ನವದೆಹಲಿ, ಏಪ್ರಿಲ್ 8: ಲೋಕಸಭಾ ಚುನಾವಣೆಯ ಪ್ರಥಮ ಹಂತದ ಮತದಾನಕ್ಕೆ ಮೂರು ದಿನ(ಏಪ್ರಿಲ್ 11) ಬಾಕಿ ಇರುವಾಗ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಇಂದು ಬಿಡುಗಡೆ ಮಾಡಿದ್ದು, ರಾಷ್ಟ್ರೀಯ ಭದ್ರತೆಗೆ ಮೊದಲ ಆದ್ಯತೆ ನೀಡಿದೆ. ದೇಶವನ್ನು ಅಭಿವೃದ್ಧಿಶೀಲ ರಾಷ್ಟ್ರದಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಬದಲಿಸುವದೇ ನಮ್ಮ ಮೂಲ ಉದ್ದೇಶ ಎಂದು ಪ್ರಣಾಳಿಕೆ ಬಿಡುಗಡೆಯ ನಂತರ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ತನ್ನ ಪ್ರಣಾಳಿಕೆಯನ್ನು ಬಿಜೆಪಿ ‘ಸಂಕಲ್ಪ ಪತ್ರ’ ಎಂದು ಕರೆದಿದ್ದು, 2022 ಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷವಾಗಲಿರುವ ಹಿನ್ನೆಲೆಯಲ್ಲಿ ಅದು 75 ಸಂಕಲ್ಪಗಳನ್ನು ಮಾಡಿಕೊಂಡಿದೆ. ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ ಮುಂದಿನ ಐದು ವರ್ಷಗಳಲ್ಲಿ ಈ ಎಲ್ಲಾ ಸಂಕಲ್ಪಗಳನ್ನೂ ಈಡೇರಿಸುವ ಗುರಿಯನ್ನು ಅದು ಹೊಂದಿದೆ. ಬಿಜೆಪಿಯ ಸಂಕಲ್ಪ ಪತ್ರವನ್ನು, ಶಾಸನ ಪತ್ರ, ಸಮೃದ್ಧಿಯ ಪತ್ರ, ರಾಷ್ಟ್ರದ ಭದ್ರತೆಯ ಪತ್ರ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ. ಗೃಹಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸಿದ್ಧವಾದ 48 ಪುಟಗಳ ಈ ಪ್ರಣಾಳಿಕೆಯ ಮುಖ್ಯಾಂಶಗಳು ಇಲ್ಲಿವೆ.
ಆರ್ಥಿಕತೆಗೆ ಒತ್ತು: 2025 ರ ಹೊತ್ತಿಗೆ ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಿಂದ 2032 ರ ಹೊತ್ತಿಗೆ 10 ಟ್ರಿಲಿಯನ್ ಡಾಲರ್ವರೆಗೆ ಹೆಚ್ಚಿಸುತ್ತೇವೆ. ಮೂಲ ಸೌಕರ್ಯ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಯನ್ನು 100 ಲಕ್ಷ ಕೋಟಿ ರೂ.ಗೆ ಹೆಚ್ಚಳ. ಮಧ್ಯಮ ಮತ್ತು ಸಣ್ಣ ಕೈಗಾರಿಕೆಗೆ 1 ಲಕ್ಷ ಕೋಟಿ ರೂ. ಲಾಭ ಖಾತ್ರಿ ಯೋಜನೆ.
ರೈತರಿಗೆ ಪಿಂಚಣಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ದೇಶದ ಎಲ್ಲಾ ರೈತರಿಗೂ ವಿಸ್ತರಣೆ. ಸಣ್ಣ ಮತ್ತು ಅತಿ ಸಣ್ಣ ರೈತರು 60 ವರ್ಷ ಪೂರೈಸಿದ ಮೇಲೆ ಪಿಂಚಣಿ ನೀಡುವ ಯೋಜನೆ. ಕೃಷಿ ಕ್ಷೇತ್ರದಲ್ಲಿ ಉತ್ಪಾದನೆ ಹೆಚ್ಚಿಸುವ ಸಲುವಾಗಿ 25 ಲಕ್ಷ ಕೋಟಿ ರೂ. ಹೂಡಿಕೆ.
