ಮಡಿಕೇರಿ, ಏ.8 : ಅರಣ್ಯ ಹಕ್ಕು ಕಾಯ್ದೆಯ ಜಾರಿ ಸೇರಿದಂತೆ ಆದಿವಾಸಿಗಳ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ತಮ್ಮ ಪ್ರಣಾಳಿಕೆಯ ಮೂಲಕ ಭರವಸೆ ನೀಡುವ ಅಭ್ಯರ್ಥಿಗಳಿಗೆ ನಮ್ಮ ಬೆಂಬಲವೆಂದು ಘೋಷಿಸಿರುವ ಬುಡಕಟ್ಟು ಕೃಷಿಕರ ಸಂಘ, ಕೇವಲ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಆದಿವಾಸಿಗಳನ್ನು ಬಳಸಿಕೊಳ್ಳುತ್ತಿರುವ ರಾಜಕೀಯ ಪಕ್ಷಗಳಿಗೆ ಈ ಬಾರಿಯ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವದಾಗಿ ಎಚ್ಚರಿಕೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಮುಖರು, ಪ್ರಸ್ತುತ ಕೊಡಗು ಮತ್ತು ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪಧಿಸಿರುವ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ತಮಗೆ ಅಧಿಕಾರವಿದ್ದ ಅವಧಿಯಲ್ಲಿ ಅರಣ್ಯ ವಾಸಿಗಳ ಸಂಕಷ್ಟಗಳಿಗೆ ಸ್ವಲ್ಪವೂ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಆದಿವಾಸಿಗಳು ಮತಗಟ್ಟೆಗೆ ತೆÀರಳಬೇಕೇ, ಬೇಡವೇ ಎನ್ನುವ ಬಗ್ಗೆ ಮತ್ತು ತಮ್ಮ ಸಂಕಷ್ಟಗಳಿಗೆ ಸ್ಪಂದಿಸುವ ಯಾರನ್ನು ಬೆಂಬಲಿಸಬೇಕೆನ್ನುವ ಬಗ್ಗೆ ಇದೇ ಏಪ್ರಿಲ್ 15ರ ಒಳಗಾಗಿ ತೀರ್ಮಾನ ಕೈಗೊಳ್ಳುವದಾಗಿ ತಿಳಿಸಿದರು.

ನ್ಯಾಷನಲ್ ಆದಿವಾಸಿ ಅಲಾಯನ್ಸ್ ರಾಷ್ಟ್ರೀಯ ಸಂಚಾಲಕ ವಿ.ಎಸ್. ರಾಯ್ ಡೇವಿಡ್ ಮಾತನಾಡಿ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅರಣ್ಯ ಹಕ್ಕು ಮಾನ್ಯತೆಗೆ ಅರ್ಹವಾದ 196 ಹಳ್ಳಿಗಳಿದ್ದು, 2,01,695 ಆದಿವಾಸಿ ಮತದಾರರಿದ್ದಾರೆ. ಈ ಅರಣ್ಯ ವಾಸಿಗಳಿಗೆ ಅರಣ್ಯ ಹಕ್ಕು ಕಾಯ್ದೆಯ ಜಾರಿಯಲ್ಲಿ ಆಗಿರುವ ಲೋಪ ಮತ್ತು ಚಾರಿತ್ರಿಕವಾದ ಅನ್ಯಾಯವನ್ನು ಯಾರು ಸರಿಪಡಿಸುತ್ತಾರೋ ಅಂತಹವರನ್ನು ಬೆಂಬಲಿಸುವ ಅನಿವಾರ್ಯತೆ ಇದೆ ಎಂದು ಸ್ಪಷ್ಟಪಡಿಸಿದರು.

