ಮತದಾರನಿಗೆ ಮುದವಾಗುವದು ಯಾವದು?
ಮಡಿಕೇರಿ, ಏ. 10: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಕೊಡಗು - ಮೈಸೂರು ಕ್ಷೇತ್ರದಲ್ಲಿನ ಅಭ್ಯರ್ಥಿಗಳು ಯಾರು ಯಾರು ಎಂಬದು ಈಗಾಗಲೇ ಅಂತಿಮಗೊಂಡಿದೆ. ಮತ ಸಮರಕ್ಕೆ ಅಖಾಡ ಸಿದ್ಧ ಗೊಂಡಿದ್ದು, ಇನ್ನೇನಿದ್ದರೂ ಮತಬೇಟೆಯೇ ಮುಂದಿರುವ ಪ್ರಯತ್ನವಾಗಿದೆ. ಈಗಾಗಲೇ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರದ ಬಿರುಸು ಕಾವೇರುತ್ತಿದೆ. ಈ ಕ್ಷೇತ್ರದಲ್ಲಿ ಒಟ್ಟು 22 ಅಭ್ಯರ್ಥಿಗಳು ಹುರಿಯಾಳು ಗಳಾಗಿದ್ದಾರೆ. 22 ಸ್ಪರ್ಧಿಗಳಿದ್ದರೂ, ನೇರ ಹಣಾಹಣಿ ಇರುವದು ಬಿಜೆಪಿ ಹಾಗೂ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿಗಳಾದ ಪ್ರತಾಪ್ ಸಿಂಹ ಹಾಗೂ ಸಿ.ಹೆಚ್. ವಿಜಯಶಂಕರ್ ಅವರ ನಡುವೆ ಎಂಬದರಲ್ಲಿ ಎರಡು ಮಾತಿಲ್ಲ. ಮೈಸೂರಿನ ನಾಲ್ಕು, ಹುಣಸೂರು, ಪಿರಿಯಾಪಟ್ಟಣ ಹಾಗೂ ಕೊಡಗು ಜಿಲ್ಲೆಯ ಮಡಿಕೇರಿ ಹಾಗೂ ವೀರಾಜಪೇಟೆ ಈ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಲೋಕಸಭಾ ಕ್ಷೇತ್ರದಲ್ಲಿ ಇದೀಗ ಮತ ಪ್ರಚಾರದ ಕಾರ್ಯ ಬಿರುಸು ಗೊಳ್ಳುತ್ತಿದೆ. ರಾಜಕೀಯ ಪಕ್ಷಗಳು ಈ ನಿಟ್ಟಿನಲ್ಲಿ ತಮ್ಮ ತಮ್ಮ ನಡೆಯನ್ನು ಅನುಸರಿಸುವತ್ತ ಶ್ರಮಿಸುತ್ತಿವೆ. ಜಾತಿವಾರು ಲೆಕ್ಕಾಚಾರಗಳು, ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ವಸ್ತು ಸ್ಥಿತಿಯನ್ನು ಅವಲೋಕಿಸಿಕೊಂಡು ಮತದಾರರನ್ನು ಸೆಳೆಯುವ ಕಸರತ್ತು ಆರಂಭಗೊಂಡಿದೆ. ಹಾಲಿ ಸಂಸದರಾಗಿರುವ ಪ್ರತಾಪ್ಸಿಂಹ ಹಾಗೂ ಇವರು ಪ್ರತಿನಿಧಿಸುತ್ತಿರುವ ಬಿಜೆಪಿ ಪಕ್ಷಕ್ಕೆ ಈ ಕ್ಷೇತ್ರವನ್ನು ಮತ್ತೆ ಪಡೆಯುವ ಹಂಬಲವಿದ್ದರೆ ದೋಸ್ತಿ ಪಕ್ಷಗಳ ಸ್ಥಾನ ಹೊಂದಾಣಿಕೆಯ ಕಸರತ್ತಿನಲ್ಲಿ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಉಳಿಸಿಕೊಂಡಿರುವದರಲ್ಲಿ ಪ್ರಮುಖ ಪಾತ್ರಧಾರಿ ಎನ್ನಬಹುದಾದ ಮಾಜಿ ಸಿ.ಎಂ. ಸಿದ್ಧರಾಮಯ್ಯ ಅವರಿಗೆ ಪ್ರತಿಷ್ಠೆ ಉಳಿಸಿಕೊಳ್ಳುವ ತವಕದೊಂದಿಗೆ ಚುನಾವಣೆ ರಂಗೇರುತ್ತಿದೆ. ಕಳೆದ ಬಾರಿ ಈ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ ಆಗ ಕಾಂಗ್ರೆಸ್ನಲ್ಲಿದ್ದ ಹೆಚ್. ವಿಶ್ವನಾಥ್ ಇದೀಗ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರು ಮಾತ್ರವಲ್ಲ ಹುಣಸೂರು ಕ್ಷೇತ್ರದ ಶಾಸಕರು ಕೂಡ ಆಗಿದ್ದಾರೆ. ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಕೊಡಗು ಜಿಲ್ಲೆ ಕಳೆದ ಎರಡು - ಮೂರು ಅವಧಿ ಯಿಂದಲೂ ಬಿಜೆಪಿಯ ಶಾಸಕರನ್ನು ಗೆಲ್ಲಿಸಿದೆ/ 2018ರ ಚುನಾವಣೆ ಯಲ್ಲಿಯೂ ಜಿದ್ದಾಜಿದ್ದಿನ ಸ್ಪರ್ಧೆ ಗೋಚರ ವಾಗಿದ್ದರೂ ಬಿಜೆಪಿಯೇ ಮೇಲುಗೈ ಸಾಧಿಸಿದೆ. ವೀರಾಜ ಪೇಟೆಯಲ್ಲಿ ಕೆ.ಜಿ. ಬೋಪಯ್ಯ, ಮಡಿಕೇರಿಯಲ್ಲಿ ಅಪ್ಪಚ್ಚು ರಂಜನ್ ಬಿಜೆಪಿಯ ಶಾಸಕರು. ಇನ್ನು ನೆರೆಯ ಹುಣಸೂರು ಕ್ಷೇತ್ರದಲ್ಲಿ ಜೆ.ಡಿ.ಎಸ್.ನ ಶಾಸಕರಾಗಿ ಜಯ ಸಾಧಿಸಿರುವರು ಹೆಚ್. ವಿಶ್ವನಾಥ್. ಪಿರಿಯಾಪಟ್ಟಣ ಕ್ಷೇತ್ರದಲ್ಲಿರುವದೂ ಜೆಡಿಎಸ್ನ ಶಾಸಕ ಮಹದೇವ್ ಅವರು. ಇನ್ನು ಮೈಸೂರಿಗೆ ಬಂದರೆ ಇಲ್ಲಿನ ಪ್ರತಿಷ್ಠಿತ ಕ್ಷೇತ್ರವಾದ ಸಿದ್ಧರಾಮಯ್ಯ ಅವರೇ ಪ್ರತಿನಿಧಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಯ ಸಾಧಿಸಿರುವದು ಕೂಡ ಜೆಡಿಎಸ್ನ ಜಿ.ಟಿ. ದೇವೇಗೌಡ ಅವರು ಕೃಷ್ಣರಾಜ ಹಾಗೂ ಚಾಮರಾಜನಗರದಲ್ಲಿ ಬಿಜೆಪಿಯ ರಾಮ್ದಾಸ್ ಹಾಗೂ ನಾಗೇಂದ್ರ ಶಾಸಕರಾಗಿದ್ದರೆ, ನರಸಿಂಹರಾಜದಲ್ಲಿನ ಶಾಸಕರು ಕಾಂಗ್ರೆಸ್ನ ತನ್ವೀರ್ ಸೇಠ್ ಅವರಾಗಿದ್ದಾರೆ. ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರದಲ್ಲಿ ಬಿಜೆಪಿಯ ಶಾಸಕರು. ಮೂರರಲ್ಲಿ ಜೆಡಿಎಸ್ ಹಾಗೂ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ನ ಶಾಸಕರಿದ್ದಾರೆ.