ಮಹಿಳಾ ಸಬಲೀಕರಣ: ಮಹಿಳೆಯರ ಹಕ್ಕುಗಳನ್ನು ಹತ್ತಿಕ್ಕುವ ತ್ರಿವಳಿ ತಲಾಖ್ ಮತ್ತು ನಿಖಾಹ್ ಹಲಾಲದಂಥ ಪದ್ಧತಿಗಳ ನಿರ್ಮೂಲನೆಗೆ ಮಸೂದೆ. ಆಯುಷ್ಮಾನ್ ಭಾರತದ ಅಡಿಯಲ್ಲಿ ಎಲ್ಲಾ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಸೇರ್ಪಡೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಶೇ.50 ರಷ್ಟು ಮಹಿಳಾ ಉದ್ಯೋಗಿಗಳಿದ್ದರೆ, ಅಂಥ ಸಂಸ್ಥೆಗಳಿಗೆ ಯಾವದೇ ರೀತಿಯ ಪರಿಕರ ಖರೀದಿಗೆ ಶೇ.10 ರಷ್ಟು ಸಹಾಯಧನವನ್ನು ಸರ್ಕಾರ ನೀಡಲಿದೆ.
ಉತ್ತಮ ಆಡಳಿತಕ್ಕಾಗಿ ವಿಧಾನಸಭೆ ಮತ್ತು ಲೋಕಸಭೆ, ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ಉತ್ತೇಜನ. ಭ್ರಷ್ಟಾಚಾರ ಮುಕ್ತ ಭಾರತದ ಮತ್ತಷ್ಟು ಹೆಜ್ಜೆ. ಯಾವದೇ ಸಾರ್ವಜನಿಕ ಸೇವೆಯು ನಿರ್ದಿಷ್ಟ ಕಾಲಾವಧಿಯೊಳಗೆ ಸಿಗುವಂತೆ ಮಾಡುವದು.
ರಾಷ್ಟ್ರದ ಭದ್ರತೆಗೆ ಭಯೋತ್ಪಾದನೆಯ ವಿರುದ್ಧ ಶೂನ್ಯ ಸಂವೇದನೆ. ಭಯೋತ್ಪಾದನೆಯನ್ನು ಹತ್ತಿಕ್ಕಲು ನಮ್ಮ ಸೇನಾ ಪಡೆಯನ್ನು ಮತ್ತಷ್ಟು ಸಬಲಗೊಳಿಸುವದು. ಆಧುನಿಕ ತಂತ್ರಜ್ಞಾನದ ಮೂಲಕ ಸೇನೆಗೆ ಸಾಕಷ್ಟು ಸೌಲಭ್ಯ ನೀಡುವದು. ಈಶಾನ್ಯ ರಾಜ್ಯಗಳಲ್ಲಿ ಅಕ್ರಮ ನುಸುಳುವಿಕೆಯನ್ನು ತಡೆಗಟ್ಟುವದು.
ಸರ್ವೇ ಸಂತು ನಿರಾಮಯಾಃ 1.5 ಲಕ್ಷ ಆರೋಗ್ಯ ಕೇಂದ್ರಗಳಲ್ಲಿ ಟೆಲಿಮೆಡಿಸಿನ್ ಮತ್ತು ಪ್ರಯೋಗಾಲಯ ಸೌಲಭ್ಯ. ಪ್ರತಿ ಜಿಲ್ಲೆಯಲ್ಲಿ ಒಂದು ವೈದ್ಯಕೀಯ ಕಾಲೇಜು ಅಥವಾ ಸ್ನಾತಕೋತ್ತರ ವೈದ್ಯಕೀಯ ಕಾಲೇಜು ನಿರ್ಮಾಣ. 2022 ರ ಹೊತ್ತಿಗೆ ಎಲ್ಲಾ ಮಕ್ಕಳು ಮತ್ತು ಗರ್ಭಿಣಿಯರು ರೋಗಮುಕ್ತರಾಗುವಂತೆ ಮಾಡುವದು.
