ಮಡಿಕೇರಿ, ಏ. 8: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಕಾರ್ಯವಿಧಾನದ ಬಗ್ಗೆ ಜನ ರೋಸಿಹೋಗಿದ್ದಾರೆ ಎಂದು ಬಿಜೆಪಿಯ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಇಚ್ಚಾಶಕ್ತಿಯಿಂದ ಆಡಳಿತ ನಡೆಸುವ ಬದಲಿಗೆ ನಿಂಬೆಹಣ್ಣನ್ನು ನಂಬಿಕೊಂಡು ಆಡಳಿತ ನಡೆಸಲಾಗುತ್ತಿದೆ ಎಂದು ಮೈತ್ರಿ ಸರ್ಕಾರದ ವಿರುದ್ದ ಟೀಕಾಪ್ರಹಾರ ನಡೆಸಿದರು. ಕರ್ನಾಟಕದಲ್ಲಿ ಕನಿಷ್ಟ 22 ಸ್ಥಾನಗಳನ್ನು ಬಿಜೆಪಿ ಪಡೆಯಲಿದೆ ಎಂದು ಭವಿಷ್ಯ ನುಡಿದರು.
ಮೋದಿ ಈ ದೇಶದ ಪ್ರಧಾನಿಯಾಗಿ ಮತ್ತೊಮ್ಮೆ ಅಧಿಕಾರ ಸ್ವೀಕರಿಸುವ ದಿನದಂದೇ ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನಗೊಳ್ಳಲಿದೆ ಎಂದು ಭವಿಷ್ಯ ನುಡಿದ ಅವರು, ಈವರೆಗೆ ಬಿಜೆಪಿ ಯಾವೆಲ್ಲಾ ಭರವಸೆಗಳನ್ನು ದೇಶದ ಜನತೆಗೆ ನೀಡಿತ್ತೋ; ಆ ಪೈಕಿ ಬಹುತೇಕವನ್ನು ಈಡೇರಿಸಿದ ತೃಪ್ತಿಯಿದೆ ಎಂದರು.
ಬಿಜೆಪಿ ಪ್ರಣಾಳಿಕೆ ಬಗ್ಗೆ ಮಾಹಿತಿ ನೀಡಿದ ಕೋಟಾ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್ ಉಗ್ರರನ್ನು ಬೆಂಬಲಿಸುವ ಅಂಶಗಳನ್ನು ಹೊಂದಿರುವ ಪ್ರಣಾಳಿಕೆ ನೀಡಿದರೆ ಬಿಜೆಪಿಯು ಭಯೋತ್ಪಾದಕರನ್ನು ಜೈಲಿಗಟ್ಟಿ ಉಗ್ರ ದಮನ ಮಾಡುವ ಸಂಕಲ್ಪದ ಅಂಶಗಳನ್ನು ಪ್ರಣಾಳಿಕೆಯಲ್ಲಿ ಹೊಂದಿದೆ. ಬಿಜೆಪಿ ಸರ್ಕಾರದ ಪ್ರಣಾಳಿಕೆಯಲ್ಲಿ ದೇಶದ ಭದ್ರತೆಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದರು. ದೇಶದ 130 ಕೋಟಿ ಜನರಿಗೆ ಒಂದಲ್ಲ ಒಂದು ರೀತಿಯಲ್ಲಿ ಆರ್ಥಿಕ, ಶೈಕ್ಷಣಿಕ, ಜೀವನ ಭದ್ರತೆ ನೀಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವ ಅಂಶಗಳನ್ನೂ ಪ್ರಣಾಳಿಕೆ ಹೊಂದಿದೆ ಎಂದೂ ಕೋಟಾ ಶ್ರೀನಿವಾಸ ಪೂಜಾರಿ ವಿವರಿಸಿದರು. ದೇಶ ಮೊದಲು ಎಂಬ ವಿಚಾರಕ್ಕೆ ಬಿಜೆಪಿ ಒತ್ತು ನೀಡಿದ್ದು, ನೀಡಲಾಗಿರುವ ಭರವಸೆಯಂತೆ ನಡೆಯುತ್ತೇವೆ ಎಂದೂ ಹೇಳಿದರು. ಮೈಸೂರು ಕೊಡಗು ಕ್ಷೇತ್ರದಲ್ಲಿ ಬಿಜೆಪಿಯ ಪ್ರತಾಪ್ ಸಿಂಹ ಅತ್ಯಧಿಕ ಅಂತರದ ಮತಗಳಿಂದ ಗೆಲ್ಲಲಿದ್ದಾರೆ ಎಂದರು.
ವಿಧಾನಪರಿಷತ್ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ, ಮಡಿಕೇರಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಜೈನಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಅರುಣ್ ಕುಮಾರ್, ನಾಪಂಡ ರವಿಕಾಳಪ್ಪ, ಮಡಿಕೇರಿ ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಜಗದೀಶ್, ಉಮೇಶ್ ಸುಬ್ರಮಣಿ, ಶಜೀಲ್ ಕೃಷ್ಣ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಕಾಳನ ರವಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.