ಕೂಡಿಗೆ, ಏ. 10: ಕೂಡಿಗೆಯ ಕಾರ್ಪೊರೇಷನ್ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ 30 ದಿನಗಳವರೆಗೆ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ತರಬೇತಿಯನ್ನು ನೀಡಲಾಗುತ್ತಿದೆ.

ಕಾರ್ಯಕ್ರಮಕ್ಕೆ ಸಂಸ್ಥೆಯ ನಿರ್ದೇಶಕ ಸುರೇಶ್ ಚಾಲನೆ ನೀಡಿ, ಮಾತನಾಡಿ, ಸಂಸ್ಥೆಯ ವತಿಯಿಂದ ಹೈನುಗಾರಿಕೆ, ನಿರುದ್ಯೋಗ ಯುವಕ-ಯುವತಿಯರಿಗೆ ಕಂಪ್ಯೂಟರ್ ಮತ್ತು ಡಿಟಿಪಿ, ವಾಹನ ಚಾಲನ ತರಬೇತಿ, ಸ್ವ-ಉದ್ಯೋಗಿಗಳಾಗಲು ವಿವಿಧ ತರಬೇತಿಗಳನ್ನು ಹಂತ ಹಂತವಾಗಿ ಉಚಿತವಾಗಿ ನೀಡಲಾಗುತ್ತಿದೆ. ಜಿಲ್ಲೆಯ ನಿರುದ್ಯೋಗಿ ಯುವಕ-ಯುವತಿಯರು ಹಾಗೂ ಸ್ವ-ಸಹಾಯ ಗುಂಪುಗಳ ಮಹಿಳೆಯರು ಮತ್ತು ಸ್ತ್ರೀಶಕ್ತಿ ಸ್ವ-ಸಾಹಯ ಗುಂಪುಗಳಿಗೆ ವಿವಿಧ ಯೋಜನೆಗಳ ಮೂಲಕ ತರಬೇತಿಯನ್ನು ನೀಡಲಾಗುವದು. ನಂತರ ತರಬೇತಿಯ ಅನುಗುಣವಾಗಿ ಫಲಾನುಭವಿಗಳಿಗೆ ಪರಣತಿಯ ಆಧಾರದ ಮೇಲೆ ಬ್ಯಾಂಕ್‍ಗಳಲ್ಲಿ ಸಾಲಸೌಲಭ್ಯಗಳನ್ನು ದೊರಕಿಸಲು ಈ ಸಂಸ್ಥೆಯು ಸಹಕಾರ ನೀಡುತ್ತದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಜಿಲ್ಲೆಯ 50ಕ್ಕೂ ಹೆಚ್ಚು ಮಹಿಳೆಯರು ಹೊಲಿಗೆ ತರಬೇತಿಯನ್ನು ಪಡೆಯುತ್ತಿದ್ದಾರೆ. ಈ ಸಂದರ್ಭ ಕಾರ್ಪೊರೇಷನ್ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ಸಲ್ಲಾವುದ್ದೀನ್, ಚಂದ್ರಶೇಖರ್ ಇದ್ದರು.