ರಾಮಮಂದಿರ ನಿರ್ಮಾಣ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಇರುವ ಎಲ್ಲಾ ಸಾಂವಿಧಾನಿಕ ತೊಡಕುಗಳನ್ನು ನಿವಾರಿಸಿ, ಮಂದಿರ ನಿರ್ಮಿಸುತ್ತೇವೆ. ಗಂಗಾ ನದಿಯಿಂದ ಗಂಗೋತ್ರಿ ಮತ್ತು ಗಂಗಾ ಸಾಗರಕ್ಕೆ ಶುದ್ಧ ನೀರು, ಯಾವದೇ ಅಡೆತಡೆಯಿಲ್ಲದೆ ಹರಿಯುವಂತೆ ಮಾಡುತ್ತೇವೆ.
ವಿದೇಶಿ ನೀತಿ: ಭಾರತೀಯ ವಲಸಿಗರೊಂದಿಗೆ ಸಂವಹನ ಹೆಚ್ಚಿಸುವ ಸಲುವಾಗಿ ‘ಭಾರತ ಗೌರವ’ ಯೋಜನೆ. ಭಯೋತ್ಪಾದನೆ ಮತ್ತು ಭ್ರಷ್ಟ್ಟಾಚಾರ ನಿರ್ಮೂಲನೆಗಾಗಿ ಜಾಗತಿಕ ಸಹಕಾರ ಕೇಳುವದು.
ಮಧ್ಯಮ ವರ್ಗಕ್ಕಾಗಿ ಐದು ಕಿ.ಮೀ.ಅಂತರದ ಎಲ್ಲೆಡೆಯೂ ಬ್ಯಾಂಕಿಂಗ್ ಸೌಲಭ್ಯ ದೊರಕುವಂತೆ ಮಾಡುವದು. ಎಲ್ಲಾ ಸಣ್ಣ ವ್ಯಾಪಾರಿಗಳಿಗೆ, ಅಂಗಡಿಯವರಿಗೆ ಪಿಂಚಣಿ ಸೌಲಭ್ಯ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಸಂಖ್ಯೆಯನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸುವದು.
ನಾಳೆಯ ಭಾರತಕ್ಕಾಗಿ ಭಾರತೀಯ ಆರ್ಥಿಕತೆಯನ್ನು 22 ಚಾಂಪಿಯನ್ ಸೆಕ್ಟರ್ಗಳು ಮುನ್ನಡೆಸಲಿವೆ. ಹೊಸ ಉದ್ಯಮಿಗಳಿಗೆ ಸಹಾಯಧನ, ಯುವಕರಿಗೆ ಉತ್ತೇಜನ.ಹೊಸ ಹೆದ್ದಾರಿಗಳ ನಿರ್ಮಾಣ, ರಸ್ತೆಗಳ ಸಂಪರ್ಕ, ಬ್ರಾಡ್ಗೇಜ್ಗಳ ವಿಸ್ತರಣೆ, ನಿಲ್ದಾಣಗಳನ್ನು ಮತ್ತು ರೈಲ್ವೆ ಬೋಗಿಗಳನ್ನು ಮೇಲ್ದರ್ಜೆಗೇರಿ ಸುವದು ಮುಂತಾದ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ.
ಸಾರ್ವತ್ರಿಕ ನಾಗರಿಕ ಸಂಹಿತೆ ಜಾರಿಗೆ ತರಲು ಬದ್ಧರಾಗಿದ್ದೇವೆ.
ಪ್ರಸ್ತುತ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ, ವಿಶೇಷ ಅಧಿಕಾರ ಕಲಂ 35ಎ ಜಾರಿಯಲ್ಲಿದೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವದನ್ನು ಹಿಂಪಡೆಯುವದು ಬಿಜೆಪಿಯ ಚುನಾವಣೆ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ.