ಮಡಿಕೇರಿ, ಏ. 11: ತಲಕಾವೇರಿ ಶ್ರೀ ಅಗಸ್ತ್ಯೇಶ್ವರ ದೇವಾಲಯದ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮವು ಇಂದು ರುದ್ರಹೋಮದಿಂದ ಸಂಪನ್ನಗೊಂಡಿತು. ಇಂದು ಬೆಳಿಗ್ಗೆ 7 ಗಂಟೆಯಿಂದ ರುದ್ರಪಾರಾಯಣ, 10 ಗಂಟೆಯಿಂದ ರುದ್ರಹೋಮ, 12.30ಕ್ಕೆ ರುದ್ರಹೋಮ ಪೂರ್ಣಾ ಹುತಿಯೊಂದಿಗೆ ಸಮಾಪನಗೊಂಡಿತು.ಪೂರ್ಣಾಹುತಿ ವೇಳೆಗೆ ಶ್ರೀ ಮನ್ಮಧ್ವಾಚಾರ್ಯರ ಪರಂಪರೆಯ ಉಡುಪಿಯ ಅಷ್ಟಮಠಗಳಲ್ಲೊಂದಾದ ಕಾಣಿಯೂರು ಪೀಠಾಧಿಪತಿಗಳಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀ ಪಾದರು ಹಾಜರಿದ್ದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಕಾಣಿಯೂರು ಶ್ರೀ ಗಳು ಅನುಗ್ರಹ ಭಾಷಣ ಮಾಡುತ್ತಾ, ಮನಸ್ಸನ್ನು ಪ್ರೇರೇಪಿಸುವ ದೇವತೆ ಶ್ರೀ ರುದ್ರ, ಮನಸ್ಸು ಚೆನ್ನಾಗಿರಬೇಕಾದರೆ ಅಥವಾ ಮನಃಶಾಂತಿಯನ್ನು ಪಡೆಯಬೇಕಾದರೆ ಶ್ರೀ ರುದ್ರನ ಆರಾಧನೆ, ಉಪಾಸನೆಯನ್ನು ಮಾಡಬೇಕು.

ಅಗಸ್ತ್ಯೇಶ್ವರ ಪ್ರತಿಷ್ಠಾಪಿಸಲ್ಪಟ್ಟ ರುದ್ರನ ಅನುಗ್ರಹ ಬೇಕಾದರೆ ಮಂಗಳಮಯನಾದ ರುದ್ರನನ್ನು ಆರಾಧಿಸಿದರೆ ಮಾತ್ರ ಜೀವನದಲ್ಲಿ ಮನಃಶಾಂತಿಯನ್ನು (ಮೊದಲ ಪುಟದಿಂದ) ನೀಡುವದರಲ್ಲಿ ಸಂಶಯವಿಲ್ಲವೆಂದರು. ಅದೇ ರೀತಿ ಅತ್ಯಂತ ಪವಿತ್ರವಾದ ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ತೀರ್ಥ ಸ್ನಾನ ಮಾಡಿದರೆ, ಶರೀರದ ಕಲ್ಮಶವನ್ನು ಮಾತ್ರ ತೆಗೆಯುವದಲ್ಲ ಮನಃಶಾಂತಿ ಕೂಡ ಲಭಿಸುವದು ಎಂದು ಅನುಗ್ರಹ ಭಾಷಣ ಮಾಡಿದರು. ಜೀವಕೋಟಿಗಳಿಗೆ ಬೇಕಾದ ತೀರ್ಥವೇ ಕಾವೇರಿ. ತೀರ್ಥವೆಂದು ಭಾವಿಸುವವರು ತೀರಾ ವಿರಳ. ಭಕ್ತರು ಈ ಕ್ಷೇತ್ರಕ್ಕೆ ಬಂದು ಕೇವಲ ಫೋಟೋ ತೆಗೆಯಲು ಬಂದಂತೆ ವರ್ತಿಸುವದನ್ನು ಬಿಟ್ಟು ಪವಿತ್ರ ತೀರ್ಥ ಕ್ಷೇತ್ರವೆಂದು ಪುಣ್ಯಕ್ಷೇತ್ರವೆಂದು ಪರಿಗಣಿಸವದು ಅಗತ್ಯವಿದೆ ಎಂದು ತಿಳಿಸಿದರು. ಕ್ಷೇತ್ರದ ತಂತ್ರಿಗಳಾದ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಬ್ರಹ್ಮಕಲಶದ ಮಹತ್ವ ಮತ್ತು ಕ್ಷೇತ್ರದ ಆಚಾರ - ವಿಚಾರವನ್ನು ಪಾಲಿಸುವಂತೆ ತಿಳಿಸಿದರು.

ವೇದಿಕೆಯಲ್ಲಿ ದೇವಾಲಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ತಲಕಾವೇರಿ ದೇವಳದ ತಕ್ಕರಾದ ಕೋಡಿ ಮೋಟಯ್ಯ ಮತ್ತು ದೇವಳದ ಮಾಜಿ ವ್ಯವಸ್ಥಾಪಕರಾದ ಸಂಪತ್‍ಕುಮಾರ್ ಹಾಜರಿದ್ದರು. ತಲಕಾವೇರಿ ದೇವಸ್ಥಾನದಲ್ಲಿ ಕಳೆದ 50 ವರ್ಷಗಳಿಂದ ತಕ್ಕರಾಗಿದ್ದ ಕೋಡಿ ಮಾದಪ್ಪ ಹಾಗೂ ವ್ಯವಸ್ಥಾಪಕರಾಗಿ ಇತ್ತೀಚೆಗೆ ನಿವೃತ್ತಿ ಹೊಂದಿರುವ ಸಂಪತ್‍ಕುಮಾರ್ ಅವರುಗಳಿಗೆ ಸನ್ಮಾನವನ್ನು ಕಾಣಿಯೂರು ಶ್ರೀ ಪಾದರು ಮಾಡಿದರು.

ಕಾರ್ಯಕ್ರಮದಲ್ಲಿ ತಲಕಾವೇರಿ ಯ ಹಿರಿಯ ಅರ್ಚಕರಾದ ನಾರಾಯಣ ಆಚಾರ್, ರಾಜೇಶ್ ಆಚಾರ್ ಹಾಗೂ ಮಾಜಿ ಸಚಿವೆ ಸುಮಾವಸಂತ್, ಮಂಡೀರ ದೇವಿ ಪೂಣಚ್ಚ, ಮನು ಮುತ್ತಪ್ಪ, ರವೀಂದ್ರ ಹೆಬ್ಬಾರ್, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಕೆ.ಟಿ. ರಮೇಶ್, ಡಾ. ಕಾವೇರಪ್ಪ, ಅಣ್ಣಯ್ಯ, ಉದಿಯಂಡ ಸುಭಾಷ್, ನಿಡ್ಯಮಲೆ ಮೀನಾಕ್ಷಿ, ರವಿಕುಮಾರ್, ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್‍ಕುಮಾರ್, ಪಾರುಪತ್ಯೆಗಾರ ಪೊನ್ನಣ್ಣ ಹಾಜರಿದ್ದರು. ಬಳಿಕ ಅನ್ನಸಂತರ್ಪಣೆ ನಡೆಯಿತು.