ಸಿದ್ದಾಪುರ, ಏ. 9: ಕೊಡಗು ಚಾಂಪಿಯನ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಪ್ರಥಮ ಹಂತದ ಐಕಾನ್ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ನೆಲ್ಯಹುದಿಕೇರಿ ಲಾಮಿಯಾ ಪ್ಲಾಝಾ ಸಭಾಂಗಣದಲ್ಲಿ ನಡೆಯಿತು.
ಸಿಟಿ ಬಾಯ್ಸ್ ಯುವಕ ಸಂಘದ ವತಿಯಿಂದ ಆಯೋಜಿಸಿದ ಕೊಡಗು ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ 14 ತಂಡಗಳ ಫ್ರಾಂಚೈಸಿಗಳು ಐಕಾನ್ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಿ ಆಟಗಾರರನ್ನು ಆಯ್ಕೆ ಮಾಡಿದರು. ನೆಲ್ಯಹುದಿಕೇರಿ ಗ್ರಾಪಂ ಉಪಾಧ್ಯಕ್ಷೆ ಸಫಿಯಾ ಮುಹಮ್ಮದ್ ಚೀಟಿ ಎತ್ತುವ ಮೂಲಕ ಬಿಡ್ಡಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿ ಕೆಸಿಎಲ್ ಕ್ರಿಕೆಟ್ ಹಬ್ಬಕ್ಕೆ ಶುಭ ಕೋರಿದರು
ಈ ಸಂದರ್ಭ ಸಿದ್ದಾಪುರ ಠಾಣಾಧಿಕಾರಿ ಮಹೇಶ್ ಮಾತನಾಡಿ, ಕ್ರೀಡೆಯನ್ನು ಜಾತಿ ಧರ್ಮದ ಆಧಾರದಲ್ಲಿ ಅಳೆಯಲು ಸಾಧ್ಯವಿಲ್ಲ. ಕ್ರೀಡೆಗೆ ಪ್ರತಿಭೆ ಅವಶ್ಯಕವಾಗಿದ್ದು, ಪ್ರತಿಭಾವಂತರನ್ನು ಗುರುತಿಸಿ ಅವಕಾಶ ನೀಡುತ್ತಿರುವ ಸಿಟಿ ಬಾಯ್ಸ್ ಮತ್ತು ಕೆಸಿಎಲ್ ಸಮಿತಿಗೆ ಶುಭವಾಗಲಿ ಎಂದರು.
ಡಿ.ಸಿ.ಐ.ಬಿ ಸಬ್ ಇನ್ಸ್ಪೆಕ್ಟರ್ ದಯಾನಂದ್ ಮಾತನಾಡಿ, ಗ್ರಾಮೀಣ ಕ್ರೀಡಾಪಟುಗಳಿಗೆ ಅವಕಾಶ ನೀಡುವ ಮೂಲಕ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಹಕಾರಿ ಆಗಲಿದೆ ಎಂದರು.
ಸಿದ್ದಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಮಾತನಾಡಿ ಐಪಿಎಲ್ ಕ್ರಿಕೆಟ್ ಮಾದರಿಯಲ್ಲಿಯೇ ಕೆಸಿಎಲ್ ಕ್ರಿಕೆಟ್ ಪಂದ್ಯಾವಳಿಯನ್ನು ಜಿಲ್ಲೆಯಲ್ಲಿ ಮಾಡುತ್ತಿರುವದು ಉತ್ತಮ ಬೆಳವಣಿಗೆಯಾಗಿದೆ; ಗ್ರಾಮೀಣ ಕ್ರೀಡಾಪಟುಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸಿದ್ದಾಪುರದ ಸಿಟಿ ಬಾಯ್ಸ್ ಯುವಕರು ಕಳೆದ ನಾಲ್ಕು ವರ್ಷ ಗಳಿಂದ ಅಚ್ಚುಕಟ್ಟಾಗಿ ಆಯೋಜನೆ ಮಾಡಿ ಗಮನ ಸೆಳೆದಿದ್ದಾರೆ ಎಂದರು
ಕೆಸಿಎಲ್ ಸಮಿತಿ ಅಧ್ಯಕ್ಷ ರೆಜಿತ್ ಕುಮಾರ್ ಮಾತನಾಡಿ, ಸವಾಲುಗಳ ನಡುವೆ ಸಂಕಷ್ಟದಲ್ಲೂ ಗ್ರಾಮೀಣ ಕ್ರೀಡಾಪಟುಗಳನ್ನು ಕ್ರೀಡಾ ಪ್ರತಿಭೆಯ ಮೂಲಕ ಮುಂದೆ ತರಲು ಕೆಸಿಎಲ್ ಮುಂದಾಗಿದೆ. ಈ ಭಾಗದಲ್ಲಿ ಹೆಚ್ಚು ಕ್ರೀಡಾಪಟುಗಳಿದ್ದರೂ ಸೂಕ್ತ ಮೈದಾನದ ವ್ಯವಸ್ಥೆ ಇಲ್ಲದೆ ಕ್ರೀಡೆಯಿಂದ ವಂಚಿತರಾಗುತ್ತಿದ್ದಾರೆ
ಕರಡಿಗೋಡು ಗ್ರಾಮದ ಕುಕ್ಕನೂರು ಕುಟುಂಬಸ್ಥರ ಏಳು ಎಕರೆ ಜಾಗದಲ್ಲಿ ಅಚ್ಚುಕಟ್ಟಾದ ಮೈದಾನ ಹಾಗೂ ಪಿಚ್ , ಪಾರ್ಕಿಂಗ್ ಸೇರಿದಂತೆ ಆಟಗಾರರಿಗೆ ಬೇಕಾದ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಮುಂದಾಗಿದೆ ಎಂದರು.
