ಕೂಡಿಗೆ, ಏ. 10: 2019-20ನೇ ಸಾಲಿನ ಕ್ರೀಡಾ ಶಾಲೆ ಮತ್ತು ನಿಲಯ ಪ್ರವೇಶಕ್ಕೆ ವಿದ್ಯಾರ್ಥಿಗಳ ಆಯ್ಕೆಯ ರಾಜ್ಯಮಟ್ಟದ ಪರಿಶೀಲನಾ ತರಬೇತಿ ಶಿಬಿರ ಕೂಡಿಗೆ ಕ್ರೀಡಾ ಶಾಲೆಯ ಕ್ರೀಡಾಂಗಣದಲ್ಲಿ ಚಾಲನೆಗೊಂಡಿದೆ.
ಕ್ರೀಡಾ ವಿದ್ಯಾರ್ಥಿಗಳ ಪರಿಶೀಲನಾ ಶಿಬಿರವನ್ನು ಕ್ರೀಡಾ ಶಾಲೆಯ ಮುಖ್ಯೋಪಾಧ್ಯಾಯಿನಿ ಕುಂತಿ ಬೋಪಯ್ಯ ಉದ್ಘಾಟಿಸಿ, ಮಾತನಾಡಿ, ಶಿಬಿರದ ಪ್ರಯೋಜನ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಸಿಗುತ್ತಿದೆ. ಇದನ್ನು ಸದುಪಯೋಗ ಪಡಿಸಿಕೊಂಡು ತಾವು ಸೇರಿದ ಶಾಲೆ ಮತ್ತು ಕಾಲೇಜುಗಳಿಗೆ ಕೀರ್ತಿ ತರುವದರ ಜೊತೆಗೆ ರಾಜ್ಯಮಟ್ಟದ ಕ್ರೀಡಾಪಟುಗಳಾಗಿ ಬೆಳೆದು ದೇಶವನ್ನು ಪ್ರತಿನಿಧಿಸುವ ಪ್ರತಿಭೆಯನ್ನು ಹೊರಸೂಸುವಲ್ಲಿ ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಅಲ್ಲದೆ, ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ ಹಲವು ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿರುವದು ಹೆಮ್ಮೆಯ ವಿಚಾರ. ಅದೇ ಮಾದರಿಯಲ್ಲಿ ತಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.
ಶಿಬಿರದಲ್ಲಿ ರಾಜ್ಯದ 279 ಬಾಲಕ-ಬಾಲಕಿಯರು ಪಾಲ್ಗೊಳ್ಳಲಿದ್ದಾರೆ. ಎಂಟನೆ ತರಗತಿ ಪ್ರವೇಶ ಅರ್ಹ ಕಿರಿಯ ಬಾಲಕ ಮತ್ತು ಬಾಲಕಿಯರ ಆಯ್ಕೆ ಪ್ರಕ್ರಿಯೆ ತಾ. 16 ರವರೆಗೆ ನಡೆಯಲಿದೆ. ರಾಜ್ಯದ 25 ಕ್ರೀಡಾ ತರಬೇತಿದಾರರು ಪರಿಶೀಲನಾ ಶಿಬಿರದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಿದ್ದಾರೆ. ರಾಜ್ಯದ ಕ್ರೀಡಾ ಹಾಸ್ಟೆಲ್ ಮತ್ತು ಕ್ರೀಡಾ ಶಾಲೆಗಳಿಗೆ ಈಗಾಗಲೇ ಮೊದಲ ಹಂತದ ತೇರ್ಗಡೆಯಾಗಿ ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದಾರೆ.
ಹಾಕಿ, ಅಥ್ಲೆಟಿಕ್, ಜಿಮ್ನಾಸ್ಟಿಕ್, ಫುಟ್ಬಾಲ್, ವಾಲಿಬಾಲ್ ಕ್ರೀಡೆಗಳಿಗೆ ಕ್ರೀಡಾ ಹಾಸ್ಟೆಲ್ ಮತ್ತು ಕ್ರೀಡಾ ಶಾಲೆಗೆ ರಾಜ್ಯಮಟ್ಟದ ಆಯ್ಕೆ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಕೂಡಿಗೆ ಕ್ರೀಡಾ ಶಾಲೆಗೆ ಹಾಕಿ, ಅಥ್ಲೆಟಿಕ್ ಮತ್ತು ಜಿಮ್ನಾಸ್ಟಿಕ್ ವಿದ್ಯಾರ್ಥಿಗಳು ಆಯ್ಕೆಗೊಳ್ಳಲಿದ್ದು, ಫುಟ್ಬಾಲ್, ಬಾಸ್ಕೆಟ್ ಬಾಲ್, ವಾಲಿಬಾಲ್ ಆಟದ ಆಯ್ಕೆ ಪ್ರಕ್ರಿಯೆ ನಡೆದು ರಾಜ್ಯದಲ್ಲಿರುವ ವಿವಿಧ ಕ್ರೀಡಾ ಶಾಲಾ ಕೇಂದ್ರಗಳಿಗೆ ಆಯ್ಕೆ ಮಾಡಿ ಕಳುಹಿಸುವ ಪ್ರಕ್ರಿಯೆ ತಾ. 16 ರವರೆಗೆ ನಡೆಯಲಿದೆ.
ಶಿಬಿರದಲ್ಲಿ ರಾಜ್ಯಮಟ್ಟದ ಕಿರಿಯ ಬಾಲಕ-ಬಾಲಕಿಯರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಇದೇ ಮಾದರಿಯಲ್ಲಿ ಪದವಿಪೂರ್ವ ಕಾಲೇಜು ಪ್ರವೇಶ ಅರ್ಹ ಹಿರಿಯ ಬಾಲಕ ಬಾಲಕಿಯರಿಗಾಗಿ ತಾ. 24 ರಿಂದ ಮೇ 5 ರವರೆಗೆ ಆಯ್ಕೆ ಪ್ರಕ್ರಿಯೆಯು ನಡೆಯಲಿದೆ ಎಂದು ಪರಿಶೀಲನಾ ಶಿಬಿರದ ಉಸ್ತುವಾರಿ ಅಧಿಕಾರಿ ವಸಂತ್ ಮಾಹಿತಿ ನೀಡಿದ್ದಾರೆ.