ಕುಶಾಲನಗರ, ಏ. 10: ಗ್ರಾಮಗಳಲ್ಲಿರುವ ಕೆರೆಗಳ ಅಭಿವೃದ್ಧಿಗೆ ಜನರ ಸಹಭಾಗಿತ್ವ ಅಗತ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕ ಎ. ಯೋಗೀಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೋಮವಾರಪೇಟೆ ತಾಲೂಕಿನ ಗಣಗೂರು ಗ್ರಾ.ಪಂ. ವ್ಯಾಪ್ತಿಯ ನಾಗಾವಾರ ಗ್ರಾಮದಲ್ಲಿ ಕ್ಷೇತ್ರದ ವತಿಯಿಂದ ಕೈಗೊಂಡಿರುವ ಕೆರೆ ಸಂಜೀವಿನಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಕೆರೆ-ಕಟ್ಟೆಗಳ ಅಭಿವೃದ್ಧಿ ಮೂಲಕ ಅಂತರ್ಜಲ ವೃದ್ಧಿಸಬಹುದು. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಕ್ಷೇತ್ರದ ವತಿಯಿಂದ ಸುಮಾರು 150 ಕೆರೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಕೆರೆಯಿಂದ ತೆರವುಗೊಳಿಸುವ ಹೂಳನ್ನು ರೈತರ ಹೊಲ-ಗದ್ದೆಗಳಿಗೆ ಬಳಸುವ ಮೂಲಕ ಉತ್ತಮ ಫಸಲು ಪಡೆಯಲು ಸಾಧ್ಯ ಎಂದ ಯೋಗೀಶ್, ನಮ್ಮೂರು ನಮ್ಮ ಕೆರೆ ಯೋಜನೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು.

ತಾ. 30 ರೊಳಗೆ ನಾಗಾವಾರ ಕೆರೆಯ ಕಾಮಗಾರಿ ಪೂರ್ಣಗೊಳಿಸ ಲಾಗುವದು ಎಂದು ಮಾಹಿತಿ ನೀಡಿದರು. ಈ ಸಂದರ್ಭ ಮಾಹಿತಿ ನೀಡಿದ ಗಣಗೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಕಾವೇರಿ, ಗ್ರಾಮಗಳಲ್ಲಿ ಕೆರೆ, ಕಟ್ಟೆಗಳ ಒತ್ತುವರಿ ಮಾಡಿರುವದನ್ನು ಸ್ವಯಂ ಪ್ರೇರಿತರಾಗಿ ತೆರವುಗೊಳಿಸಿದಲ್ಲಿ ಯೋಜನೆ ಯಶಸ್ವಿಯಾಗಲು ಸಾಧ್ಯ ಎಂದರು.

ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಎಂ.ಎನ್. ಚಂದ್ರಮೋಹನ್ ಮಾತನಾಡಿ, ಜಲಮೂಲಗಳ ಸಂರಕ್ಷಣೆ ಮೂಲಕ ಕೆರೆ-ಕಟ್ಟೆಗಳಲ್ಲಿ ನೀರಿನ ಸಂಗ್ರಹದ ಉಳಿವು ಸಾಧ್ಯ ಎಂದರು. ಗ್ರಾಮದ ಹಿರಿಯರಾದ ನಂಜಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಪ್ರಮುಖ ರಾದ ಧರ್ಮಪ್ಪ ಉದ್ಘಾಟಿಸಿದರು.

ಎರಪಾರೆ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ಎನ್. ರೇವಣ್ಣ, ಯೋಜನೆಯ ಮೇಲ್ವಿಚಾರಕ ವಿನೋದ್, ಕೃಷಿ ಮೇಲ್ವಿಚಾರಕಿ ಗೀತಾ, ಸೇವಾ ಪ್ರತಿನಿಧಿಗಳು, ಕೆರೆ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.