ವೀರಾಜಪೇಟೆ, ಏ. 11: ಜಿಲ್ಲೆಯಲ್ಲಾದ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಸೇರಿದಂತೆ ಕೇಂದ್ರದ ಯಾವೊಬ್ಬ ಸಚಿವರುಗಳು ಜಿಲ್ಲೆಗೆ ಆಗಮಿಸದಿರುವದನ್ನು ಪ್ರಬುದ್ಧ ಮತದಾರರು ಅರ್ಥ ಮಾಡಿಕೊಂಡರೆ ಸಾಕು ಎಂದು ಬೆಂಗಳೂರು ಶಾಂತಿನಗರ ಶಾಸಕ ಎಂ.ಎ ಹ್ಯಾರಿಸ್ ಹೇಳಿದರು.
ಮ್ಯೆಸೂರು-ಕೊಡಗು ಲೋಕಸಭಾ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಪರ ವೀರಾಜಪೇಟೆ ಪಟ್ಟಣದಲ್ಲಿ ಮತಯಾಚಿಸಿ ಮಾತನಾಡಿದ ಅವರು, ಜಿಲ್ಲೆಯ ಜನತೆ ವಿದ್ಯಾವಂತರು ಹಾಗೂ ಬುದ್ದಿವಂತರು. ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಿಫಲರಾದ ಸಂಸದರು ಕೇಂದ್ರದಿಂದ ಬಂದ ಅನುದಾನವನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂದು ಆರೋಪಿಸಿದರು.
ಜಿಲ್ಲೆಯ ಜನರು ಕಾಫಿ ಹಾಗೂ ಕರಿಮೆಣಸು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಹೊರ ದೇಶಗಳಿಂದ ಕಾಳುಮೆಣಸು ಹಾಗೂ ಕಾಫಿಯನ್ನು ಆಮದು ಮಾಡಿಕೊಂಡು ಇಲ್ಲಿನ ಅಗತ್ಯ ಕಾಫಿ, ಕರಿಮೆಣಸು ಬೆಳೆಗಳ ಬೆಲೆಯನ್ನು ಇಳಿಸಿ ರೈತರು ಬದುಕಲೇಬಾರದು ಎಂಬ ಸ್ಥಿತಿಗೆ ತಲಪಿಸಿದ್ದಾರೆ ಎಂದು ವ್ಯಾಖ್ಯಾನಿಸಿದರು.
ಮತಯಾಚನೆ ಸಂಧರ್ಭ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್‍ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್, ಕಾಂಗ್ರೆಸ್ ಮುಖಂಡ ಕದ್ದಣಿಯಂಡ ಹರೀಶ್ ಬೋಪಣ್ಣ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ. ಸಲಾಂ, ಜೆಡಿಎಸ್‍ನ ತಾಲೂಕು ಅಧ್ಯಕ್ಷ ಎಸ್.ಹೆಚ್. ಮತೀನ್, ಜಿಲ್ಲಾ ಸೇವಾದಳದ ಉಪಾಧ್ಯಕ್ಷ ಎಸ್.ಎಲ್. ಸ್ಯೆನುದ್ದಿನ್ ನಗರ ಕಾಂಗ್ರೆಸ್ ಅಧ್ಯಕ್ಷ ಜಿ.ಜಿ. ಮೋಹನ್, ಜೆಡಿಎಸ್ ನಗರ ಅಧ್ಯಕ್ಷ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.