ಕುಶಾಲನಗರ, ಏ. 11: ಕಳೆದ 5 ದಿನಗಳಿಂದ ನಾಪತ್ತೆಯಾಗಿದ್ದ ದುಬಾರೆ ಸಾಕಾನೆ ಶಿಬಿರದ ಗೋಪಿಯನ್ನು ಪತ್ತೆಹಚ್ಚಿ ಶಿಬಿರಕ್ಕೆ ತರುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ತಾ. 7 ರಂದು ಮದ ಏರಿದ ಹಿನ್ನೆಲೆಯಲ್ಲಿ ತನ್ನ ಕಾಲಿನ ಸರಪಳಿಯನ್ನು ತುಂಡರಿಸಿ ಸಮೀಪದ ಅರಣ್ಯಕ್ಕೆ ಪರಾರಿಯಾದ ಗೋಪಿಯನ್ನು ಗುರುವಾರ ಸಂಜೆ ವೇಳೆಗೆ ಕಾರ್ಯಾಚರಣೆ ತಂಡ ಪತ್ತೆ ಹಚ್ಚಿದೆ. ಶಿಬಿರದಿಂದ ತೆರಳಿದ ಗೋಪಿ ದುಬಾರೆ ಮೀಸಲು ಅರಣ್ಯದತ್ತ ಸಾಗಿತ್ತು. ದುಬಾರೆ ಸಾಕಾನೆ ಶಿಬಿರದ ಉಸ್ತುವಾರಿ ಉಪ ವಲಯ ಅರಣ್ಯಾಧಿಕಾರಿ ಕನ್ನಂಡ ರಂಜನ್ ನೇತೃತ್ವದಲ್ಲಿ ಮಾವುತ ಅಪ್ಪಯ್ಯ ಮತ್ತು ಸಿಬ್ಬಂದಿಗಳ ತಂಡ 5 ದಿನಗಳಿಂದ ಆನೆಯ ಪತ್ತೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಈ ನಡುವೆ ಶಿಬಿರದಲ್ಲಿದ್ದ ಉಳಿದ ಆನೆಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಪರಿಸ್ಥಿತಿ ತಿಳಿಯಾದ ಹಿನ್ನೆಲೆಯಲ್ಲಿ ಸಾಕಾನೆಗಳನ್ನು ಮತ್ತೆ ಶಿಬಿರಕ್ಕೆ ಕರೆ ತರಲಾಗಿದೆ ಎಂದು ತಿಳಿಸಿರುವ ಉಪ ವಲಯ ಅರಣ್ಯಾಧಿಕಾರಿ ಕನ್ನಂಡ ರಂಜನ್ ಮದವೇರಿದ ಗೋಪಿ ಯಾವದೇ ರೀತಿಯ ಪ್ರತಿರೋಧ ವ್ಯಕ್ತಪಡಿಸಿಲ್ಲ. ಆದರೆ ಮದ ಇಳಿಯಲು ಇನ್ನೂ ಕೆಲವು ದಿನಗಳು ಬೇಕಾಗಬಹುದು. ಮಾವುತ, ಕವಾಡಿಗರು ಸೇರಿ ಗೋಪಿಯ ಕಾಲಿಗೆ ಸರಪಳಿ ಬಿಗಿದು ಪ್ರತ್ಯೇಕವಾಗಿ ಶಿಬಿರದಲ್ಲಿ ಇರಿಸಲಾಗುವದು ಎಂದು ತಿಳಿಸಿದ್ದಾರೆ.