ಮಡಿಕೇರಿ, ಏ. 11: ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷ ಮುಂಗಾರುವಿನಲ್ಲಿ ಇತಿಹಾಸದಲ್ಲೇ ಕಂಡು ಕೇಳರಿಯದ ಮಳೆಯ ಹೊಡೆತದಿಂದ ತತ್ತರಿಸಿಹೋಗಿದ್ದ ಜನತೆ; ಮತ್ತೊಮ್ಮೆ ಎದುರುಗೊಳ್ಳಲಿರುವ ಮಳೆಗಾಲದ ಚಿಂತೆಗೊಳಗಾಗಿದ್ದಾರೆ. ಸೂರು ಕಳೆದುಕೊಂಡಿರುವ ಸಂತ್ರಸ್ತರಿಗಾಗಿ ಸರಕಾರದಿಂದ ನಿರ್ಮಾಣ ಹಂತದಲ್ಲಿರುವ ಮನೆಗಳ ಅಪೂರ್ಣ ಸ್ಥಿತಿ ಕಂಡು ಅಸಹಾಯಕರಾಗಿ ‘ಶಕ್ತಿ’ಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.ಮಾದಾಪುರ ಬಳಿಯ ಜಂಬೂರು, ಮಕ್ಕಂದೂರು ಸನಿಹದ ಕರ್ಣಂಗೇರಿ, ಮದೆನಾಡು ಬಳಿಯ ಗೋಳಿಬಾಣೆ ಮುಂತಾದೆಡೆ ಅಪೂರ್ಣ ಸ್ಥಿತಿಯಲ್ಲಿರುವ ಮನೆಗಳ ಸ್ವರೂಪದಿಂದ ತೀವ್ರ ಬೇಸರಗೊಂಡಿದ್ದಾರೆ. ಪ್ರಾಕೃತಿಕ ವಿಕೋಪದಿಂದ ತಮ್ಮ ಬದುಕಿನೊಂದಿಗೆ ಮನೆ ಸಹಿತ ಆಸ್ತಿಪಾಸ್ತಿ ಕಳೆದುಕೊಂಡಿರುವ ಕುಟುಂಬಗಳಿಗೆ ಪುನರ್ವಸತಿ ನೆಪದಲ್ಲಿ ಮನೆಗಳ ಕಾಮಗಾರಿ ನಡೆಯುತ್ತಿದ್ದು, ಭಾರೀ ದುರುಪಯೋಗದ ಸಂಶಯವನ್ನು ಸಂತ್ರಸ್ತರು ವ್ಯಕ್ತಪಡಿಸಿದ್ದಾರೆ.ರಾಜ್ಯ ಸರಕಾರ ಅಂದಾಜು ರೂ. 10 ಲಕ್ಷ ವೆಚ್ಚದಲ್ಲಿ ಪ್ರತಿಯೊಬ್ಬ ಸಂತ್ರಸ್ತರ ಕುಟುಂಬಕ್ಕೆ ಮನೆ ಪುನರ್‍ನಿರ್ಮಿಸಿಕೊಡುವದಾಗಿ ಘೋಷಿಸಿದ್ದು, ಪ್ರಸಕ್ತ ಕಾಮಗಾರಿಗೆ ಶೇ.50ರಷ್ಟು ಕೂಡ ಹಣ ವಿನಿಯೋಗಿಸುತ್ತಿಲ್ಲವೆಂಬ ಅಸಮಾಧಾನ ತೋಡಿಕೊಂಡಿದ್ದಾರೆ. ಅಲ್ಲದೆ, ಈ ಮನೆಗಳನ್ನು ಗಮನಿಸಿದರೆ ಕುಟುಂಬವೊಂದು ನೆಲೆಸುವಷ್ಟು ಕನಿಷ್ಟ ಅನುಕೂಲ ಇಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.(ಮೊದಲ ಪುಟದಿಂದ) ಅನೇಕ ವರ್ಷಗಳಿಂದ ವಸತಿರಹಿತ ಕಾರ್ಮಿಕ ಕುಟುಂಬಗಳಿಗೆ ಸರಕಾರ ಕಲ್ಪಿಸುತ್ತಿರುವ ಸೂರಿನಂತೆ, ತೀರಾ ಕಳಪೆ ಗುಣಮಟ್ಟದ ಚಿಕ್ಕ ಚಿಕ್ಕ ಮನೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಬೊಟ್ಟು ಮಾಡಿರುವ ಸಂತ್ರಸ್ತರು; ಇಂತಹ ಮನೆಗಳು ಕೊಡಗಿನ ಮಳೆ ಪ್ರದೇಶಗಳಲ್ಲಿ ಹೆಚ್ಚುಕಾಲ ಬಾಳುವಂತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಕಾಮಗಾರಿಯ ಗುಣಮಟ್ಟದ ಕುರಿತು ಬಹುತೇಕ ಸಂತ್ರಸ್ತರು ಅಸಹಾಯಕತೆಯೊಂದಿಗೆ ಟೀಕಿಸಿದ್ದು, ಇಂತಹ ಮನೆಗಳನ್ನು ಕಟ್ಟಿಸುವ ಬದಲಿಗೆ, ರಾಜ್ಯ ಸರಕಾರದಿಂದ ಪರಿಹಾರದ ರೂಪದಲ್ಲಿ ನಗದು ಹಣವನ್ನು ಕಲ್ಪಿಸಿದ್ದರೆ ಸಂತ್ರಸ್ತರು ತಮ್ಮ ಸ್ವಂತ ಜಾಗದಲ್ಲಿ ಉತ್ತಮ ಮನೆಗಳನ್ನು ಕಟ್ಟಿಕೊಳ್ಳಲು ಸಾಧ್ಯವಿತ್ತು ಎಂದು ಬೊಟ್ಟು ಮಾಡಿದ್ದಾರೆ. ಮನೆಗಳ ನಿರ್ಮಾಣ ತ್ವರಿತ ಪೂರ್ಣಗೊಳಿಸಲು ಸೂಚನೆ ಪ್ರಕೃತಿ ವಿಕೋಪದಡಿ ನಿರ್ಮಾಣವಾಗುತ್ತಿರುವ ಮನೆಗಳ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಅನ್ಬುಕುಮಾರ್ ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾಹಿತಿ ನೀಡಿದರು. ಮದೆನಾಡಿನಲ್ಲಿ ತಾ. 30ರೊಳಗೆ ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಬೇಕು. ಉಳಿದ ಕಡೆಗಳಲ್ಲಿ ನಡೆಯುತ್ತಿರುವ ಮನೆಗಳ ಕಾಮಗಾರಿಯನ್ನು ಜೂನ್ ಒಳಗೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಇಂಜಿನಿಯರ್‍ಗಳಿಗೆ ಅವರು ನಿರ್ದೇಶನ ನೀಡಿದರು. ಈ ಬಗ್ಗೆ ಮಾಹಿತಿ ನೀಡಿದ ಹೆಬಿಟೇಟ್ ಸಂಸ್ಥೆಯ ಇಂಜಿನಿಯರ್ ಶ್ರೀನಿವಾಸ್, ಈಗಾಗಲೇ ಕರ್ಣಂಗೇರಿಯಲ್ಲಿ 25 ಮನೆಗಳ ಕಾಮಗಾರಿ ಶೇ.80ರಷ್ಟು ಪೂರ್ಣಗೊಂಡಿದೆ. ಉಳಿದಂತೆ ಮದೆನಾಡು ಗ್ರಾಮದಲ್ಲಿ 45, ಕರ್ಣಂಗೇರಿ 10 ಹಾಗೂ ಮಾದಾಪುರದಲ್ಲಿ 43 ಮನೆಗಳ ಕಾಮಗಾರಿ ಮೇಲ್ಛಾವಣಿ ಹಂತ ತಲಪಿದೆ ಎಂದರು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ್, ಜನ-ಜಾನುವಾರುಗಳಿಗೆ ಕುಡಿಯುವ ನೀರು ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಬೇಕು. ಕುಡಿಯುವ ನೀರಿನ ಸಂಬಂಧ ಸಮಸ್ಯೆಗಳು ಕೇಳಿ ಬಂದಲ್ಲಿ ತಕ್ಷಣವೇ ತಹಶೀಲ್ದಾರರು, ಸಂಬಂಧಪಟ್ಟ ಇಂಜಿನಿಯರ್‍ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹರಿಸಬೇಕು ಎಂದು ಸೂಚಿಸಿದರು. ಯಾವದೇ ಕಾರಣಕ್ಕೂ ಕುಡಿಯುವ ನೀರು ಮತ್ತು ಮೇವು ಕೊರತೆ ಉಂಟಾಗಬಾರದು ಎಂದು ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ, ಪ್ರಥಮ ಹಂತದಲ್ಲಿ 417 ಕುಟುಂಬಗಳನ್ನು ಆಯ್ಕೆ ಮಾಡಲಾಗಿದೆ. ಎರಡನೇ ಹಂತದಲ್ಲಿ 411 ಮನೆಗಳ ಪಟ್ಟಿ ಸಿದ್ಧಪಡಿಸಲಾಗಿದ್ದು, ಒಟ್ಟು 829 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಬಾಕಿ ಇರುವದನ್ನು ಪಟ್ಟಿ ಮಾಡಿ ಮನೆ ನಿರ್ಮಿಸಲಾಗುವದು ಎಂದು ಹೇಳಿದರು. ಸದ್ಯ 829 ಮನೆಗಳನ್ನು ನಿರ್ಮಿಸಿ ತ್ವರಿತವಾಗಿ ಮನೆಗಳ ಹಸ್ತಾಂತರ ಮಾಡಬೇಕಿದೆ. ಈಗಾಗಲೇ ಮಾರ್ಚ್ ಅಂತ್ಯದವರೆಗೆ ಬಾಡಿಗೆ ಭರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕುಶಾಲನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿತ್ತು, ಅದನ್ನು ಸರಿಪಡಿಸಲಾಗಿದೆ. ಹಾಗೆಯೇ ಕೆಲವು ಹಾಡಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಗಮನಕ್ಕೆ ತಂದರು. ಪಂಚಾಯತ್ ಇಂಜಿನಿಯರಿಂಗ್ ವಿಭಾಗ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ, ಸಣ್ಣ ನೀರಾವರಿ ಇತರೆ ಇಲಾಖೆಗಳು ಮೂರನೇ ದರ್ಜೆಯವರಿಂದ ಕಾಮಗಾರಿ ಪರಿಶೀಲನೆ ನೆಪದಲ್ಲಿ ಕಾಲದೂಡದೆ, ಆದಷ್ಟು ತ್ವರಿತವಾಗಿ ಹಣ ಬಳಕೆ ಪ್ರಮಾಣ ಪತ್ರ ನೀಡಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು. ಜಿ.ಪಂ.ಸಿಇಒ ಕೆ.ಲಕ್ಷ್ಮಿಪ್ರಿಯಾ ಟಿ.ಶೆಟ್ಟಿಗೇರಿ ಮತ್ತಿತರ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿತ್ತು ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಲೋಕೋಪಯೋಗಿ ಇಲಾಖೆಯ ಇಇ ಇಬ್ರಾಹಿಂ, ಗ್ರಾಮೀಣ ಕುಡಿಯುವ ನೀರು ವಿಭಾಗದ ಇಂಜಿನಿಯರ್ ರೇವಣ್ಣವರ್, ಜಿ.ಪಂ. ಇಂಜಿನಿಯರ್ ಶ್ರೀಕಂಠಯ್ಯ ಇದ್ದರು.