ಸೋಮವಾರಪೇಟೆ,ಏ.11: ನಿನ್ನೆ ನಡುರಾತ್ರಿ 12.45 ರಿಂದ 2 ಗಂಟೆಯವರೆಗೆ ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ಭಾರೀ ಸದ್ದಿನೊಂದಿಗೆ ಗುಡುಗು ಉಂಟಾಗಿ ಜನತೆ ಬೆಚ್ಚಿಬಿದ್ದರು.

ಆಗಸದಲ್ಲಿ ಭಾರೀ ಪ್ರಮಾಣದ ಸದ್ದಿನೊಂದಿಗೆ ಗುಡುಗು ಕಂಡುಬಂದು ನಡುನಡುವೆ ಸಿಡಿಲಿನ ಆರ್ಭಟವೂ ನಡೆಯಿತು. ಕಣ್‍ಕೋರೈಸುವ ಮಿಂಚಿನೊಂದಿಗೆ ಕರ್ಣಕಠೋರ ಶಬ್ದಗಳ ಗುಡುಗಿಗೆ ಮನೆಯೊಳಗೆ ಮಲಗಿದ್ದವರೂ ಕ್ಷಣಕಾಲ ಭಯದಿಂದ ಮೇಲೆದ್ದರು.

ಸುಮಾರು 1 ಗಂಟೆಗಳ ಕಾಲ ಗುಡುಗು, ಮಿಂಚು, ಸಿಡಿಲಿನ ಆರ್ಭಟ ಉಂಟಾಗಿದ್ದರಿಂದ ಮಕ್ಕಳಾದಿಯಾಗಿ ಮನೆಮಂದಿ ಭಯಾತಂಕಕ್ಕೆ ಒಳಗಾದರು. ಭಾರೀ ಶಬ್ದಗಳು, ಕತ್ತಲಲ್ಲೂ ಪ್ರಖರ ಬೆಳಕು ಕಾಣುವಂತಹ ಮಿಂಚು, ಸಿಡಿಲಿನ ಅಬ್ಬರದಿಂದಾಗಿ ಆತಂಕಕ್ಕೆ ಒಳಗಾದರು.

ವಾತಾವರಣದಲ್ಲಿ ದಿಡೀರ್ ಬದಲಾವಣೆಯೊಂದಿಗೆ ಗಾಳಿಯ ರಭಸವೂ ಜೋರಾಗಿದ್ದರಿಂದ, ಭಾರೀ ಪ್ರಮಾಣದ ಮಳೆಯಾಗುವ ಮುನ್ಸೂಚನೆ ಕಂಡುಬಂತು. ಆದರೆ ಕೆಲಕಾಲ ಅಲ್ಪ ಪ್ರಮಾಣದಲ್ಲಿ ಮಾತ್ರ ಮಳೆ ಸುರಿಯಿತು. ಗುಡುಗು,ಮಿಂಚು, ಸಿಡಿಲಿನ ಸಂದರ್ಭ ವಿದ್ಯುತ್ ಸ್ಥಗಿತಗೊಂಡಿದ್ದರಿಂದ ಯಾವದೇ ಹಾನಿಯುಂಟಾದ ಬಗ್ಗೆ ವರದಿಯಾಗಿಲ್ಲ.