ಗೋಣಿಕೊಪ್ಪ ವರದಿ, ಏ. 9: ಅಂತರಾಷ್ಟ್ರೀಯ ಹಿರಿಯ ಓಟಗಾರ ಪೆಮ್ಮಂಡ ಎಂ. ಅಪ್ಪಯ್ಯ ಅವರ 76 ನೇ ಹುಟ್ಟುಹಬ್ಬವನ್ನು ಕಿರಿಯ ಕ್ರೀಡಾ ಸಾಧಕರಿಗೆ ಸನ್ಮಾನ ಮಾಡುವ ಮೂಲಕ ಆಚರಿಸಲಾಯಿತು.
ಗೋಣಿಕೊಪ್ಪಲು ರೋಟರಿ ಕ್ಲಬ್ ಹಾಗೂ ಮುಳಿಯ ಪ್ರತಿಷ್ಠಾನದ ಸಹಯೋಗದಲ್ಲಿ ಪೆಮ್ಮಂಡ ಅಪ್ಪಯ್ಯ ಹುಟ್ಟುಹಬ್ಬವನ್ನು ಮುಳಿಯ ಸಭಾಂಗಣದಲ್ಲಿ ಆಚರಿಸಿ, ಕಿರಿಯ ಕ್ರೀಡಾ ಸಾಧಕರಿಗೆ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು. ಪೆಮ್ಮಯ್ಯ ಅವರೊಂದಿಗೆ ಪರ್ವತಾರೋಹಿ ಕಾಳಮಾಡ ರಾಹುಲ್ ಚಿಣ್ಣಪ್ಪ ಹಾಗೂ ಮಾಸ್ಟರ್ ಅಥ್ಲೆಟ್ ಕಂಬೀರಂಡ ಕುಸುಮಾ ಭೀಮಯ್ಯ ಸನ್ಮಾನ ಸ್ವೀಕರಿಸಿದರು.
ಗೋಣಿಕೊಪ್ಪ ರೋಟರಿ ಕ್ಲಬ್ ಅಧ್ಯಕ್ಷ ಪಾರುವಂಗಡ ದಿಲನ್ ಚಂಗಪ್ಪ ಮಾತನಾಡಿ, ಪ್ರೋತ್ಸಾಹವಿಲ್ಲದ ಕಾಲಘಟ್ಟದಲ್ಲಿ ತನ್ನ ಸ್ವಾಭಿಮಾನದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಸಾಧನೆ ಮಾಡಿರುವ ಪೆಮ್ಮಂಡ ಅಪ್ಪಯ್ಯ ಅವರ ಹುಟ್ಟುಹಬ್ಬವನ್ನು ಸಾರ್ವಜನಿಕವಾಗಿ ಆಚರಿಸುತ್ತಿರುವ ದರಿಂದ ಕಿರಿಯ ಕ್ರೀಡಾಪಟುಗಳಿಗೂ ಪ್ರೋತ್ಸಾಹ ನೀಡುವಂತಾಗಿದೆ ಎಂದರು.
ಮುಳಿಯ ಪ್ರತಿಷ್ಠಾನ ಸಹಾಯಕ ವ್ಯವಸ್ಥಾಪಕ ಬಿ. ಎಸ್. ಕಿಶೋರ್, ರೋಟರಿ ಕ್ಲಬ್ ಸದಸ್ಯರುಗಳಾದ ರವೀಂದ್ರ ಕಾಮತ್, ರೀಟಾ ದೇಚಮ್ಮ, ಅಪ್ಪಯ್ಯ ಅವರ ಪತ್ನಿ ಮಾಯಮ್ಮ ಉಪಸ್ಥಿತರಿದ್ದರು. ಸುಂದರೇಶ್ ನಿರೂಪಿಸಿದರು.