ಪ್ರಸ್ತುತ ನಡೆಯುವ ಲೋಕಸಭಾ ಚುನಾವಣೆಯ ಮೇಲೂ ಇದು ಪ್ರಭಾವ ಬೀರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಇದರೊಂದಿಗೆ ವಿವಿಧ ಜಾತಿ-ಸಮುದಾಯಗಳ ಮತದಾರರನ್ನೂ ಸೆಳೆಯುವ ನಿಟ್ಟಿನಲ್ಲಿ ಮತಬೇಟೆ ಬಿರುಸುಗೊಳ್ಳುತ್ತಿದೆ. ಘಟಾನುಘಟಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಆಯಾ ಪಕ್ಷಗಳ ಉನ್ನತ ಮಟ್ಟದ ಮುಖಂಡರನ್ನೂ ಕರೆತರುವ ಪ್ರಯತ್ನ ಸಾಗಿದೆ.
22 ಮಂದಿ ಯಾರ್ಯಾರು...?
ಈ ಬಾರಿ ನಡೆಯಲಿರುವ ಚುನಾವಣೆಯಲ್ಲಿ ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿಯ ಪ್ರತಾಪ್ ಸಿಂಹ, ಕಾಂಗ್ರೆಸ್ನ ವಿಜಯಶಂಕರ್ ರೊಂದಿಗೆ ಇನ್ನಿತರ ಪಕ್ಷಗಳಾದ ಬಹುಜನ ಸಮಾಜ ಪಾರ್ಟಿಯಿಂದ ಡಾ. ಬಿ. ಚಂದ್ರ (ಚಂದ್ರೇಗೌಡ) ಇಂಡಿಯನ್ ನ್ಯೂ ಕಾಂಗ್ರೆಸ್ನಿಂದ ಅಯೂಬ್ಖಾನ್, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಆಶಾರಾಣಿ ವಿ. ಕರ್ನಾಟಕ ಪ್ರಜಾಪಾರ್ಟಿ (ರೈತ ಪರ್ವ) ಯಿಂದ ಬಿದ್ದಪ್ಪ ಪಿ.ಕೆ., ಸೋಷಿಯಲಿಸ್ಟ್ ಯೂನಿಟ್ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್)ನಿಂದ ಸಂಧ್ಯಾ ಪಿ.ಎಸ್. ಹುರಿಯಾಳಾ ಗಿದ್ದಾರೆ. ಇನ್ನು ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಾ ಕಣದಲ್ಲಿ ಉಳಿದುಕೊಂಡಿ ರುವವರೆಂದರೆ, ಆನಂದಕುಮಾರ್ ಎಂ., ಕಾವೇರಮ್ಮ ಎನ್.ಕೆ., ನಾಗೇಶ್ ಎನ್., ನಿಂಗಪ್ಪ ಬಿ.ಡಿ., ಜಿ.ಎಂ. ಮಹದೇವ, ಆರ್. ಮಹೇಶ್, ರವಿ, ರಾಜು, ಲೋಕೇಶ್ ಕುಮಾರ್ ಜಿ., ಆಲಗೂಡು ಲಿಂಗರಾಜು, ವೆಂಕಟೇಶ್ ಡಿ. ನಾಯಕ, ಶ್ರೀನಿವಾಸಯ್ಯ, ಎಂ.ಜೆ. ಸುರೇಶ್ ಗೌಡ, ಅಲಿಶಾನ್ ಎಸ್., ಕೆ.ಎಸ್. ಸೋಮಸುಂದರ ಅವರುಗಳು.
- ಶಶಿ ಸೋಮಯ್ಯ