ಮಡಿಕೇರಿ, ಏ. 9: ನಗರದ ಕೋಟೆ ಹಳೇ ವಿಧಾನ ಸಭಾಂಗಣ ದಲ್ಲಿ ಖಜಾನೆ ಇಲಾಖೆ ವತಿಯಿಂದ ಜಿ.ಪಂ. ವ್ಯಾಪ್ತಿಯ ಇಲಾಖೆಯ ಮುಖ್ಯಸ್ಥರೊಂದಿಗೆ ಖಜಾನೆ 2 ತಂತ್ರಾಂಶದ ಬಳಕೆ ಮತ್ತು ಕಾರ್ಯ ಚಟುವಟಿಕೆಗಳ ಬಗ್ಗೆ ತರಬೇತಿ ಕಾರ್ಯಾಗಾರ ನಡೆಯಿತು.

ಕಾರ್ಯಾಗಾರದಲ್ಲಿ ಜಿಲ್ಲಾಮಟ್ಟದ ಬಟವಾಡೆ ಅಧಿಕಾರಿಗಳು ಖಜಾನೆ 2 ತಂತ್ರಾಂಶದಲ್ಲಿ ತಮ್ಮ ವ್ಯಾಪ್ತಿಗೆ ಒಳಪಡುವ ಕೆಳಹಂತದ ಕಚೇರಿಗಳಿಗೆ ಅನುದಾನ, ವರ್ಗಾವಣೆ, ಸಿಬ್ಬಂದಿ ವೇತನ, ಅರ್ಹ ಫಲಾನುಭವಿಗಳಿಗೆ ಸರ್ಕಾರದ ನಗದು ರೂಪದ ಪ್ರೋತ್ಸಾಹಧನ, ವರ್ಗಾವಣೆ ಹಾಗೂ ಮತ್ತ್ತಿತರ ಕಚೇರಿ ನಿರ್ವಹಣೆಗೆ ಸಂಬಂಧಿಸಿದ ಬಿಲ್ಲುಗಳ ತಯಾರಿಕೆ ಕುರಿತು ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಯಿತು.

ಜಿ.ಪಂ. ಹಾಗೂ ತಾ.ಪಂ. ಕಚೇರಿಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಖಜಾನೆ 2 ತಂತ್ರಾಂಶದಲ್ಲಿ ಕಚೇರಿಯ ಹಣಕಾಸು ವಿಷಯಕ್ಕೆ ಸಂಬಂಧಿಸಿದ ಎಲ್ಲಾ ಬಿಲ್ಲುಗಳ ನಿರ್ವಹಣೆ, ಫಲಾನುಭವಿಗಳಿಗೆ ಹಣ ವರ್ಗಾವಣೆ ಮತ್ತ್ತಿತರ ಹಣಕಾಸು ವಹಿವಾಟು ಮಾಡಬೇಕಿದ್ದು, ಆ ನಿಟ್ಟಿನಲ್ಲಿ ಖಜಾನೆ 2 ತಂತ್ರಾಂಶ ಅತ್ಯಂತ ಸರಳವಾಗಿದ್ದು, ಸಮಯ ಉಳಿತಾಯ ಮತ್ತು ಪಾರದರ್ಶಕ ವಿಧಾನಗಳ ಮೂಲಕ ಕಚೇರಿ ಕೆಲಸಗಳು ಕಾಲ ವಿಳಂಭವಾಗ ದಂತೆ ನಡೆಯಲು ಸಹಕಾರಿಯಾಗಿದೆ ಎಂದು ಜಿಲ್ಲಾ ಖಜಾನಾಧಿಕಾರಿ ಸತೀಶ್ ತಿಳಿಸಿದರು. ಜಿಲ್ಲಾ ಖಜಾನೆಯ ಮುಖ್ಯ ಲೆಕ್ಕಿಗರಾದ ಶ್ಯಾಂಸುಂದರ್ ಅವರು ಖಜಾನೆ-2 ಸಂಬಂಧಿಸಿದಂತೆ ಮಾಹಿತಿ ನೀಡಿದರು.