ಮಡಿಕೇರಿ,ಏ. 11: ಪಾಠ ಪ್ರವಚನ ಸೇರಿದಂತೆ ಯಾವದೇ ವಿಚಾರದಲ್ಲಿಯೂ ಕಲಿಕೆಯಲ್ಲಿ ಏಕಾಗ್ರತೆ ಹಾಗೂ ಆಸಕ್ತಿ ಮುಖ್ಯವೆಂದು ಹಿರಿಯರಾದ ಜಿ.ಟಿ. ರಾಘವೇಂದ್ರ ಅವರು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇಲ್ಲಿನ ವಾಂಡರರ್ಸ್ ಕ್ಲಬ್ ವತಿಯಿಂದ ಸಿ.ವಿ. ಶಂಕರ್ ಜ್ಞಾಪಕಾರ್ಥ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರಕ್ಕೆ ಆಗಮಿಸಿ ಮಕ್ಕಳಿಗೆ ಹಿತವಚನ ಹೇಳಿದರು. ಏಕಾಗ್ರತೆ ಸಂಸ್ಕøತ ಪದವಾಗಿದ್ದು, ಏಕ ಅಂದರೆ ಒಂದು, ಅಗ್ರ ಅಂದರೆ ತುದಿ ಎಂಬ ಅರ್ಥ ನೀಡುತ್ತದೆ. ಹಾಗಾಗಿ ಏಕಾಗ್ರತೆ ಅಗತ್ಯ; ಜೊತೆಗೆ ಆಸಕ್ತಿ ಕೂಡ ಇರಬೇಕೆಂದರು. ಜೀವನದಲ್ಲಿ ಗುರಿ ಇರಬೇಕು, ಗುರಿ ನಿಮ್ಮದಾಗಿದ್ದರೆ ನಿಮ್ಮ ಹಿಂದೆ ಗುರು ಇರುತ್ತಾರೆ ಎಂದ ಅವರು; ನಿಮಗಾಗಿ ಈ ಶಿಬಿರದಲ್ಲಿ ಕಲಿಸಿಕೊಡುವ ವಿಚಾರಗಳು, ಯೋಗ, ವ್ಯಾಯಾಮ, ಕ್ರೀಡೆಗಳನ್ನು ಒಂದು ತಿಂಗಳಿಗೆ ಮಾತ್ರ ಸೀಮಿತಗೊಳಿಸದೆ ನಿರಂತರ ಅಭ್ಯಸಿಸಿಕೊಂಡು ಹೋಗಬೇಕೆಂದು ಹೇಳಿದರು. ಈ ಮೈದಾನದಲ್ಲಿ ಆಡಿದವರು ಬಹಳಷ್ಟು ಮಂದಿ ರಾಜ್ಯ, ಅಂತರರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ; ಅವರಗಳಂತೆ ಸಾಧನೆ ಮಾಡುತ್ತಾ ಜಿಲ್ಲೆ ಹಾಗೂ ದೇಶಕ್ಕೆ ಕೀರ್ತಿ ತರುವಂತಾಗಬೇಕೆಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಾಂಡರರ್ಸ್ ಕ್ಲಬ್‍ನ ಪ್ರಮುಖರಾದ ಬಾಬು ಸೋಮಯ್ಯ, ಶಾಂ ಪೂಣಚ್ಚ, ಅಶೋಕ್ ಅಯ್ಯಪ್ಪ, ಎಂ.ಎಸ್, ಮೊಣ್ಣಪ್ಪ, ಬಿ.ಬಿ.ಆನಂದ, ಗಣೇಶ್, ಲಕ್ಷ್ಮಣ್ ಸಿಂಗ್, ಪ್ರಮೀಳ, ಕುಡೆಕಲ್ ಸಂತೋಷ್ ಇನ್ನಿತರರಿದ್ದರು. ದೈಹಿಕ ಶಿಕ್ಷಕ ವೆಂಕಟೇಶ್ ನಿರೂಪಿಸಿ, ವಂದಿಸಿದರು.