ಅರಣ್ಯ ಹಕ್ಕು ಕಾಯ್ದೆಗೆ ಸಂಬಂಧಿಸಿದಂತೆ ಫೆಬ್ರವರಿಯಲ್ಲಿ ಸರ್ವೋಚ್ಚ ನ್ಯಾಯಾಲಯವು ತೀರ್ಪೋಂದನ್ನು ನೀಡಿ, ಅದರಲ್ಲಿ ವೈಯಕ್ತಿಕ ಮತ್ತು ಸಮುದಾಯದ ಹಕ್ಕು ಇಲ್ಲದವರನ್ನು ಅರಣ್ಯದಿಂದ ಹೊರ ಹಾಕುವಂತೆ ಸೂಚಿಸಿದೆ. ಇಂತಹ ಒಂದು ಆದಿವಾಸಿಗಳ ವಿರುದ್ಧವಾದ ಏಕಪಕ್ಷೀಯವಾದ ತೀರ್ಪು ಬರುವದಕ್ಕೆ ನಮ್ಮನ್ನಾಳುವವರ ಲೋಪವೇ ಪ್ರಮುಖ ಕಾರಣ. ನ್ಯಾಯಾಲಯಕ್ಕೆ ಸೂಕ್ತ ಮಾಹಿತಿ ಯನ್ನು ಆಯಾ ಸಂದರ್ಭಗಳಲ್ಲಿ ಸಲ್ಲಿಸಿಲ್ಲವೆಂದು ತಿಳಿಸಿ, ಇನ್ನಾದರು ಆದಿವಾಸಿಗಳನ್ನು ಹೊಂದಿರುವ ಪ್ರತಿ ರಾಜ್ಯವೂ ತೀರ್ಪಿನ ಪುನರ್ ಪರಿಶೀಲನೆಗೆ ಅರ್ಜಿಯನ್ನು ಸಲ್ಲಿಸಬೇಕೆಂದು ಆಗ್ರಹಿಸಿದರು.

ಜಿಲ್ಲಾ ಬುಡಕಟ್ಟು ಕೃಷಿಕರ ಸಂಘದ ಜಿಲ್ಲಾಧ್ಯಕ್ಷ ಜೆ.ಪಿ.ರಾಜು ಮಾತನಾಡಿ, ಅರಣ್ಯ ಹಕ್ಕು ಕಾಯ್ದೆ ಹಲವಾರು ವರ್ಷಗಳ ಹೋರಾಟ ದಿಂದ ಜಾರಿಗೆ ಬಂದಿದ್ದರು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಇದನ್ನು ಸಮರ್ಪಕವಾಗಿ ಜಾರಿ ಮಾಡುತ್ತಿಲ್ಲ. ಕ್ಷೇತ್ರದ ಶಾಸಕರು ಮತ್ತು ಸಂಸದರು ಅರಣ್ಯ ವಾಸಿಗಳ ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಯತ್ನಗಳಿಗೆ ಮುಂದಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆದಿವಾಸಿಗಳ ಹಿತಕ್ಕೆ ಪೂರಕವಾದ 21 ಅಂಶಗಳ ಪ್ರಣಾಳಿಕೆಗಳ ಬಗ್ಗೆ ರಾಜಕೀಯ ಪಕ್ಷÀಗಳು ತಮ್ಮ ಅಭಿಪ್ರಾಯಗಳನ್ನು ತಿಳಿಸಿದಲ್ಲಿ ತಮ್ಮ ನಿಲುವು ಸ್ಪಷ್ಟಪಡಿಸುವದಾಗಿ ತಿಳಿಸಿದರು.

ಸೋಮವಾರಪೇಟೆ ತಾಲೂಕು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಆರ್.ಕೆ.ಚಂದ್ರ ಮಾತನಾಡಿ, ಈ ಕ್ಷೇತ್ರದ ಸಂಸದರು ತಮ್ಮ ಅಧಿಕಾರದ ಅವಧಿಯಲ್ಲಿ ಆದಿವಾಸಿಗಳ ಬದುಕನ್ನು ಉತ್ತಮ ಪಡಿಸಲು ಯಾವ ಕಾಳಜಿ ತೋರಿದ್ದಾರೆ ಎಂದು ಪ್ರಶ್ನಿಸಿದರು.

