ಕೂಡಿಗೆ: ಹೆಗ್ಗಡಳ್ಳಿ ಗ್ರಾಮದ ಶ್ರೀ ಹರಕೆ ಚೌಡೇಶ್ವರಿ ದೇವಿ ಹಾಗೂ ನಾಗದೇವರ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.
ವಾಸ್ತು ರಾಕ್ಷೋಘ್ನ ಹೋಮ, ಬಲಿ, ಗೋಪುರ ಕಲಶ ಪೂಜೆ ಹಾಗೂ ಮರುದಿನ ಪ್ರಾತಃಕಾಲ ಗಣಪತಿ ಹೋಮ, ದುರ್ಗಾ ಹೋಮ, ಕಲಾವೃದ್ಧಿ ಹೋಮ, ಅಭಿಷೇಕ, ಕಲಶ ಪ್ರತಿಷ್ಠಾಪನೆ, ದೇವಿಗೆ ವಿವಿಧ ಅಬಿಷೇಕಗಳು ನಡೆದವು. ಸಂಜೆ ದೀಪಾಲಂಕಾರ ಮತ್ತು ವಿಶೇಷ ಪೂಜಾ ಕಾರ್ಯಕ್ರಮಗಳು, ತೀರ್ಥಪ್ರಸಾದ ಮತ್ತು ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಸಿ. ರವಿ, ಕಾರ್ಯದರ್ಶಿ ಪ್ರವೀಣ ಸೇರಿದಂತೆ ಪದಾಧಿಕಾರಿಗಳು ಹಾಗೂ ಕೂಡಿಗೆ, ಮದಲಾಪುರ, ಸೀಗೆಹೊಸೂರು ಗ್ರಾಮಸ್ಥರು ಭಾಗವಹಿಸಿದ್ದರು.
ನಾಪೋಕ್ಲು: ಇಲ್ಲಿನ ಹಳೆ ತಾಲೂಕಿನ ಪೊನ್ನು ಮುತ್ತಪ್ಪ ದೇವರ ವಾರ್ಷಿಕ ಉತ್ಸವ ಶುಕ್ರವಾರ ಕೊನೆಗೊಂಡಿತು. ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಬುಧವಾರ ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮದೊಂದಿಗೆ ಕಾರ್ಯಕ್ರಮ ಆರಂಭಗೊಂಡಿದ್ದು, ಗುರುವಾರ ಸಂಜೆ ಮುತ್ತಪ್ಪ ದೇವರ ಕಲಶ ನಡೆಯಿತು. ಪವಿತ್ರ ಕಾವೇರಿ ನದಿಯಲ್ಲಿ ಸ್ನಾನದ ನಂತರ ಕೇರಳದ ಚಂಡೆಯೊಂದಿಗೆ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಯಿತು.
ರಾತ್ರಿ ಮುತ್ತಪ್ಪ ದೇವರ ಬೊಳ್ಳಾಟಂ ಹಾಗೂ ಕುಟ್ಟಿಚಾತ ಬೊಳ್ಳಾಟಂ ಜರುಗಿತು. ಉತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಶುಕ್ರವಾರ ಬೆಳಿಗ್ಗೆ ತಿರುವಪ್ಪನ ಹಾಗೂ ಮುತ್ತಪ್ಪ ತೆರೆಗಳು ಜರುಗಿದವು.
ಸುಂಟಿಕೊಪ್ಪ: ಶ್ರೀ ಕೊಡಂಗಲ್ಲೂರು ಭದ್ರಕಾಳಿ ದೇವಸ್ಥಾನದ ವಾರ್ಷಿಕ ಪೂಜೆ ಶ್ರದ್ಧಾಭಕ್ತಿಯಿಂದ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಸಂಪನ್ನಗೊಂಡಿತು.
