ಕುಶಾಲನಗರ, ಏ 11: ನಂಜರಾಯಪಟ್ಟಣದ ಶ್ರೀ ನಂಜುಂಡೇಶ್ವರ ದೇವಾಲಯದ ವಾರ್ಷಿಕ ಪೂಜೋತ್ಸವ ಕಾರ್ಯಕ್ರಮ ತಾ. 15 ಮತ್ತು 16 ರಂದು ನಡೆಯಲಿದೆ. ತಾ.15 ರಂದು ಸಂಜೆ 5 ಗಂಟೆಯಿಂದ ದಿಂಡಗಾಡು ಬಸವಜ್ಯೋತಿ ಮಠದ ಅಪ್ಪಾಜಿ ಸ್ವಾಮಿಗಳ ಸಾನಿಧ್ಯದಲ್ಲಿ ಗ್ರಾಮದ ಎನ್.ಕೆ.ಪುಟ್ಟಮ್ಮ ಅವರ ಮನೆಯಿಂದ ಕನ್ನಂಬಾಡಮ್ಮ ದೇವರ ಮುಖಸಿರಿಯನ್ನು ವಾದ್ಯಗೋಷ್ಠಿ ಗಳೊಂದಿಗೆ ದೇವಾಲಯಕ್ಕೆ ತಂದ ನಂತರ ದೇವರ ಉತ್ಸವಗಳು ಆರಂಭವಾಗಲಿವೆ. ರಾತ್ರಿ 7 ಗಂಟೆಗೆ ದೇವರಿಗೆ ಅಲಂಕಾರ ಪೂಜೆ, ಗಂಗೆ ಗಣಪತಿ, ಅಗ್ರೋಧಕ ಪೂಜೆ, ಸ್ವಸ್ಥಿವಾಚನಂ ಹಾಗೂ ಬಲಿಪೂಜೆಗಳು ನಡೆಯಲಿವೆ. ರಾತ್ರಿ 9 ಗಂಟೆಗೆ ಮಹಾಮಂಗಳಾರತಿ ಮತ್ತು ಮಹಾಪ್ರಸಾದ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯ ರಾತ್ರಿ 12 ಗಂಟೆಗೆ ದೇವರ ಉತ್ಸವ ಪಲ್ಲಕ್ಕಿ ಅಲಂಕಾರ ನಡೆಯಲಿದೆ.
ತಾ. 16 ರಂದು ಬೆಳಗ್ಗೆ ಕೊಂಡದ ಪೂಜೆ, 8 ಗಂಟೆಗೆ ವಾದ್ಯಮೇಳ, ಅಲಂಕೃತ ದೇವರುಗಳ ಪಲ್ಲಕ್ಕಿಯೊಂದಿಗೆ ಗಂಗಾ ಸ್ನಾನ ಮತ್ತು ಗಂಗಾ ಪೂಜೆ ನೆರವೇರಿಸಿ ಮೆರವಣಿಗೆಯಲ್ಲಿ ವೀರಭದ್ರ ನೃತ್ಯದೊಂದಿಗೆ ಪವಿತ್ರ ಗಂಗಾಜಲವನ್ನು ದೇವಾಲಯಕ್ಕೆ ತರಲಾಗುತ್ತದೆ.
ಕಾರ್ಯಕ್ರಮದಲ್ಲಿ ಅರಸೀಕೆರೆ ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯದಲ್ಲಿ ಧಾರ್ಮಿಕ ಸಭೆ ನಡೆಯಲಿದೆ.