ಸೋಮವಾರಪೇಟೆ,ಏ.8: ದೇಶದ ಸುಭದ್ರತೆ-ಅಭಿವೃದ್ಧಿಗಾಗಿ ಮತ್ತೊಮ್ಮೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಗೆಲುವು ಅನಿವಾರ್ಯ. ಬಿಜೆಪಿಯಿಂದ ಮಾತ್ರ ದೇಶದ ರಕ್ಷಣೆ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅಭಿಪ್ರಾಯಿಸಿದರೆ, ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ಕೊಡಗಿನ ಬಗ್ಗೆ ರಾಜ್ಯ ಸರ್ಕಾರ ಮಲತಾಯಿ ಧೋರಣೆ ತಾಳಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಆರೋಪಿಸಿದರು.
ಭಾರತೀಯ ಜನತಾ ಪಾರ್ಟಿಯ ವತಿಯಿಂದ ಇಲ್ಲಿನ ಜೇಸೀ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಪರ ಚುನವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಸುನಿಲ್ ಸುಬ್ರಮಣಿ ಅವರು, ಪಾಕಿಸ್ತಾನದ ವಿರುದ್ಧ ದಿಟ್ಟ ಕ್ರಮಗಳನ್ನು ನರೇಂದ್ರ ಮೋದಿ ಕೈಗೊಂಡಿದ್ದು, ಭಯೋತ್ಪಾದನೆಯನ್ನು ಕಿತ್ತೊಗೆಯುವ ಸಂಕಲ್ಪ ಮಾಡಿದ್ದಾರೆ. ದೇಶದ ಸುಭದ್ರತೆಗಾಗಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ, ಸಂಸದರ ನಿಧಿ ಬಳಕೆಯಲ್ಲಿ ನಂ.1 ಸ್ಥಾನದಲ್ಲಿರುವ ಪ್ರತಾಪ್ ಸಿಂಹ ಗೆಲುವು ಶತಃಸಿದ್ಧ ಎಂದರು.
ಈ ಹಿಂದೆ ಧರ್ಮಸ್ಥಳಕ್ಕೆ ಮೀನು-ಮಾಂಸ ತಿಂದು ಹೋದವರ ಹಿಂದೆ ಇದೀಗ ವಿಜಯಶಂಕರ್ ತೆರಳಿದ್ದಾರೆ. ಕೊಡಗಿನ ಉಸ್ತುವಾರಿ ಸಚಿವರಾಗಿದ್ದ ಸಂದರ್ಭ ವಿಜಯಶಂಕರ್ ಅವರು ಕೊಡಗಿಗೆ ನೀಡಿದ ಕೊಡುಗೆಯಾದರೂ ಏನು? ಎಂದು ಪ್ರಶ್ನಿಸಿದರು.
ಮಲತಾಯಿ ಧೋರಣೆ: ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ ಪ್ರಾಕೃತಿಕ ವಿಕೋಪ ಪೀಡಿತ ಕೊಡಗು ಜಿಲ್ಲೆಗೆ ಕೇಂದ್ರ ಸರ್ಕಾರ ಸೇರಿದಂತೆ ರಾಜ್ಯದ ವಿವಿಧೆಡೆಯ ದಾನಿಗಳು ಪರಿಹಾರವಾಗಿ ಧನ ಸಹಾಯ ನೀಡಿದ್ದು, ಇದನ್ನು ಮುಖ್ಯಮಂತ್ರಿಗಳು ಕೊಡಗಿಗೆ ಬಿಡುಗಡೆ ಮಾಡಿಲ್ಲ. ಲೋಕಸಭಾ ಚುನಾವಣೆ ಹಿನ್ನೆಲೆ ಮಂಡ್ಯ ಮತ್ತು ಹಾಸನಕ್ಕೆ ಸಾವಿರಾರು ಕೋಟಿ ಅನುದಾನ ನೀಡಿದ್ದು, ರಾಜ್ಯದ ಸಮ್ಮಿಶ್ರ ಸರ್ಕಾರ ಕೊಡಗಿನ ಬಗ್ಗೆ ಮಲತಾಯಿ ಧೋರಣೆ ಹೊಂದಿದೆ ಎಂದು ಆರೋಪಿಸಿದರು.
