ಮಡಿಕೇರಿ, ಏ. 9: ಕೊಡವ ಹೊಸ ವರ್ಷ ‘ಎಡಮ್ಯಾರ್’ ಪ್ರಯುಕ್ತ ಸಿ.ಎನ್.ಸಿ. ಆಶ್ರಯದಲ್ಲಿ ತಾ. 14 ರಂದು ಸಂಜೆ 6.30 ಗಂಟೆಗೆ ಗೋಣಿಕೊಪ್ಪದಲ್ಲಿ 22ನೇ ವರ್ಷದ ಸಾರ್ವತ್ರಿಕ ಬೃಹತ್ ಪಂಜಿನ ಮೆರವಣಿಗೆ ‘ಪೊಂಬೊಳಕ್’ ಮೆರವಣಿಗೆ ನಡೆಯಲಿದೆ.
ಕೊಡವ ಪಂಚಾಂಗದ ಎಡಮ್ಯಾರ್ ಸೌರಮಾನ ಯುಗಾದಿ ಚಂದ್ರಾಂದಿಯು ಕೊಡವರ ಹೊಸ ವರ್ಷ ಭಿತ್ತರಿಸುವ ಪವಿತ್ರ ಉತ್ಸವವಾಗಿದ್ದು, ಇದಕ್ಕೆ ವಿಶೇಷವಾದಂತಹ ಮಹತ್ವ ನೀಡಲಾಗಿರುವದನ್ನು ಕೊಡವ ಜನಪದೀಯ ಚರಿತ್ರೆ ಮತ್ತು ಕಾವ್ಯಗಳಲ್ಲಿ ಕಾಣಬಹುದೆಂದು ಸಿ.ಎನ್.ಸಿ. ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.
ತಾ. 14 ರಂದು ಬೆಳಿಗ್ಗೆ 6.30 ಗಂಟೆಗೆ ಚಿಕ್ಕಬೆಟ್ಟಗೇರಿ ಗ್ರಾಮದಲ್ಲಿರುವ ನಂದಿನೆರವಂಡ ಉತ್ತಪ್ಪ ಅವರ ಭತ್ತದ ಗದ್ದೆಯಲ್ಲಿ ಹೊಸ ವರ್ಷದ ಪ್ರಯುಕ್ತ ಜೋಡೆತ್ತಿನ ಮೂಲಕ ಭೂಮಿ ಉಳುಮೆ ಕಾರ್ಯವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಗು ತ್ತದೆಂದು ತಿಳಿಸಿದ್ದಾರೆ. ಕೊಡವ ಹೊಸ ವರ್ಷ ಈ ಎಡಮ್ಯಾರ್ ಹಬ್ಬ ವರ್ಷದ 6 ಮಾಸಗಳಲ್ಲಿ ಅತ್ಯಂತ ವರ್ಷರಂಜಿತ ಮತ್ತು ವಿಶೇಷವಾದ ವಸಂತ ಕಾಲದ ಅಂತಿಮ ಪರ್ವವಾಗಿದ್ದು, ವಸಂತ ಋತು ಫೆಬ್ರವರಿ 15 ರಿಂದ ಆರಂಭವಾಗಿ ತಾ. 14 ರವರೆಗಿರುತ್ತದೆ. ವಸಂತ ಋತುವಿನಲ್ಲೇ ಮರಗಿಡ ಬಳ್ಳಿ ಚಿಗುರಿ ಹೂ ಬಿಡುವ ಫಲಪ್ರದ ಕಾಲವಾಗಿದೆ. ಈ ಎಡಮ್ಯಾರ್ ನಮ್ಮೆಯು ಕೃಷಿ ಪರ್ವದ ಆರಂಭಿಕ ಅಧ್ಯಾಯವಾಗಿದ್ದು, ಹಬ್ಬ ಹರಿದಿನಗಳಲ್ಲಿ ಬಿಡುವು ಪಡೆದುಕೊಂಡ ಕೊಡವ ಬುಡಕಟ್ಟು ಸಮುದಾಯ ಮುಂದೆ ಕೃಷಿ ಚಟುವಟಿಕೆ ಪ್ರಾರಂಭಿಸುವ ಕಾಲವಾಗಿದ್ದು, ಎಡಮ್ಯಾರ್ ನಂತರ ಮುಂದಿನ ಮುಂಗಾರು ಬಿತ್ತನೆಗೆ ಕೃಷಿ ಚಟುವಟಿಕೆಗೆ ಕೊಡವ ರೈತರು ತಯಾರಿ ನಡೆಸುತ್ತಾರೆ. ಪ್ರಕೃತಿಯ ವರ್ಷ ಚಕ್ರದ ಪ್ರಕಾರ ಕೊಡವರ 5 ಪ್ರಮುಖ ಹಬ್ಬಗಳಲ್ಲಿ ಎಡಮ್ಯಾರ್ ಮೊದಲನೆಯದಾಗಿದೆ ಎಂದು ನಾಚಪ್ಪ ಮಾಹಿತಿ ನೀಡಿದ್ದಾರೆ.