ಮಡಿಕೇರಿ, ಏ. 9: ಸೋಮವಾರಪೇಟೆಯಲ್ಲಿ ಜೆಡಿಎಸ್ ಮುಖಂಡ ಬಿ.ಎ. ಜೀವಿಜಯ ಆಯೋಜಿಸಿದ್ದ ಬೆಂಬಲಿಗರ ಸಭೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ವಿಜಯಶಂಕರ್ ಅವರನ್ನು ಬೆಂಬಲಿಸುವ ನಿರ್ಣಯ ಕೈಗೊಳ್ಳಲಾಯಿತು.

ಸೋಮವಾರಪೇಟೆಯಲ್ಲಿ ಆಯೋಜಿತ ಜೀವಿಜಯ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಸಮ್ಮಿಶ್ರ ರಾಜಕಾರಣ ಭಾರತದ ಹೊಸ ರಾಜಕೀಯವಾಗಿದ್ದು, ಒಗ್ಗಟ್ಟು, ಜಾತ್ಯತೀತ ಸ್ವರೂಪ, ಸಂವಿಧಾನಾತ್ಮಕ ರಕ್ಷಣೆಯಿಂದಾಗಿ ಈ ಮೈತ್ರಿ ಬಲಗೊಳ್ಳುತ್ತದೆ ಎಂದು ಹೇಳಿದರು.

ಜೆಡಿಎಸ್ ಮುಖಂಡ ಬಿ.ಎ. ಜೀವಿಜಯ, ಈ ಬಾರಿಯ ಲೋಕಸಭಾ ಚುನಾವಣೆ ಯಾವದೇ ವ್ಯಕ್ತಿ ಅಥವಾ ಪಕ್ಷಕ್ಕೆ ಸಂಬಂಧಿಸದೆ ಇಡೀ ದೇಶದ ಸಂವಿಧಾನ ರಕ್ಷಣೆಯ ಉದ್ದೇಶದ ಚುನಾವಣೆಯಾಗಿದ್ದು, ಭಾರತದಲ್ಲಿ ಪ್ರಜಾಪ್ರಭುತ್ವ ರಕ್ಷಣೆಯಾಗಬೇಕಾದಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರದಿಂದ ತೊಲಗಬೇಕೆಂದು ಹೇಳಿದರು.

ದೇಶದಲ್ಲಿ ವ್ಯಕ್ತಿಗಳು, ಪಕ್ಷಗಳು ಬದಲಾಗುತ್ತಲೇ ಇರುತ್ತವೆ. ಆದರೆ ಪ್ರಜಾಪ್ರಭುತ್ವ ಮಾತ್ರ ಸದಾ ಉಳಿಯಬೇಕಾಗುತ್ತದೆ ಎಂದು ಹೇಳಿದ ಜೀವಿಜಯ, ಯಾರು ದೇಶದ ಪ್ರಧಾನಿಯಾಗುತ್ತಾರೆ ಎಂಬದಕ್ಕಿಂತ ಈಗಿನ ಕೇಂದ್ರ ಸರ್ಕಾರ ಬದಲಾಗಬೇಕು. ಹೊಸದಿಗಂತದತ್ತ ನಾವು ಸಾಗಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಹೆಚ್. ವಿಜಯಶಂಕರ್ ಮಾತನಾಡಿ, ಹೇಗೆ ನಮಗೆಲ್ಲಾ ಜೆಡಿಎಸ್ ಬೇಕಾಗಿದೆಯೋ ಹಾಗೇ ಜೆಡಿಎಸ್ ಕಟ್ಟಿದ ಜೀವಿಜಯ ಕೂಡ ಬೇಕು ಎಂದರಲ್ಲದೆ, ಜೀವಿಜಯ ವ್ಯಕ್ತಿ ಮಾತ್ರವಾಗಿರದೇ ಪ್ರಬಲ ಶಕ್ತಿ ಎಂದು ಶ್ಲಾಘಿಸಿದರು.

ಪಿರಿಯಾಪಟ್ಟಣದ ಮಾಜಿ ಶಾಸಕ ಕೆ. ವೆಂಕಟೇಶ್ ಮಾತನಾಡಿ, ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಲು ಎಲ್ಲರೂ ಒಗ್ಗಟ್ಟಾಗಿ ಹೋಗುವದು ಅತೀ ಮುಖ್ಯವೆಂದರು.

ಕೆಪಿಸಿಸಿ ವೀಕ್ಷಕ ವೆಂಕಪ್ಪ ಗೌಡ ಮಾತನಾಡಿ, ಕಾಂಗ್ರೆಸ್‍ನವರು ಗಂಡಿನ ಕಡೆಯವರಂತೆ ಜೆಡಿಎಸ್ ಪಕ್ಷದ ಆತಿಥ್ಯ ಸ್ವೀಕರಿಸಲು ಬಂದಿದ್ದೇವೆ. ಚುನಾವಣೆ ನಂತರವೂ ಎರಡೂ ಪಕ್ಷಗಳು ಒಗ್ಗಟ್ಟಿನಿಂದ ಕ್ಷೇತ್ರದ ಪ್ರಗತಿಗೆ ಶ್ರಮಿಸುವಂತೆ ಕರೆ ನೀಡಿದರು.

ಸಭೆಯಲ್ಲಿ ವಿಧಾನ ಪರಿಷತ್ ಶಾಸಕಿ ವೀಣಾ ಅಚ್ಚಯ್ಯ, ಮಾಜಿ ಸಚಿವ ನಭಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್‍ಕುಮಾರ್, ಮುಖಂಡರಾದ ಹೆಚ್.ಆರ್. ಸುರೇಶ್, ಲೋಕೇಶ್‍ಕುಮಾರ್, ಯಾಕೂಬ್, ಕೆಪಿಸಿಸಿ ಸದಸ್ಯ ಜೋಸೆಫ್ ಸ್ಯಾಮ್, ಪ್ರಮುಖರಾದ ಸಂಜಯ್ ಜೀವಿಜಯ, ಡಾ. ಮನೋಜ್ ಬೋಪಯ್ಯ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಪಿ. ಚಂದ್ರಕಲಾ, ಸುನೀತಾ ಮಂಜುನಾಥ್, ಕುಮುದಾ ಧರ್ಮಪ್ಪ, ಪಿ.ಎಂ. ಲತೀಫ್, ಕಾಂಗ್ರೆಸ್ ಮುಖಂಡ ಅಪ್ರು ರವೀಂದ್ರ, ಮನು ಮೇದಪ್ಪ, ಜೆಡಿಎಸ್‍ನ ಭರತ್ ಕುಮಾರ್, ಎಸ್.ಎಂ. ಡಿಸಿಲ್ವ, ಕಾರ್ಮಾಡು ಸುಬ್ಬಣ್ಣ, ಮನು ಮೇದಪ್ಪ, ಹೆಬ್ಬಾಲೆ ನಾಗೇಶ್, ಅನಿಲ್‍ಕುಮಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.