ಸೋಮವಾರಪೇಟೆ, ಏ. 10: ಸಮೀಪದ ಗೌಡಳ್ಳಿ ಹಿಂದೂ ಗೆಳೆಯರ ಬಳಗದ ಆಶ್ರಯದಲ್ಲಿ, ಗೌಡಳ್ಳಿಯ ಬಿಜಿಎಸ್ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಹಿಂದೂ ಕಪ್ ಮುಕ್ತ ಫುಟ್ಬಾಲ್ ಪಂದ್ಯಾವಳಿಯಲ್ಲಿ ವಿದೇಶೀ ಆಟಗಾರರನ್ನು ಒಳಗೊಂಡಿದ್ದ ಹೆಗ್ಗುಳದ ಸೋಮು ಫ್ರೆಂಡ್ಸ್ ತಂಡ ಪ್ರಥಮ ಸ್ಥಾನ ಗಳಿಸುವ ಮೂಲಕ ರೂ. 1 ಲಕ್ಷ ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಕುತೂಹಲಕಾರಿ ಫೈನಲ್ ಪಂದ್ಯದಲ್ಲಿ ಕೂಗೂರು ಸ್ಟನ್ನರ್ಸ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವ ಮೂಲಕ ರೂ. 50 ಸಾವಿರ ನಗದು ಹಾಗೂ ಟ್ರೋಫಿಗೆ ಭಾಜನವಾಯಿತು.
ಸ್ಥಳೀಯ ಫುಟ್ಬಾಲ್ ಪ್ರೇಮಿಗಳು ಹೊರಭಾಗದಿಂದ ಆಟಗಾರರನ್ನು ಕರೆಸಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ನೈಜೀರಿಯಾ, ಐವರಿಕೋಸ್ಟ್‍ನ ಆಟಗಾರರು ಮೈದಾನದಲ್ಲಿ ಮಿಂಚಿನ ಆಟ ಪ್ರದರ್ಶಿಸುವ ಮೂಲಕ ಫುಟ್ಬಾಲ್ ಪ್ರೇಮಿಗಳನ್ನು ರಂಜಿಸಿದರು. ಗೆಳೆಯರ ಬಳಗದ ಅಧ್ಯಕ್ಷ ಪ್ರಸನ್ನ, ಕಾರ್ಯದರ್ಶಿ ಅಜ್ಜಳ್ಳಿ ನವೀನ್, ಖಜಾಂಚಿ ಜಿತೇಂದ್ರ, ಸದಸ್ಯರಾದ ಜಿ.ಪಿ. ಸುನಿಲ್, ಜಿ.ಆರ್. ಕೇಶವ ಸೇರಿದಂತೆ ಇತರರು ಉಪಸ್ಥಿತರಿದ್ದು, ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಅಂತರಾಷ್ಟ್ರೀಯ ತೀರ್ಪುಗಾರ ಸೆಂದಿಲ್‍ವಾಲ್, ಅಜೀಶ್, ಕರಣ್ ಅವರುಗಳು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಮರದಿಂದ ಬಿದ್ದು ಕಿಡ್ನಿ ಸಮಸ್ಯೆ ಎದುರಿಸುತ್ತಿರುವ ಬಿಜಿಎಸ್ ಶಾಲೆಯ ವಿದ್ಯಾರ್ಥಿ, ಬಳಗುಂದದ ಕೀರ್ತಿ ಅವರಿಗೆ ಕಾರ್ಯಕ್ರಮದಲ್ಲಿ ಪರಿಹಾರ ಧನ ವಿತರಿಸಲಾಯಿತು. ಇದರೊಂದಿಗೆ ಗೌಡಳ್ಳಿ ಸ.ಪ್ರಾ. ಶಾಲೆಯ 6ನೇ ತರಗತಿ ವಿದ್ಯಾರ್ಥಿ ವಿನೋದ್‍ಕುಮಾರ್, ಪ್ರೌಢಶಾಲೆಯ ಎಂ.ಎ. ಪ್ರಜೀತ್ ಅವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.