ಸುಂಟಿಕೊಪ್ಪ, ಏ. 9: ರಾಷ್ಟ್ರೀಯ ಪಕ್ಷವಾದ ಭಾರತೀಯ ಜನತಾ ಪಾರ್ಟಿಯವರು ಲೋಕಸಭಾ ಚುನಾವಣೆಯಲ್ಲಿ ಕಮಲದ ಚಿಹ್ನೆಗೆ ಮತ ನೀಡಿ ಎಂದು ಹೇಳದೆ ನರೇಂದ್ರ ಮೋದಿಗೆ ಮತ ಹಾಕಿ ಎಂದು ಪ್ರಚಾರ ಮಾಡುವ ಮೂಲಕ ಜನತಂತ್ರ ವ್ಯವಸ್ಥೆಗೆ ಅಪಮಾನ ಮಾಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡ ಟಿ.ಪಿ. ರಮೇಶ್ ಹೇಳಿದರು.
ಇಲ್ಲಿನ ಬಸ್ ನಿಲ್ದಾಣದ ತಂಗುದಾಣದಲ್ಲಿ ಕಾಂಗ್ರೆಸ್ ಪಕ್ಷದ ವಾಹನ ಪ್ರಚಾರ ಜಾಥಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ನಿರುದ್ಯೋಗ ಸಮಸ್ಯೆ ಉಲ್ಬಣಕ್ಕೆ, ರೈತರ, ಬೆಳೆಗಾರ, ಕಾರ್ಮಿಕರ ಹಿತಕಾಪಾಡದ ನರೇಂದ್ರ ಮೋದಿ ಸರಕಾರ ಸುಳ್ಳು ಪ್ರಚಾರದಿಂದ ಜನರನ್ನು ಮರಳು ಮಾಡುವದಲ್ಲದೆ ಕಾಲಹರಣ ಮಾಡಿದೆ ಎಂದರು. ಸುಂಟಿಕೊಪ್ಪ ಕಾಂಗ್ರೆಸ್ ಮುಖಂಡ ಎಂ.ಎ. ವಸಂತ ಮಾತನಾಡಿ, ಭಾರತ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಕಾಂಗ್ರೆಸ್ ಆಗಿದೆ. ಕಾಂಗ್ರೆಸ್ ಆಳ್ವಿಕೆಯಿಂದ ಈ ದೇಶದ ಎಲ್ಲಾ ವರ್ಗದವರ ಅಭಿವೃದ್ಧಿ ಕಂಡಿದೆ. ಜವಾಹರ್ ಲಾಲ್ ನೆಹರೂ, ಲಾಲ್ ಬಹುದ್ದೂರ್ ಶಾಸ್ತ್ರೀ, ಇಂದಿರಾ ಗಾಂಧೀಜಿ ಅವರ ಬಿಗಿ ಆಡಳಿತದಿಂದ ದೇಶ ಉನ್ನತೀಕರಣವಾಗಿದೆ ಎಂದರು. ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಮಂಜುನಾಥ್ ನಾಯಕ್, ಬಾಲಚಂದ್ರ ನಾಯಕ್, ಪಿ.ಎಫ್.ಸಬಾಸ್ಟೀನ್ ಮಾತನಾಡಿದರು. ಸುಂಟಿಕೊಪ್ಪ ಗ್ರಾ.ಪಂ. ಸದಸ್ಯ ರಜಾಕ್, ಶಿವಮ್ಮ ಮಹೇಶ್, ಜಿಲ್ಲಾ ವಾಹನ ಚಾಲಕರ, ಕಾರ್ಮಿಕ ಸಂಘದ ಮಾಜಿ ಅಧ್ಯಕ್ಷ ಅಣ್ಣಾ ಶರೀಫ್, ಹಿಮಾಕರ್, ಹನೀಫ್ ಸಂಪಾಜೆ, ಮಾದಾಪುರ ಗ್ರಾ.ಪಂ. ಸದಸ್ಯ ಸೀದಿ ಇಬ್ರಾಹಿಂ ಉಪಸ್ಥಿತರಿದ್ದರು.