ಸೋಮವಾರಪೇಟೆ, ಏ. 9: ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಆದ್ದರಿಂದಲೇ ಶಿವಕುಮಾರ ಸ್ವಾಮೀಜಿಗಳು ಇಂತಹ ಶಿಕ್ಷಣಕ್ಕೆ ಒತ್ತು ನೀಡಿದ್ದರು ಎಂದು ಮುದ್ದಿನ ಕಟ್ಟೆ ಮಠಾಧೀಶರಾದ ಶ್ರೀ ಅಭಿನವ ಸಿದ್ದಲಿಂಗ ಶಿವಾರ್ಚಾಯ ಸ್ವಾಮೀಜಿ ಹೇಳಿದರು.

ಅಖಿಲ ಭಾರತ ಶರಣ ಸಾಹ್ಯಿತ್ಯ ಪರಿಷತ್ತು, ಸೋಮೇಶ್ವರ ದೇವಾಲಯದ ಸಮಿತಿ ಹಾಗು ಸೋಮೇಶ್ವರ ಯುವಕ ಸಂಘದ ಆಶ್ರಯದಲ್ಲಿ ಗೆಜ್ಜೆಹಣಕೋಡು ಗ್ರಾಮದ ಸೋಮೇಶ್ವರ ದೇವಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಗ್ರಾಮದ ವಾರ್ಷಿಕ ಪೂಜೆ ಮತ್ತು ಸಿದ್ದಗಂಗಾ ಶ್ರೀಗಳ 112ನೇ ಜಯಂತಿ ಹಾಗು ಗುರುವಂದನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಶಿವಕುಮಾರ ಸ್ವಾಮೀಜಿ ಅವರು ತಮ್ಮ 112 ವರ್ಷಗಳಲ್ಲಿ 89 ವರ್ಷ ಸÀಂತರಾಗಿ ಸಮಾಜದ ಸೇವೆಯಲ್ಲಿಯೇ ತನ್ನ ಜೀವನ ಸವೆಸಿದರು. ತಮ್ಮ ಬದುಕನ್ನು ಸಾರ್ವತ್ರಿಕವಾಗಿರಿಸಿಕೊಂಡು ಮಕ್ಕಳಿಗೆ ಶಿಕ್ಷಣ, ಆಶ್ರಯ, ದಾಸೋಹ ನೀಡಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಮೂಲಕ ಬಡವರ ಬಗ್ಗೆ ಕಾಳಜಿ ತೋರಿದ ಮಹಾನುಭಾವ ಎಂದರು.

ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್. ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಿವೃತ್ತ ಪ್ರಾಧ್ಯಾಪಕರಾದ ಧರ್ಮಪ್ಪ, ಸೋಮೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ವೇದಾಂತಯ್ಯ, ಯುವಕ ಸಂಘದ ಅಧ್ಯಕ್ಷ ಪ್ರಕಾಶ್, ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಖಜಾಂಜಿ ಡಿ.ಬಿ.ಸೋಮಪ್ಪ, ಪ್ರಮುಖರಾದ ಜಯರಾಜ್, ದಯಾನಂದ ಸೇರಿದಂತೆ ಇತರರು ಉಪಸ್ಥಿತರಿದ್ದರು.