ಮಡಿಕೇರಿ, ಏ.11: ಭಾರತದ 17ನೇ ಲೋಕಸಭೆಗೆ ಆಯ್ಕೆ ಪ್ರಕ್ರಿಯೆಯು ಇಂದು ಆರಂಭಗೊಂಡಿದೆ. ದೇಶದ 20 ರಾಜ್ಯಗಳಲ್ಲಿ ಮೊದಲನೆಯ ಸುತ್ತಿನ ಮತದಾನ ಇಂದು ನಡೆದಿದೆ. ಮುಂದಿನ ಕೇವಲ ಏಳು ದಿನಗಳಲ್ಲಿ ನಮ್ಮ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಸೇರಿದಂತೆ ಕರ್ನಾಟಕದ ಇತರ 13 ಕ್ಷೇತ್ರಗಳಲ್ಲಿ ತಾ. 18ರಂದು ಮತದಾನಕ್ಕೆ ದಿನಗಳು ಎಣಿಕೆ ಆರಂಭಗೊಂಡಿವೆ. ಉಳಿದ 14 ಕ್ಷೇತ್ರಗಳಿಗೆ ತಾ. 23ರಂದು ಚುನಾವಣೆ ನಡೆಯಲಿದೆ.ಇಂದು ಆಂಧ್ರಪ್ರದೇಶ, ಅರುಣಾಚಲ, ಅಸ್ಸಾಂ, ಬಿಹಾರ, ಚತ್ತಿಸ್‍ಘಡ್, ಜಮ್ಮು ಮತ್ತು ಕಾಶ್ಮೀರ, ಲಕ್ಷದ್ವೀಪ, ಮಹರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಂ, ನಾಗಲ್ಯಾಂಡ್, ಒಡಿಸ್ಸಾ, ಸಿಕ್ಕಿಂ, ತೆಲಂಗಾಣ, ತ್ರಿಪುರ, ಉತ್ತರ ಪ್ರದೇಶ, ಉತ್ತರಖಂಡ, ಪಶ್ಚಿಮ ಬಂಗಾಳಗಳಲ್ಲಿ ಮತದಾನ ನಡೆದಿದೆ.ಈಗಾಗಲೇ ಚುನಾವಣಾ ಆಯೋಗದ ಘೋಷಣೆಯಂತೆ ತಾ. 18ರಂದು ದ್ವಿತೀಯ ಹಂತದಲ್ಲಿ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ನಮ್ಮ ಕೊಡಗು - ಮೈಸೂರು ಕ್ಷೇತ್ರಕ್ಕೂ ಈ ದಿನವೇ ಮತದಾನ ಪ್ರಕ್ರಿಯೆ ಏರ್ಪಟ್ಟಿದೆ. ತಾ. 23ರಂದು ಕರ್ನಾಟಕದ ಮಿಕ್ಕ 14 ಕ್ಷೇತ್ರಗಳೊಂದಿಗೆ ದ್ವಿತೀಯ ಹಾಗೂ ತೃತೀಯ ಹಂತದಲ್ಲಿ ರಾಜ್ಯದ 28 ಕ್ಷೇತ್ರಗಳ ಚುನಾವಣೆ ಅಂತಿಮಗೊಳ್ಳಲಿದೆ.ಉಳಿದಂತೆ ದೇಶದ ಇತರೆಡೆಗಳಲ್ಲಿ ನಾಲ್ಕನೇ ಹಂತದಲ್ಲಿ ತಾ. 