ವೀರಾಜಪೇಟೆ, ಏ. 11: ವೀರಾಜಪೇಟೆ ಸಮೀಪದ ಕಡಂಗ ಜಂಕ್ಷನ್‍ನಿಂದ ಬೆಳ್ಳುಮಾಡು, ಕುಂಜಿಲಗೇರಿ ಪಾರಾಣೆ ಜಂಕ್ಷನ್‍ವರೆಗಿನ ಅಂದಾಜು ಏಳು ಕಿ.ಮೀ. ರಸ್ತೆಯನ್ನು ಸುಮಾರು ರೂ. 7 ಕೋಟಿ ವೆಚ್ಚದಲ್ಲಿ ನಡೆಸಲಾಗುತ್ತಿದೆ. ಆದರೆ ಕಾಮಗಾರಿ ಸೂಕ್ತ ರೀತಿಯಲ್ಲಿ ಆಗದಿರುವ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಈ ರಸ್ತೆಗೆ ಆಗಿನ ಉಸ್ತುವಾರಿ ಸಚಿವ ಸೀತಾರಾಂ ಹಾಗೂ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಕದ್ದಣಿಯಂಡ ಹರೀಶ್ ಬೋಪಣ್ಣ ಆಸಕ್ತಿ ವಹಿಸಿ ಸುಮಾರು ರೂ. 7 ಕೋಟಿ ಅನುದಾನ ಒದಗಿಸಿದ್ದರು. ಈ ರಸ್ತೆ ಕಾಮಗಾರಿ ಸ್ವಲ್ಪಮಟ್ಟಿಗೆ ಗುಣಮಟ್ಟ ಕಾದುಕೊಂಡು ಕೆಲಸ ಮಾಡಬೇಕಿದೆ. ಈ ರಸ್ತೆ ಅತ್ಯಂತ ಕಿರಿದಾಗಿದ್ದು ಇದೀಗ ಅದನ್ನು 5.5 ಮೀ. ವಿಸ್ತರಿಸಿ ಡಾಂಬರೀಕರಣ ಮಾಡಲಾಗುತ್ತಿದೆ. ಇದು ಲೋಕೊಪಯೋಗಿ ರಸ್ತೆಯಾಗಿದ್ದು ಪ್ರಮುಖ ರಸ್ತೆಯೂ ಆಗಿದೆ. ರಸ್ತೆ ತೀರಾ ದುಸ್ಥಿತಿಯಲ್ಲಿದ್ದು ಮರು ಡಾಂಬರೀಕರಣ ಉತ್ತಮ ರೀತಿಯಲ್ಲಿ ಆಗುವಂತೆ ಗುತ್ತಿಗೆದಾರರು ಮತ್ತು ಇಲಾಖೆ ಕಾಳಜಿ ವಹಿಸಬೇಕು. ಯಾವದೇ ಲೋಪವಾಗದಂತೆ ಕಾಮಗಾರಿಯನ್ನು ನಡೆಸಿ ಕೆಲವು ವರ್ಷ ಬಾಳಿಕೆ ಬರುವಂತೆ ನೋಡಿಕೊಳ್ಳಬೇಕಿದೆ. ಕುಂಜಿಲಗೇರಿ ಭಾಗದಲ್ಲಿ ಅಕಾಲಿಕ ಮಳೆಯಿಂದ ಕೆಲಸಕ್ಕೆ ತೊಡಕಾಗಿದೆಯಾದರೂ ಉಳಿದ ಕಡೆ ರಸ್ತೆ ಕೆಲಸ ಸಮರ್ಪಕವಾಗಿ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಈ ರಸ್ತೆಯು ಕೊಡಗಿನ ಭಾಗಮಂಡಲ ಮತ್ತು ಇಗ್ಗುತ್ತಪ್ಪ ದೇವರ ನೆಲೆಗೆ ಸಂಪರ್ಕ ಕಲ್ಪಿಸುವ ಪರ್ಯಾಯ ರಸ್ತೆ ಹೌದು. ಈ ರಸ್ತೆ ಮೂಲಕ ಕೈಕಾಡು ನಾಪೋಕ್ಲು ಮೂಲಕ ಎರಡು ಪುಣ್ಯ ಕ್ಷೇತ್ರಕ್ಕೆ ತಲಪಬಹುದು. ಈ ರಸ್ತೆ ಹತ್ತಿರದ ಹೆಚ್ಚು ತಿರುವು ಏರಿಳಿತ ಇಲ್ಲದ ಸುಗಮ ರಸ್ತೆ ಆದರಿಂದ ಚೆಯ್ಯಂಡಾಣೆ ಕಕ್ಕಬೆ ಮಾರ್ಗಕ್ಕಿಂತ ಇದೇ ಮಾರ್ಗವನ್ನು ಹಲವಾರು ಜನ ಆಯ್ಕೆ ಮಾಡಿಕೊಳ್ಳುತ್ತಾರೆ. ಜೊತೆಗೆ ಪಾರಾಣೆ, ಬಲಮುರಿ, ಮೂರ್ನಾಡು ಮಡಿಕೇರಿಗೆ ಸಹ ಸಂರ್ಪಕ ಕಲ್ಪಿಸುತ್ತದೆ ಈ ಮಾರ್ಗ. ಆದ್ದರಿಂದ ರಸ್ತೆಯ ಗುಣಮಟ್ಟದ ಕಾಮಗಾರಿ ಅತ್ಯಗತ್ಯವಾಗಿದೆ. ರಸ್ತೆ ಕಾಮಗಾರಿ ಅಲ್ಲದೆ ರಸ್ತೆ ಮಳೆಗಾಲದಲ್ಲಿ ಉಳಿಯಲು ಸಮರ್ಪಕವಾದ ಚರಂಡಿಗೆ ತೋಟ ಮಾಲೀಕರು ಸಹಕಾರ ನೀಡಬೇಕಿದೆ. - ರಜಿತ ಕಾರ್ಯಪ್ಪ