ಈ ಹಿಂದೆ ಅರಣ್ಯ ಸಚಿವರಾಗಿ, ಸಂಸದರಾಗಿ ಕಾರ್ಯ ನಿರ್ವಹಿಸಿ ದವರು ಇಂದು ಚುನಾವಣೆಗೆ ನಿಂತಿದ್ದಾರೆ. ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಅರಣ್ಯ ಹಕ್ಕು ಕಾಯ್ದೆ ಜಾರಿಯಾಗದಂತೆ ತಡೆಯುವ ಪ್ರಯತ್ನ ಮಾಡಿದ್ದರು ಎಂದು ಆರೋಪಿಸಿದರು.

ಮಡಿಕೇರಿ ತಾಲೂಕು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕುಡಿಯರ ಮುತ್ತಪ್ಪ ಮಾತನಾಡಿ, ಈ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಪ್ರಮುಖ ರಾಜಕೀಯ ಪಕ್ಷದ ಇಬ್ಬರು ಅಭ್ಯರ್ಥಿಗಳು ಒಂದೇ ಆಗಿದ್ದಾರೆ. ಈ ಕ್ಷೇತ್ರದ ಸಂಸದ ರಾಗಿದ್ದವರು ತಮ್ಮ ಅವಧಿಯಲ್ಲಿ ಆದಿವಾಸಿಗಳ ಕಲ್ಯಾಣಕ್ಕೆ ಎಷ್ಟು ಅನುದಾನವನ್ನು ವಿನಿಯೋಗಿಸಿ ದ್ದಾರೆ ಎಂದು ಪ್ರಶ್ನಿಸಿದರು. ಇವರೆಲ್ಲರು ಅಧಿಕಾರದ ಅವಧಿಯಲ್ಲಿ ನೆಪ ಹೇಳಿಕೊಂಡು ಕಾಲಕಳೆದಿದ್ದಾರೆಯೇ ಹೊರತು ಏನನ್ನೂ ಮಾಡಿಲ್ಲವೆಂದು ಆರೋಪಿಸಿದ ಅವರು, ಡಾ.ಕಸ್ತೂರಿ ರಂಗನ್ ವರದಿ ಜಾರಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನ ಹೆಗಲಿಗಿರಲಿ ಎಂದು ಹೇಳಿದವರು ಈಗ ಎಲ್ಲಿಗೆ ಹೋಗಿದ್ದಾರೆ ಎಂದು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ನಾಗರಹೊಳೆಯ ಜೆ.ಕೆ.ತಿಮ್ಮ ಹಾಗೂ ಅವರೆಗುಂದದ ಎಂ.ಸಿ.ವಾಸು ಉಪಸ್ಥಿತರಿದ್ದರು.

ಆದಿವಾಸಿಗಳ 21 ಅಂಶಗಳ ಬೇಡಿಕೆ

ಕೊಡಗು-ಮೈಸೂರು ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ವಿವಿಧ ರಾಜಕೀಯ ಪಕ್ಷಗಳು ಆದಿವಾಸಿಗಳ 21 ಅಂಶಗಳ ಬೇಡಿಕೆಗಳನ್ನು ತಮ್ಮ ಪ್ರಣಾಳಿಕೆಯಲ್ಲಿ ನಮೂದಿಸಬೇಕೆಂದು ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.

ಪ್ರಮುಖವಾಗಿ ಆದಿವಾಸಿಗಳು, ಅರಣ್ಯವಾಸಿಗಳು, ಮೀನುಗಾರರು ಮತ್ತು ಬೆಟ್ಟಪ್ರದೇಶ ವಾಸಿಗಳ ಸಂಖ್ಯೆ ಪ್ರಧಾನವಾಗಿರುವ ಪ್ರÀದೇಶಗಳಲ್ಲಿ ಸ್ವಯಂ ಆಡಳಿತಕ್ಕಾಗಿ ಸ್ವತಂತ್ರ ಆಡಳಿತ ಪರಿಷತ್ತುಗಳನ್ನು ಸ್ಥಾಪಿಸಬೇಕು, ಅರಣ್ಯ ಮತ್ತು ಸಾಗರ ಸಂಪನ್ಮೂಲಗಳ ಮೇಲೆ ನಮ್ಮ ಜನಗಳಿಗಿರುವ ಹಕ್ಕುಗಳ ಮೇಲಿರುವ ತಡೆಯನ್ನು ರದ್ದುಗೊಳಿಸಬೇಕು, ಸಂರಕ್ಷಣೆಯ ಹೆಸರಿನಲ್ಲಿ ನಮ್ಮನ್ನು ಸ್ಥಳಾಂತರ ಗೊಳಿಸುವದನ್ನು ನಿಲ್ಲಿಸಬೇಕು.

