ಕಾಂಗ್ರೆಸ್‍ಗೆ ಸಾಂಗ್ಲಿಯಾನ ರಾಜೀನಾಮೆ

ಬೆಂಗಳೂರು, ಏ. 8: ಲೋಕಸಭಾ ಚುನಾವಣೆಯಲ್ಲಿ ಕ್ರೈಸ್ತ ಸಮುದಾಯಕ್ಕೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬೇಸರಗೊಂಡು ಮಾಜಿ ಸಂಸದ ಎಚ್.ಟಿ.ಸಾಂಗ್ಲಿಯಾನ ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ರಾಜೀನಾಮೆ ಪತ್ರ ಬರೆದಿರುವ ಎಚ್.ಟಿ.ಸಾಂಗ್ಲಿಯಾನ, ಕಳೆದ ಲೋಕಸಭಾ ಅವಧಿಯಲ್ಲಿ ತಮ್ಮೊಂದಿಗೆ ಕೆಲಸ ಮಾಡಿದ್ದೇನೆ. ಪಕ್ಷದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯನಾಗಿ ಚುನಾವಣೆ ಪ್ರಚಾರ ಸೇರಿದಂತೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಆದರೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಒಂದೂ ಕ್ಷೇತ್ರವನ್ನು ಕ್ರೈಸ್ತ ಸಮುದಾಯಕ್ಕೆ ಬಿಟ್ಟುಕೊಡದೆ ಕಾಂಗ್ರೆಸ್ ನಾಯಕರು ಕಡೆಗಣಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯ ನಾಯಕರು ಹಾಗೂ ಪಕ್ಷದ ಹೈಕಮಾಂಡ್ ಸಹ ಕ್ರೈಸ್ತ ಸಮುದಾಯದ ಹಿತ ಕಾಪಾಡುವಲ್ಲಿ ವಿಫಲವಾಗಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ಸ್ಥಾನ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಪತ್ರದಲ್ಲಿ ಮಾಜಿ ಸಂಸದ ಉಲ್ಲೇಖಿಸಿದ್ದಾರೆ. ಬೆಂಗಳೂರು ಉತ್ತರ ಅಥವಾ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಎಚ್.ಟಿ.ಸಾಂಗ್ಲಿಯಾನ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿರಲಿಲ್ಲ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಎಚ್ಚರಿಕೆ ನೀಡಿದ್ದ ಅವರು ಪಕ್ಷ ಟಿಕೆಟ್ ನೀಡದಿದ್ದಲ್ಲಿ ಪಕ್ಷೇತರನಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದರು. ಆದರೆ ಕೊನೆ ಕ್ಷಣದಲ್ಲಿ ನಾಮಪತ್ರ ಸಲ್ಲಿಸದೆ ಸುಮ್ಮನಾಗಿದ್ದರು.

ಆರ್‍ಟಿಐ ಕಾರ್ಯಕರ್ತರ ವಿರುದ್ಧ ಅಸಮಾಧಾನ

ಬೆಂಗಳೂರು, ಏ. 8: ಕಾನೂನುಬದ್ಧವಾಗಿ ಕಟ್ಟಡ ನಿರ್ಮಿಸಿದ್ದರೂ, ಅದರ ಮಾಲೀಕರಿಗೆ ಸ್ವಾಧೀನ ಪತ್ರ ನೀಡದೆ ಸತಾಯಿಸುತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು(ಬಿಬಿಎಂಪಿ) ಮತ್ತೆ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಮಧ್ಯವರ್ತಿಗಳು ಹಾಗೂ ಆರ್ ಟಿಐ ಕಾರ್ಯಕರ್ತರು ಜನಸಾಮಾನ್ಯರನ್ನು ಸುಲಿಗೆ ಮಾಡಲು ನಿಂತಿದ್ದಾರೆ ಎಂದು ಕಿಡಿಕಾರಿದೆ. ಹುಳಿಮಾವು ಹೋಬಳಿಯಲ್ಲಿ ವಾಲ್ ಮಾರ್ಕ್ ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಸ್ವಾಧೀನ ಪತ್ರ ನೀಡಲು ಬಿಬಿಎಂಪಿ ನಿರಾಕರಿಸುತ್ತಿದೆ ಎಂದು ಆರೋಪಿಸಿ ನಾಕೋಡ ಕನ್ ಸ್ಟ್ರಕ್ಷನ್ ಕಂಪನಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್.ಎನ್.ಸತ್ಯನಾರಾಯಣ ಅವರಿದ್ದ ಏಕಸದಸ್ಯ ಪೀಠ, ಬಿಬಿಎಂಪಿಯ ಅಧಿಕಾರಿಗಳು ಸಮಾಜಘಾತಕ ಶಕ್ತಿಗಳಾಗಿದ್ದಾರೆ. ಕೇವಲ ಸುಲಿಗೆಯಲ್ಲಿ ತೊಡಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಕಾನೂನುಬದ್ಧವಾಗಿದ್ದರೂ, ಕಟ್ಟಡದ ನೋಂದಣಿ ಮಾಡದಂತೆ ವರದಿ ನೀಡಿರುವ ಬೆಂಗಳೂರು ದಕ್ಷಿಣ ಉಪ ವಿಭಾಗಾಧಿಕಾರಿ ಎಲ್.ಸಿ.ನಾಗರಾಜ್ ಅವರನ್ನು ಕೂಡ ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ನಾಗರಾಜ್ ಅವರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯ ಸಂಪೂರ್ಣ ವಿವರ ಒದಗಿಸುವಂತೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಗೆ ಸೂಚಿಸಿ ವಿಚಾರಣೆಯನ್ನು ಏ. 12ಕ್ಕೆ ಮುಂದೂಡಿತು.