ನೆಲ್ಯಹುದಿಕೇರಿಯ ರಾಂಬೋ ಕ್ರಿಕೆಟರ್ಸ್ ತಂಡದ ಫ್ರಾಂಚೈಸಿ ಸಾಬು ವರ್ಗಿಸ್, ಕೆಸಿಎಲ್ ಪ್ರಾಯೋಜಕರಾದ ಮಿ ಲೈಫ್ ಸ್ಟೈಲ್ ಸಂಸ್ಥೆಯ ಸರ್ಫುದ್ದೀನ್, ಉಮೇಶ್ ಕುಮಾರ್, ಲಾಮಿಯಾ ಫ್ಲಾಝಾ ಮಾಲಿಕ ಶಿಹಾಬ್, ಡೈಮಂಡ್ ಟೂರಿಸ್ಟ್ ಹೋಂ ಮಾಲೀಕ ಜಂಶೀರ್, ದಾನಿಗಳಾದ ರಂಜಿತ್ ಇದ್ದರು.
ಬಿಡ್ಡಿಂಗ್ನಲ್ಲಿ ಒಟ್ಟು 14 ತಂಡಗಳ ಫ್ರಾಂಚೈಸಿಗಳು ಭಾಗವಹಿಸಿದ್ದರು. ಎ ಮತ್ತು ಬಿ ವಿಭಾಗದಲ್ಲಿ ತಲಾ 16 ಐಕಾನ್ ಆಟಗಾರರನ್ನು ವಿಂಗಡಿಸಿ ಬಿಡ್ಡಿಂಗ್ಗೆ ಅವಕಾಶ ಮಾಡಲಾಗಿತ್ತು. ಎ ವಿಭಾಗದಲ್ಲಿ ಐಕಾನ್ ಆಟಗಾರರ ಪೈಕಿ ಮುಸ್ತಫ ಸಿದ್ದಾಪುರ, ಯತೀಶ್ ಸೋಮವಾರಪೇಟೆ, ಸಂತೋಷ್ ಮಾದಾಪುರ, ರಿಯಾಝ್ ಹುಂಡಿ, ಸಲ್ಮಾನ್ ಕುಶಾಲನಗರ, ಶಿವು ಮೂರ್ನಾಡು, ನಾಸಿರ್ ವೀರಾಜಪೇಟೆ, ಹಾರಿಸ್ ಮಡಿಕೇರಿ, ಅಕ್ಷಯ್ ನೆಲ್ಯಹುದಿಕೇರಿ, ಮುಸ್ತಫಾ ನೆಲ್ಯಹುದಿಕೇರಿ, ಹುಸೈನ್ ಸುಂಟಿಕೊಪ್ಪ, ರಾಫಿ ಕುಟ್ಟ, ಪ್ರವೀಣ್ ಕುಮಾರ್ ಕೂಡಿಗೆ, ಪ್ರಶಾಂತ್ ಕೂಡಿಗೆ, ಶಫೀರ್ ಸಿದ್ದಾಪುರ, ಷಂಶುದ್ದೀನ್ ವೀರಾಜಪೇಟೆ ಮತ್ತು ಸಂದೇಶ್ ಶನಿವಾರಸಂತೆ ಆಯ್ಕೆಯಾದರು.
ಬ್ಲಾಕ್ ವಾರಿಯರ್ಸ್, ಸ್ಪೋಟ್ರ್ಸ್ ವಲ್ರ್ಡ್, ವಿರಾಟ್ ಕ್ರಿಕೆಟರ್ಸ್, ತಾಜ್ ತ್ಯಾಗತ್ತೂರು, ಟೀಂ ಕೂಲ್, ಫೈರ್ ಟೈಗರ್ಸ್, ತ್ಯಾಗ್ ಬಾಯ್ಸ್, ಎಸ್ಆರ್ ಎಸ್ ಮೂರ್ನಾಡು, ರಾಯಲ್ ಕುಕ್ಕುನ್ನೂರು, ಆಶಸ್ ಗೋಣಿಕೊಪ್ಪ, ಝಲ್ಲಾ ಕ್ರಿಕೆಟರ್ಸ್, ಬ್ಲಾಕ್ ಥಂಡರ್ಸ್, ಗ್ರೀನ್ಸ್ ಕ್ರಿಕೆಟರ್ಸ್ ಮತ್ತು ರಾಂಬೋ ಕ್ರಿಕೆಟರ್ಸ್ ಫ್ರಾಂಚೈಸಿಗಳು ಐಕಾನ್ ಆಟಗಾರರನ್ನು ಬಿಡ್ ಮೂಲಕ ಆಯ್ಕೆ ಮಾಡಿಕೊಂಡರು. ಕ್ರೀಡಾಕೂಟ ತಾ.27 ರಿಂದ ಸಿದ್ದಾಪುರದ ಕರಡಿಗೋಡುವಿನಲ್ಲಿ ನಡೆಯಲಿದೆ.