ಅರಣ್ಯ ಹಕ್ಕು ಕಾಯ್ದೆ 2006ನ್ನು ವೈಯಕ್ತಿಕ ಮತ್ತು ಸಾಮುದಾಯಿಕ ಎರಡು ರೀತಿಯ ಹಕ್ಕುಗಳಡಿ ಯಲ್ಲಿಯೂ ಸಂಪನ್ಮೂಲಗಳ ನಿರ್ವಹಣೆಯ ಮೇಲೆ ಅಧಿಕಾರ ನೀಡುವಂತೆ ಅನುಷ್ಠಾನ ಗೊಳಿಸಬೇಕು. ಆದಿವಾಸಿ ಪ್ರದೇಶಗಳಲ್ಲಿ ಈಗಿರುವ ಗ್ರಾಮ ಸಭೆಗಳನ್ನು ನೆರೆಯ ಪಂಚಾ ಯಿತಿಗಳ ಉಪ ಪ್ರದೇಶಗಳೆಂದು ಪರಿಗಣಿಸಲಾಗುತ್ತಿದೆ. ಹಾಗಾಗಿ ಗ್ರಾಮ ಪಂಚಾಯಿತಿ ಕಾಯ್ದೆಗಳಲ್ಲಿ ವಿವಿಧೆಡೆ ಇರುವ ಇಂತಹ ಕಾನೂನುಗಳನ್ನು ರದ್ದುಪಡಿಸಿ ಗ್ರಾಮ ಸಭೆಗಳಿಗೆ ಸ್ವತಂತ್ರ ಅಸ್ತಿತ್ವವನ್ನು ರೂಪಿಸಬೇಕು ಅಥವಾ ಸ್ವತಂತ್ರ ಗೊಳಿಸಬೇಕು, ಪೇಸ ಕಾಯ್ದೆಯನ್ನು ಆದಿವಾಸಿ ವಸತಿಗಳ ಹತ್ತಿರದ 5ನೇ ಷೆಡ್ಯೂಲ್‍ಗೆ ಒಳಗೊಳ್ಳದ ಪ್ರದೇಶಗಳಿಗೂ ಅನ್ವಯಿಸಬೇಕು. 2007ರಲ್ಲಿ ಕರ್ನಾಟಕ ರಾಜ್ಯದಲ್ಲಿ ಒಟ್ಟು 21 ಪ್ರದೇಶಗಳಲ್ಲು ಕ್ರಿಟಿಕಲ್ ಟೈಗರ್ ಹೆಬಿಟೆಟ್ ಎಂದು ಘೋಷಿಸಿರುವದು ಅರಣ್ಯ ಹಕ್ಕು ಕಾಯ್ದೆ 2006 ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಈ ಪ್ರದೇಶಗಳನ್ನು ಬದಲಿಸಬೇಕು.

ಅಭಯಾರಣ್ಯಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳ ನಿರ್ವಹಣೆಯನ್ನು ಗ್ರಾಮ ಸಭೆಗಳಿಗೆ ವಹಿಸಬೇಕು. 1927ರ ಅರಣ್ಯ ಕಾಯ್ದೆಯೊಂದಿಗೆ ಹೊಸ ಕಾಯ್ದೆ ಮತ್ತು ಸಿಎಎಫ್ ನ ಕರಡನ್ನು ಸಂಪೂರ್ಣ ಅನೂರ್ಜಿತ ಗೊಳಿಸ ಬೇಕು ಸೇರಿದಂತೆ 21 ಅಂಶಗಳನ್ನು ತೋರಿಸಲಾಗಿದೆ.