನಾಂಗದವರು ಚಿಹ್ನೆಯನ್ನು ತಮ್ಮ ಮದುವೆ ಮತ್ತಿತರ ಸಮಾರಂಭದ ಆಹ್ವಾನ ಪತ್ರಿಕೆಗಳಲ್ಲಿ ಮುದ್ರಿಸುವುದು ಹಾಗೂ ವಾಹನ ಇತ್ಯಾದಿಗಳಲ್ಲಿ ಬಳಸುತ್ತಿರುವುದನ್ನು ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜವು ಖಂಡಿಸುವುದಾಗಿ ಹಾಗೂ ಇನ್ನು ಮುಂದೆ ಇಂತಹ ಬಳಕೆಯನ್ನು ನಿಲ್ಲಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲು ವ್ಯವಹರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಉಪಾಧ್ಯಕ್ಷ ಚೊಟ್ಟೆಯಾಂಡಮಾಡ ಬೋಸು ವಿಶ್ವನಾಥ್, ಕಾರ್ಯದರ್ಶಿ ಮನ್ನೇರ ರಮೇಶ್, ಕ್ರೀಡೆ ಹಾಗೂ ಸಾಂಸ್ಕ್ರತಿ ಸಮಿತಿಯ ಅಧ್ಯಕ್ಷ ಕಟ್ಟೇರ ಈಶ್ವರ, ಸಾಂಸ್ಕ್ರತಿಕ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ, ನಿರ್ದೇಶಕರಾದ ಮಾಣೀರ ವಿಜಯ ನಂಜಪ್ಪ, ತಡಿಯಂಗಡ ಕರುಂಬಯ್ಯ, ಆಂಡಮಾಡ ಸತೀಶ್ ಮತ್ತಿತರರು ಭಾಗವಹಿಸಿದ್ದರು.