29ರಂದು ಚುನಾವಣೆ ಜರುಗಲಿದ್ದು, ಮೇ 6ರಂದು ಐದನೇ ಹಂತದಲ್ಲಿ ಭಾರತದ ಇತರ ಕ್ಷೇತ್ರಗಳಿಗೆ ಮತದಾನ ಏರ್ಪಟ್ಟಿದೆ. ಮೇ 12 ರಂದು ಇನ್ನುಳಿದ ಕ್ಷೇತ್ರಗಳಿಗೆ ಆರನೆಯ ಹಂತದ ಮತದಾನವಿದೆ. ಕಡೆಯದಾಗಿ ದೇಶದಲ್ಲಿ ಮಿಕ್ಕೆಲ್ಲಾ ಕ್ಷೇತ್ರಗಳಿಗೆ ಮೇ. 19 ರಂದು ಏಳನೆಯ ಹಂತದಲ್ಲಿ ಅಂತಿಮ ಸುತ್ತು ಮತದಾನ ನಡೆಯಲಿದ್ದು, ಮೇ 23ರಂದು ಅಭ್ಯರ್ಥಿಗಳ ಭವಿಷ್ಯ ಹೊರ ಬೀಳಲಿದೆ.ಮತದಾನದಂದು ಹಿಂಸೆ : ಈ ಬಾರಿಯ ಲೋಕಸಭಾ ಚುನಾವಣೆಯು ಸಾಕಷ್ಟು ಅಚ್ಚರಿಯ ಸಂಗತಿಗಳಿಗೆ ಕಾರಣವಾಗಿದೆ. ಮೊದಲನೆ ಹಂತದ ಮತದಾನ ದಿನವೇ ಆಂಧ್ರದಲ್ಲಿ ಹಿಂಸಾಚಾರದೊಂದಿಗೆ ಹತ್ಯೆ ನಡೆದಿದ್ದು, ಸ್ವತಃ ಆಂಧ್ರ ವಿಧಾನಸಭಾ ಅಧ್ಯಕ್ಷರು ಮತದಾನ ಮಾಡುವ ವೇಳೆ ಘರ್ಷಣೆಯಿಂದ ಘಾಸಿಗೊಂಡಿರುವ ಸನ್ನಿವೇಶ ಎದುರಾಗಿದೆ. ಒಟ್ಟಿನಲ್ಲಿ ಇಂದು ದೇಶದ 20 ರಾಜ್ಯಗಳಲ್ಲಿ ಮೊದಲನೆಯ ಹಂತದ ಮತದಾನ ಆರಂಭಗೊಂಡ ಬೆನ್ನಲ್ಲೇ ರಾಜಕೀಯ ರಂಗು ತೀವ್ರಗೊಂಡು, ಅಭ್ಯರ್ಥಿಗಳ ಎದೆ ಬಡಿತಕ್ಕೆ ಕಾರಣವಾಗಿದ್ದರೆ, ರಾಷ್ಟ್ರದ ಭವಿಷ್ಯ ಜನಸಾಮಾನ್ಯದ ಮುಂದಿನ ಬದುಕು, ರಾಜಕಾರಣಿಗಳ ಅಬ್ಬರದ ಮಾತುಗಳಿಂದ ಗಂಭೀರ ಚರ್ಚೆಯ ವಾತಾವರಣ ಸೃಷ್ಟಿಯಾಗಿದೆ. ಮುಂದಿನ ಮೇ 19ರ ತನಕ ಇಂಥ ರಾಜಕೀಯ ಮೇಲಾಟ ಎಗ್ಗಿಲ್ಲದೆ ಸಾಗಲಿದ್ದು, ಅಂತಿಮವಾಗಿ ಮೇ 23ರಂದು ಮತ ಪೆಟ್ಟಿಗೆಯಲ್ಲಿ ಹೊರಬರಲಿರುವ ರಹಸ್ಯ ಲೆಕ್ಕಾಚಾರವು; ಎಲ್ಲ ರಾಜಕೀಯ ಪಕ್ಷಗಳ ಭವಿಷ್ಯವನ್ನು ಹೊರ ಹಾಕಲಿದೆ. ಆ ಮೂಲಕ 17ನೇ ಲೋಕಸಭೆಯ ಕೌತುಕಕ್ಕೆ ತೆರೆ ಬೀಳಲಿದೆ.