ಗದ್ದೆಹಳ್ಳದ ಶ್ರೀ ಕೊಡಂಗಲ್ಲೂರು ಭದ್ರಕಾಳಿ ದೇವಸ್ಥಾನದಲ್ಲಿ ಮಹಾ ಪೂಜೆಯ ಅಂಗವಾಗಿ ತಳಿರುತೋರಣ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ತಾ. 4 ರಂದು ಗಣಪತಿ ಹೋಮ, ಶ್ರೀ ಮುತ್ತಪ್ಪ ಪೈಂಗುತ್ತಿ, ಚಾಮುಂಡೇಶ್ವರಿ ದೇವಿಗೆ ಪೂಜೆ, ಗುಳಿಗನಿಗೆ ಪೂಜೆ, ಭದ್ರಕಾಳಿ ದೇವಿಗೆ ಅರ್ಚನೆ, ನೈವೇದ್ಯ ಪೂಜೆ, 7ದೇವಿಯ ದರ್ಶನ, ತಾಲಪುರಿ ಮೆರವಣಿಗೆ, ವಸೂರಿ ಮಾಲೆ, ದೇವಿ ದರ್ಶನ ಹಾಗೂ ಮಹಾ ಮಂಗಳಾರತಿ, ಪ್ರಸಾದ ವಿನಿಯೋಗದೊಂದಿಗೆ ಆಚರಣೆಯು ಸಂಪನ್ನಗೊಂಡಿತು.
ದೇವಿಗೆ ಹರಕೆ ಅರ್ಪಣೆ ಹಾಗೂ ನೆರೆದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಪೊನ್ನಂಪೇಟೆ: ಸಮೀಪದ ಬೇಗೂರು ಗ್ರಾಮದ ಈಶ್ವರ ದೇವರ ವಾರ್ಷಿಕ ಉತ್ಸವ ವಿಜೃಂಭಣೆಯಿಂದ ಜರುಗಿತು. ಓಣಿಲ್ ಅಯ್ಯಪ್ಪ ದೇವಸ್ಥಾನದಿಂದ ನೆರಪು ಹಾಗೂ ಪೂಳೆಮಾಡ್ ಈಶ್ವರ ದೇವಸ್ಥಾನದಲ್ಲಿ ದೇವರ ಜಳಕ ಬಳಿಕ ದೇವರ ನೃತ್ಯಬಲಿ ಜರುಗಿತು. ಭಕ್ತರು ಸೇರಿದಂತೆ ಅಕ್ಕಪಕ್ಕದ ಜನರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.
ವಾರ್ಷಿಕೋತ್ಸವದ ಅಂಗವಾಗಿ ದೇವಾಲಯದಲ್ಲಿ ಎತ್ತು ಪೋರಾಟ, ದೇವರ ನೃತ್ಯ ನಡೆಯಿತು. ಬೇಗೂರಿನ ಶ್ರೀ ಶಕ್ತಿ ಸಂಘದ ತಂಡದಿಂದ ಕೊಡವ ಸಾಂಸ್ಕೃತಿಕ ಉಮ್ಮತ್ತಾಟ್, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯ ಕ್ರಮ ಹಾಗೂ ಪೊನ್ನಂಪೇಟೆ ರಂಗ ಪ್ರತಿಷ್ಠಾನದ ಅಡ್ಡಂಡ ಕಾರ್ಯಪ್ಪ ರಚಿಸಿ, ನಿರ್ದೇಶಿಸಿರುವ ಬದುಕು ನಾಟಕ ಪ್ರದರ್ಶನ ನಡೆಯಿತು. ಊರಿನ ತಕ್ಕಮುಖ್ಯಸ್ಥರು, ಗ್ರಾಮಸ್ಥರು ಪಾಲ್ಗೊಂಡಿದ್ದರು.ಗುಡ್ಡೆಹೊಸೂರು: ಇಲ್ಲಿನ ಬೊಳ್ಳೂರು ಗ್ರಾಮದ ಸುಣ್ಣದಕೇರಿಯ ಗ್ರಾಮ ದೇವತೆ ಶ್ರೀ ಚಾಮುಂಡೇಶ್ವರಿಗೆ ಯುಗಾದಿ ಮರು ದಿನ ವಾರ್ಷಿಕ ಮಹಾ ಪೂಜೆಯನ್ನು ನಡೆಸಲಾಯಿತು.
ತಾ. 7 ರಂದು ಗ್ರಾಮಸ್ಥರ ಸಹಕಾರದೊಂದಿಗೆ ಪೂಜೆ ನಡೆಸಲಾಯಿತು. ಈ ಪೂಜಾ ಕಾರ್ಯದಲ್ಲಿ ದೇವಸ್ಥಾನ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು. ಅನ್ನಸಂತರ್ಪಣೆ ನಡೆಸಲಾಯಿತು.
