ಮಡಿಕೇರಿ, ಏ. 10: ಸಿದ್ದಾಪುರದಲ್ಲಿ ನಡೆಯಲಿರುವ ಕೆಸಿಎಲ್ ಕ್ರಿಕೆಟ್ ಪಂದ್ಯಾಟದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಹಿವಾಟಿನ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆ ನಡೆಸಬೇಕೆಂದು ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಬಲ್ಲಾರಂಡ ಕಂಠಿ ಕಾರ್ಯಪ್ಪ ಹಾಗೂ ಸಿದ್ದಾಪುರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಂದಿಕಂಡ ಅಶೋಕ್ ಇವರುಗಳು ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರುಗಳು ಕೆಸಿಎಲ್ ಪಂದ್ಯಾಟದ ಹೆಸರಿನಲ್ಲಿ ಅಕ್ರಮವಾಗಿ ಭಾರಿ ಮೊತ್ತದ ಬೆಟ್ಟಿಂಗ್, ಬಿಡ್ಡಿಂಗ್ ಮತ್ತು ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತಿರುವದಕ್ಕೆ ತೆರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆಯಿಂದ ನಿಯಮಾನುಸಾರ ಅನುಮತಿ ಪಡೆದಿದ್ದಾರೆಯೇ ಎಂದು ಪ್ರಾಯೋಜಕರು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು. ಪ್ರಸಕ್ತ ವರ್ಷ 14ಕ್ಕಿಂತ ಹೆಚ್ಚು ತಂಡ ಬಿಡ್ಡಿಂಗ್‍ನಲ್ಲಿ ಭಾಗವಹಿಸಿದೆ ಎಂದು ಆಯೋಜಕರೆ ಪತ್ರಿಕೆಗಳಲ್ಲಿ ಬಹಿರಂಗಪಡಿಸಿದ್ದಾರೆ. ಒಂದು ತಂಡದಲ್ಲಿ 15ಕ್ಕಿಂತ ಹೆಚ್ಚು ಆಟಗಾರರಿದ್ದು, ಪ್ರತಿ ಯುವಕರಿಂದ 500 ರೂಪಾಯಿಗಳನ್ನು ಸಂಗ್ರಹಿಸಲಾಗುತ್ತದೆ ಎಂದು ಪ್ರ್ರಾಯೋಜಕರೆ ಹೇಳಿದ್ದಾರೆ. ಅಲ್ಲದೇ ಪ್ರಾಂಚೈಸಿಗಳಿಂದಲೂ ಸಾವಿರಾರು ರೂಪಾಯಿ ಸಂಗ್ರಹಿಸುತ್ತಿದ್ದಾರೆ. ಗ್ರಾಮ ಪಂಚಾಯತಿಗಳಿಂದ, ಕಾಫಿ ಬೆಳೆಗಾರರು, ರಾಜಕಾರಣಿಗಳಿಂದ, ಸಾರ್ವಜನಿಕರಿಂದ ಪಂದ್ಯಾಟದ ಹೆಸರಿನಲ್ಲಿ ಕಳೆದ 4 ವರ್ಷಗಳಿಂದ ಲಕ್ಷಾಂತರ ರೂಪಾಯಿ ಹಣ ಸಂಗ್ರಹಿಸಲಾಗುತ್ತಿದೆ. ಕ್ಲಬ್‍ವೊಂದರ ಹೆಸರಿನಲ್ಲಿ ಪಂದ್ಯಾಟವನ್ನು ಆಯೋಜಿಸುತ್ತಿದ್ದು, ಒಂದು ಲಕ್ಷಕ್ಕೂ ಹೆಚ್ಚು ಮೊತ್ತದ ಬಹುಮಾನ ನೀಡಲು, ಲಕ್ಷಾಂತರ ರೂಪಾಯಿ ವೆಚ್ಚ ಭರಿಸಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲು ಇವರಿಗೆ ಎಲ್ಲಿಂದ ಭಾರಿ ಮೊತ್ತದ ಹಣ ಬರುತ್ತಿದೆ ಎಂಬ ಬಗ್ಗೆಯೂ ಸಂಬಂಧಿಸಿದ ಇಲಾಖೆ ತನಿಖೆ ಮಾಡಬೇಕೆಂದು ಆಗ್ರಹಿಸಿದ್ದಾರೆ.