ಎಫ್-16 ಯುದ್ಧ ವಿಮಾನ ಪತನ ನಿಜ

ನವದೆಹಲಿ, ಏ. 8: ಅಮೆರಿಕ ಪಾಕಿಸ್ತಾನಕ್ಕೆ ನೀಡಿದ್ದ ಎಲ್ಲ ಎಫ್-16 ಯುದ್ಧ ವಿಮಾನಗಳು ಸುರಕ್ಷಿತವಾಗಿವೆ ಎಂಬ ಮ್ಯಾಗಜಿನ್ ವರದಿಯನ್ನು ಭಾರತೀಯ ವಾಯುಸೇನೆ ತಳ್ಳಿ ಹಾಕಿದ್ದು, ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಕ್ಕೆ ತನ್ನ ವಿಮಾನಗಳ ರಾಡಾರ್ ಇಮೇಜ್ ಅನ್ನು ಸಾಕ್ಷಿಯಾಗಿ ನೀಡಿದೆ. ಪಾಕಿಸ್ತಾನದ ಹಸಿ ಸುಳ್ಳುನ್ನು ಭಾರತೀಯ ವಾಯು ಸೇನೆ ಮತ್ತೊಮ್ಮೆ ಬಟಾಬಯಲು ಮಾಡಿದ್ದು, ಕಳೆದ ಫೆಬ್ರವರಿಯಲ್ಲಿ ನಡೆದಿದ್ದ ಬಾಲಾಕೋಟ್ ವಾಯುದಾಳಿ ಬಳಿಕ ಪಾಕಿಸ್ತಾನದ ಎಫ್-16 ಯುದ್ದ ವಿಮಾನಗಳು ಭಾರತೀಯ ವಾಯುಗಡಿ ಪ್ರವೇಶಿಸಿದ್ದವು. ಈ ವೇಳೆ ಭಾರತೀಯ ಪೈಲಟ್ ಅಭಿನಂದನ್ ವರ್ಧಮಾನ್ ಮತ್ತು ಇತರೆ ಪೈಲಟ್ ಗಳು ಮಿಗ್ 21 ಬೈಸನ್ ಸೇರಿದಂತೆ ವಿವಿಧ ಯುದ್ಧ ವಿಮಾನಗಳ ಮೂಲಕ ಪಾಕಿಸ್ತಾನಿ ಜೆಟ್ ಗಳನ್ನು ಹಿಮ್ಮೆಟ್ಟಿಸಿದ್ದರು. ಈ ವೇಳೆ ಭಾರತೀಯ ಪೈಲಟ್ ಅಭಿನಂದನ್ ವರ್ತಮಾನ್ ಪಾಕಿಸ್ತಾನ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದರು. ಅಂತೆಯೇ ಈ ಕಾಳಗದಲ್ಲಿ ಅಭಿನಂದನ್ ಚಲಾಯಿಸುತ್ತಿದ್ದ ಮಿಗ್ 21 ಬೈಸನ್ ಯುದ್ಧ ವಿಮಾನ ಕೂಡ ಪತನವಾಗಿತ್ತು. ಬಳಿಕ ಅಭಿನಂದನ್ ರನ್ನು ಪಾಕಿಸ್ತಾನ ಸೇನೆ ಬಂಧಿಸಿ ಬಳಿಕ ಬಿಡುಗಡೆ ಮಾಡಿತ್ತು. ಇದೀಗ ಪಾಕಿಸ್ತಾನ ತನ್ನ ಯಾವುದೇ ಎಫ್-16 ಯುದ್ಧ ವಿಮಾನವನ್ನು ಭಾರತ ಹೊಡೆದುರುಳಿಸಿಲ್ಲ. ಭಾರತದ ಮೇಲೆ ದಾಳಿಗೆ ತಾನು ಅಮೆರಿಕ ನೀಡಿದ್ದ ಎಫ್-16 ಯುದ್ಧ ವಿಮಾನವನ್ನು ಬಳಕೆ ಮಾಡಿಲ್ಲ ಎಂದು ವಾದಿಸಿತ್ತು. ಅಲ್ಲದೆ ಅಮೆರಿಕದ ಮೂಲದ ಮ್ಯಾಗಜಿನ್ ವೊಂದು ಪಾಕಿಸ್ತಾನಕ್ಕೆ ಅಮೆರಿಕ ನೀಡಿರುವ ಎಲ್ಲ ಎಫ್-16 ಯುದ್ಧ ವಿಮಾನಗಳು ಸುರಕ್ಷಿತವಾಗಿವೆ. ಹೀಗಾಗಿ ಭಾರತದ ವಾದದಲ್ಲಿ ಹುರುಳಿಲ್ಲ ಎಂಬರ್ಥದಲ್ಲಿ ವರದಿ ಪ್ರಕಟಿಸಿತ್ತು.

