ಸೋಮವಾರಪೇಟೆ, ಏ. 10: ಸಮೀಪದ ಬೇಳೂರು ಗ್ರಾಮ ಪಂಚಾಯಿತಿಯ ಬಜೆಗುಂಡಿಯ ಬ್ಲೂ ವಾರಿಯರ್ಸ್ ವತಿಯಿಂದ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಕೊಡಗು ಪೊಲೀಸ್ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಫೈನಲ್ ಪಂದ್ಯಾಟದಲ್ಲಿ ಕೊಡಗು ಪೊಲೀಸ್ ತಂಡವು ಹೊದವಾಡ ತಂಡದ ವಿರುದ್ಧ ಉತ್ತಮ ಆಟ ಪ್ರದರ್ಶಿಸುವ ಮೂಲಕ ಪ್ರಥಮ ಬಹುಮಾನಕ್ಕೆ ಭಾಜನವಾಯಿತು. ಫೈನಲ್ ಪಂದ್ಯಾಟದಲ್ಲಿ 15-10, 15-9, 15-7 ಸೆಟ್ಗಳ ಅಂತರದಿಂದ ಹೊದವಾಡ ತಂಡದ ವಿರುದ್ಧ ಗೆಲವು ದಾಖಲಿಸಿತು. ತೃತೀಯ ಸ್ಥಾನವನ್ನು ಹೊಸತೋಟ ತಂಡ ಪಡೆಯಿತು.
ಪ್ರಥಮ ಸ್ಥಾನ ಪಡೆದ ತಂಡಕ್ಕೆ ರೂ. 9999 ನಗದು, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ. 5555, ತೃತೀಯ ಸ್ಥಾನ ಪಡೆದ ತಂಡಕ್ಕೆ ರೂ. 3333 ನಗದು ಹಾಗೂ ಟ್ರೋಫಿಯನ್ನು ನೀಡಲಾಯಿತು. ಪಂದ್ಯಾಟದ ಉತ್ತಮ ಹೊಡೆತಗಾರ ಪ್ರಶಸ್ತಿಯನ್ನು ಹೊದವಾಡದ ಕಿಶನ್, ಆಲ್ರೌಂಡರ್ ಪ್ರಶಸ್ತಿಯನ್ನು ಕೊಡಗು ಪೊಲೀಸ್ ತಂಡದ ಪ್ರಜ್ವಲ್, ಬೆಸ್ಟ್ ರಿಸೀವರ್ ಪ್ರಶಸ್ತಿಯನ್ನು ಹೊದವಾಡದ ಹಮೀದ್ ಅವರುಗಳು ಪಡೆದುಕೊಂಡರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬ್ಲೂ ವಾರಿಯರ್ಸ್ನ ಭಾಸ್ಕರ್ ವಹಿಸಿದ್ದರು. ಬೇಳೂರು ಗ್ರಾ.ಪಂ. ಅಧ್ಯಕ್ಷೆ ಭಾಗ್ಯ ಮಂಜುನಾಥ್, ಸದಸ್ಯರಾದ ಕೆ.ಎ. ಯಾಕೂಬ್, ಕವಿತಾ ಬಾಲಕೃಷ್ಣ, ಮಾಜೀ ಸೈನಿಕ ತಿಮ್ಮಪ್ಪ ನಾಯಕ್, ಪ್ರಮುಖರಾದ ಬಿ.ಜಿ. ಪ್ರಶಾಂತ್, ಶಶಿಕಾಂತ್, ವಿಶು ಪೂವಯ್ಯ, ಆರ್ಪಿಸಿ ಕನ್ಸ್ಟ್ರಕ್ಷನ್ನ ಚರಣ್, ಜೀವನ್, ಚಂದನ್, ಸಂದೀಪ್ ಡಿಸೋಜ, ಬಿ.ಎಂ. ಪ್ರಶಾಂತ್ ಸೇರಿದಂತೆ ಇತರರು ಉಪಸ್ಥಿತರಿದ್ದು, ಬಹುಮಾನ ವಿತರಿಸಿದರು.