ಮಡಿಕೇರಿ, ಏ. 10: ಎಸ್‍ಎಸ್‍ಎಲ್‍ಸಿ ಪರೀಕ್ಷಾ ಪತ್ರಿಕೆಗಳ ಮೌಲ್ಯ ಮಾಪನ ಕಾರ್ಯ ಇಂದಿನಿಂದ ಆರಂಭಗೊಂಡಿದೆ. ಕೊಡಗು ಜಿಲ್ಲೆಯಲ್ಲಿ ಈ ಕರ್ತವ್ಯಕ್ಕಾಗಿ 625 ಮೌಲ್ಯಮಾಪಕರು ನಿಯೋಜಿತರಾಗಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಮೌಲ್ಯಮಾಪನಕ್ಕಾಗಿ ಇತರೆಡೆಯಿಂದ ಸುಮಾರು 70 ಸಾವಿರದಷ್ಟು ಉತ್ತರ ಪತ್ರಿಕೆಗಳು ಬಂದಿವೆ.
ಮಡಿಕೇರಿಯ ಸಂತ ಮೈಕಲರ ಶಾಲೆಯ ಎರಡು ಕೇಂದ್ರಗಳಲ್ಲಿ ಬಿಗಿ ಭದ್ರತೆಯೊಂದಿಗೆ ಈ ಕಾರ್ಯ ಆರಂಭಗೊಂಡಿದೆ. ಕೇಂದ್ರದ ಆವರಣದಲ್ಲಿ ಸೆಕ್ಷನ್ 144 ರಂತೆ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದ್ದು, ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ. ಪ್ರಸಕ್ತ ವರ್ಷ ಮೌಲ್ಯಮಾಪನದ ಬಳಿಕ ಇದನ್ನು ಆ ದಿನವೇ ಆನ್‍ಲೈನ್ ಮೂಲಕ ದಾಖಲು (ಮೊದಲ ಪುಟದಿಂದ) ಮಾಡುವ ಹೊಸ ನಿಯಮವನ್ನು ಜಾರಿಗೊಳಿಸಲಾಗಿದೆ. ಮೌಲ್ಯಮಾಪನಕ್ಕೆ ನಿಯೋಜಿತರಾಗಿರುವ ಶಿಕ್ಷಕರು ಮೌಲ್ಯಮಾಪನದ ಬಳಿಕ ಅಂಕವನ್ನು ಅವರಿಗಾಗಿ ವಿಶೇಷ ಕೋಡ್ ವ್ಯವಸ್ಥೆಯೊಂದಿಗೆ ನೀಡಲಾಗಿರುವ ಲ್ಯಾಪ್‍ಟಾಪ್ ಮೂಲಕ ಆನ್‍ಲೈನ್‍ಗೆ ದಾಖಲು ಮಾಡಬೇಕಾಗಿದೆ. ಇವರು ಇದನ್ನು ದಾಖಲು ಮಾಡಿದ ಬಳಿಕ ಇವರ ಮೇಲ್ವಿಚಾರಕರಾದ ಜಂಟಿ ಮೌಲ್ಯಮಾಪಕರು ಇದನ್ನು ಮತ್ತೊಂದು ಕೋಡ್ ವ್ಯವಸ್ಥೆಯ ಮೂಲಕ ಪರಿಶೀಲಿಸಬೇಕಾಗುತ್ತದೆ. ಇವರಿಬ್ಬರ ಅಂಕಗಳು ಸರಿಯಾಗಿ ಹೊಂದಾಣಿಕೆಯಾದಲ್ಲಿ ಮಾತ್ರ ಇದು ಅಧಿಕೃತವಾಗಿ ದಾಖಲಾಗಲಿದೆ ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಚ್ಚಾಡೋ ಅವರು ತಿಳಿಸಿದ್ದಾರೆ.
ಓರ್ವ ಮೌಲ್ಯಮಾಪಕರು ಪ್ರತಿದಿನ ಸುಮಾರು 20 ರಿಂದ 26 ಪತ್ರಿಕೆಗಳ ಮೌಲ್ಯಮಾಪನ ಮಾಡಬೇಕಿದೆ. 625 ಮೌಲ್ಯಮಾಪಕರಿದ್ದರೆ ಪ್ರತಿ ವಿಷಯಕ್ಕೆ ಒಬ್ಬರು ಜಂಟಿ ಮೌಲ್ಯಮಾಪಕರು ಕರ್ತವ್ಯ ನಿಭಾಯಿಸುತ್ತಿದ್ದಾರೆ. ತಾ. 16ರ ವೇಳೆಗೆ ಹಿಂದಿ ಭಾಷೆ ಹೊರತುಪಡಿಸಿ ಇತರ ಪತ್ರಿಕೆಗಳ ಮೌಲ್ಯಮಾಪನ ಮುಕ್ತಾಯಗೊಳ್ಳುವ ಸಾಧ್ಯತೆ ಇರುವದಾಗಿ ಮಚ್ಚಾಡೋ ಅವರು ತಿಳಿಸಿದ್ದಾರೆ.