ವಿಜಯಮಲ್ಯ ಗಡಿಪಾರು ಶೀಘ್ರ

ಲಂಡನ್, ಏ. 8: ವಿವಿಧ ರಾಷ್ಟ್ರೀಯ ಬ್ಯಾಂಕ್ ಗಳಲ್ಲಿ ಸುಮಾರು 9 ಸಾವಿರ ಕೋಟಿ ರೂ. ಬಾಕಿ ಉಳಿಸಿಕೊಂಡು ಬ್ರಿಟನ್‍ಗೆ ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯ ಅವರು ಗಡಿಪಾರು ಆದೇಶದ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ಯುಕೆ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ. 62 ವರ್ಷದ ವಿಜಯ್ ಮಲ್ಯ ಅವರು 9 ಸಾವಿರ ಕೋಟಿ ರುಪಾಯಿ ವಂಚನೆ ಹಾಗೂ ಹಣ ಅಕ್ರಮ ವರ್ಗಾವಣೆ ಆರೋಪ ಎದುರಿಸುತ್ತಿದ್ದು, ಭಾರತಕ್ಕೆ ಬೇಕಾಗಿದ್ದಾರೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ವಿಜಯ್ ಮಲ್ಯ ಗಡಿಪಾರು ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ್ದ ಲಂಡನ್ ವೆಸ್ಟ್ ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್, ಹಣಕಾಸಿನ ವಿಚಾರದಲ್ಲಿ ಹಾಗೂ ವಂಚನೆಗೆ ಸಂಬಂಧಪಟ್ಟಂತೆ ಮಲ್ಯ ವಿರುದ್ಧದ ಆರೋಪಗಳಿಗೆ ಸಾಕ್ಷ್ಯಗಳಿವೆ ಎಂದು ಹೇಳಿ, ಗಡಿಪಾರು ಮಾಡಲು ಆದೇಶ ನೀಡಿತ್ತು. ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ಪ್ರಶ್ನಿಸಿ ಮಲ್ಯ ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಹೈಕೋರ್ಟ್ ನಲ್ಲೂ ಮದ್ಯದ ದೊರೆಗೆ ಹಿನ್ನಡೆಯಾಗಿದ್ದು, ಶೀಘ್ರದಲ್ಲೇ ಭಾರತಕ್ಕೆ ಗಡಿಪಾರು ಮಾಡುವ ಸಾಧ್ಯತೆ ಇದೆ.