ಕೂಡಿಗೆ: ಕಣಿವೆಯಲ್ಲಿ ತಾ. 13 ರಂದು ನಡೆಯಲ್ಲಿರುವ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ವಾರ್ಷಿಕ ಬ್ರಹ್ಮ ರಥೋತ್ಸವಕ್ಕೆ ಸಿದ್ಧತೆ ನಡೆಯುತ್ತಿದೆ.
ಯುಗಾದಿ ಹಬ್ಬದಂದು ರಥವನ್ನು ಹೊರಗೆ ತಂದು ನಿಲ್ಲಿಸಿ ಬಿಡಿ ಭಾಗಗಳ ಜೋಡಣೆ ಮಾಡುವ ಕಾರ್ಯದಲ್ಲಿ ಸಮಿತಿ ಸದಸ್ಯರು ತೊಡಗಿ ದರು. ಸಂಪ್ರದಾಯದಂತೆ ಪೂಜಾ ಕಾರ್ಯಕ್ರಮ ಪ್ರಾರಂಭಗೊಂಡಿವೆ. ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಎನ್. ಸುರೇಶ್, ಉಪಾಧ್ಯಕ್ಷ ಮಂಜುನಾಥ, ಗೌರವಾಧ್ಯಕ್ಷ ಮಾದವ, ನಂಜುಂಡಸ್ವಾಮಿ, ಸಮಿತಿಯ ಪ್ರಮುಖರು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
*ಸಿದ್ದಾಪುರ: ವಾಲ್ನೂರು-ತ್ಯಾಗತ್ತೂರು ಗ್ರಾಮದ ಶ್ರೀ ಮುತ್ತಪ್ಪ ಹಾಗೂ ತಿರುವಪ್ಪ ದೇವರ 62ನೇ ವಾರ್ಷಿಕೋತ್ಸವ ದೈವಗಳ ಕೋಲ ಪೂಜಾ ಕೈಂಕರ್ಯ ವಿಜೃಂಭಣೆಯಿಂದ ನಡೆಯಿತು.
ನಿವೃತ್ತ ಎಎಸ್‍ಐ ಅಯ್ಯಂಡ್ರ ಸೀತಾರಾಮ ಧ್ವಜಾರೋಹಣ ಮಾಡುವ ಮೂಲಕ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿದರು. ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವ ಕಾರ್ಯಕ್ರಮದ ನಂತರ ಕೊರತಿ ದೇವರ ಕಲಶವನ್ನು ಜಯಪ್ರಕಾಶ್ ಮನೆಯಿಂದ ದೇವಾಲಯಕ್ಕೆ ತರಲಾಯಿತು. ಕುಟ್ಟಿಚಾತನ್ ಮಲೆದೇವರ ಉತ್ಸವ ನಡೆಯಿತು. ವಸೂರಿಮಾಲ ದೇವರ ವೆಳ್ಳಾಟಂ, ಮುತ್ತಪ್ಪ ತಿರುವಪ್ಪನ್ ವೆಳ್ಳಾಟಂ ನಡೆಯಿತು. ಅಧಿಕ ಭಕ್ತಾದಿಗಳು ದೇವರ ಸೇವಾ ಕಾರ್ಯದಲ್ಲಿ ಭಾಗಿಯಾಗಿದ್ದರು. ಸಿದ್ದಾಪುರ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.
*ಸಿದ್ದಾಪುರ: ಅಭ್ಯತ್‍ಮಂಗಲ ಜ್ಯೋತಿ ನಗರದ ಶ್ರೀ ಚಾಮುಂಡೇಶ್ವರಿ ದೇವಿಯ ವಾರ್ಷಿಕ ಉತ್ಸವ ತಾ. 20 ಹಾಗೂ 21 ರಂದು ನಡೆಯಲಿದೆ. ಚಾಮುಂಡೇಶ್ವರಿ ಹಾಗೂ ಗುಳಿಗನ ವೆಳ್ಳಾಟಂ, ಅಯ್ಯಪ್ಪ ದೇವಾಲಯದಿಂದ ಚಾಮುಂಡೇಶ್ವರಿ ದೇವಾಲಯದವರೆಗೆ ಕಲಶ ಮೆರವಣಿಗೆ ಜರುಗಲಿದೆ.