ಬಿಎಸ್‍ಎನ್‍ಎಲ್‍ಗೆ 12,000 ಕೋಟಿ ನಷ್ಟ

ನವದೆಹಲಿ, ಏ. 8: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್ ಎನ್ ಎಲ್ ನ 2018-19 ನೇ ಸಾಲಿನ ನಷ್ಟದ ಮೊತ್ತ 12,000 ಕೋಟಿ ರೂಪಾಯಿ ದಾಟಿರುವ ಸಾಧ್ಯತೆ ಇದೆ. ಸಂಸ್ಥೆಗೆ ಸರ್ಕಾರದ ಇತರ ಯೋಜನೆಗಳಿಂದ ಬರುತ್ತಿರುವ ಆದಾಯವನ್ನೂ ಸೇರಿಸಿದರೆ ನಷ್ಟ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ತೋರುತ್ತದೆ ಎಂಬುದು ಇತ್ತೀಚಿನ ಆಡಳಿತ ಮಂಡಳಿ ಸಭೆಯ ಅಭಿಪ್ರಾಯ. ಆದರೆ ಬಿಎಸ್‍ಎನ್‍ಎಲ್ ನೀಡುತ್ತಿರುವ ಸೇನೆಗಳಿಂದ ಬರುವ ಆದಾಯವನ್ನು ಪರಿಗಣಿಸಿದರೆ ಈ ವರ್ಷದ ನಷ್ಟ 12,000 ಕೋಟಿಯಷ್ಟಾಗಿದೆ. ಕಳೆದ ವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಬಿಎಸ್‍ಎನ್‍ಎಲ್ ನ ಮಾನವ ಸಂಪನ್ಮೂಲ ವಿಷಯಗಳ ಬಗ್ಗೆ ಚರ್ಚೆ ನಡೆದಿತ್ತು. ಏ.16 ರಂದು ಮತ್ತೊಂದು ಸಭೆ ನಡೆಯಲಿದ್ದು ಇತರ ಹೂಡಿಕೆ ಯೋಜನೆಗಳ ಜೊತೆಗೆ ಈಗಿನ ಟ್ರೆಂಡ್ ಬಗ್ಗೆಯೂ ಚರ್ಚಿಸಲಿದೆ. ಫೆಬ್ರವರಿ ತಿಂಗಳ ಬಳಿಕ ಬಿಎಸ್‍ಎನ್‍ಎಲ್ ಗೆ ಆರ್ಥಿಕ ಸಂಕಷ್ಟ ತೀವ್ರವಾಗಿ ಕಾಡಲು ಪ್ರಾರಂಭವಾಗಿದ್ದು, ನಷ್ಟದ ಪ್ರಮಾಣ ಶೇ.50 ರಷ್ಟು ಏರಿಕೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಸತತ 13 ವರ್ಷಗಳಿಂದ ಬಿಎಸ್‍ಎನ್‍ಎಲ್ ನಷ್ಟದಲ್ಲಿದೆ. ಆದರೆ ಸರ್ಕಾರಿ ಸ್ವಾಮ್ಯದ ಸಂಸ್ಥೆ ನಷ್ಟದ ಮೊತ್ತವನ್ನು ಪ್ರಕಟಿಸಿಲ್ಲ. ಆದರೆ ಸಂಸತ್ ನಲ್ಲಿ ಟೆಲಿಕಾಂ ಸಚಿವರು ಬಹಿರಂಗಪಡಿಸಿದ ಮಾಹಿತಿಯ ಆಧಾರದಲ್ಲಿ ನಷ್ಟದ ಮೊತ್ತ ತಿಳಿದುಬಂದಿದೆ. ಫೆಬ್ರವರಿ ತಿಂಗಳಲ್ಲಿ ಬಿಎಸ್‍ಎನ್‍ಎಲ್ ಎದುರಿಸಿದ್ದ ವೇತನ ಸಮಸ್ಯೆಯನ್ನು ಆಧಾರವಾಗಿಟ್ಟುಕೊಂಡು ಹಲವು ರೀತಿಯ ವಿಶ್ಲೇಷಣೆಗಳನ್ನು ಮಾಡಲಾಗಿತ್ತು. ಕೋಟಕ್ ಈಕ್ವೆಟೀಯ ವಿಶ್ಲೇಷಣೆಯ ಪ್ರಕಾರ ಬಿಎಸ್‍ಎನ್‍ಎಲ್ ನ ಒಟ್ಟಾರೆ ನಷ್ಟದ ಮೊತ್ತ 90,000 ಕೋಟಿ ದಾಟಿರುವ ಸಾಧ್ಯತೆ ಇದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗೆ ನಷ್ಟ ಸರಿದೂಗಿಸುವುದರ ಜೊತೆಗೆ ಸಾಲ ಮರುಪಾವತಿ ಹೊಣೆಗಾರಿಕೆಯೂ ಇದ್ದು, 15,000 ಕೋಟಿ ರೂಪಾಯಿ ಸಾಲ ಹೊಂದಿದೆ.