ಕೊಡಗಿನಲ್ಲಿ ಬೀಳುವ ಮಳೆಯಿಂದ ಪ್ರತಿವರ್ಷ 200 ಟಿಎಂಸಿಗೂ ಅಧಿಕ ನೀರನ್ನು ಹೊರಭಾಗಕ್ಕೆ ಬಿಡುಗಡೆ ಮಾಡಲಾಗುತ್ತಿದೆ. ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಸನ ಮತ್ತು ಮಂಡ್ಯಕ್ಕೆ ಮಾತ್ರ ಅನುದಾನ ನೀಡುವ ಮೂಲಕ ಕೊಡಗಿಗೆ ಅನ್ಯಾಯ ಮಾಡಿದ್ದಾರೆ. ರೈತರ ಮಕ್ಕಳೆನ್ನುವ ರೇವಣ್ಣ ಕೃಷಿ ಖಾತೆಯ ಬದಲಿಗೆ ಲೋಕೋಪಯೋಗಿ, ಇಂದನ ಖಾತೆಯನ್ನೇ ಕೇಳುತ್ತಾರೆ ಎಂದು ವಾಗ್ಧಾಳಿ ನಡೆಸಿದ ರಂಜನ್, ದೇಶಭಕ್ತಿ ಹೊಂದಿರುವವರೆಲ್ಲರೂ ಬಿಜೆಪಿಗೆ ಬೆಂಬಲ ನೀಡಲಿದ್ದಾರೆ ಎಂದರು.
ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಯಮುನ ಚಂಗಪ್ಪ ಮಾತನಾಡಿ, ಜಾತಿ ಹೆಸರಿನಲ್ಲಿ ರಾಜಕೀಯ ಮಾಡುವ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ತಮ್ಮನ್ನು ಜಾತ್ಯತೀತ ಎಂದು ಕರೆದುಕೊಳ್ಳು ತ್ತಿರುವದೇ ಹಾಸ್ಯಾಸ್ಪದ. ಬಿಜೆಪಿ ದೇಶದ ಎಲ್ಲಾ ವರ್ಗದ ವಿಕಾಸವನ್ನು ಬಯಸುವ ಪಕ್ಷ. ನೋಟ್ ಬ್ಯಾನ್‍ನಿಂದ ಭ್ರಷ್ಟಾಚಾರಿ ಗಳಿಗೆ ತೊಂದರೆಯಾಗಿದೆಯೇ ವಿನಃ ಪ್ರಾಮಾಣಿಕರಿಗೆ ಅಲ್ಲ ಎಂದು ಅಭಿಪ್ರಾಯಿಸಿದರು.
ಬಿಜೆಪಿ ಜಿಲ್ಲಾ ವಕ್ತಾರ ಅಭಿಮನ್ಯುಕುಮಾರ್ ಮಾತನಾಡಿ, ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಹಗರಣಗಳ ಸರಮಾಲೆ ನಡೆದಿದೆ. ಕಳೆದ 5 ವರ್ಷದಲ್ಲಿ ಒಂದೇ ಒಂದು ಭ್ರಷ್ಟಾಚಾರಕ್ಕೆ ಆಸ್ಪದವಾಗದಂತೆ ನರೇಂದ್ರ ಮೋದಿ ಆಡಳಿತ ನಡೆಸಿದ್ದಾರೆ. ಕೊಡಗಿಗೆ ಗಾಡ್ಗೀಳ್ ವರದಿ ಜಾರಿಗೆ ಪ್ರಯತ್ನಿಸಿದ ವಿಜಯಶಂಕರ್ ಇಂದು ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ ಎಂದು ಕುಟುಕಿದರು.
ಸಭೆಯಲ್ಲಿ ಚಲನಚಿತ್ರ ನಟ ಸುನಿಲ್ ಪುರಾಣಿಕ್, ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿ.ಪಂ. ಸದಸ್ಯರುಗಳಾದ ದೀಪಕ್, ಮಂಜುಳ, ಸರೋಜಮ್ಮ, ತಾ.ಪಂ. ಸದಸ್ಯರುಗಳಾದ ತಂಗಮ್ಮ, ಲೀಲಾವತಿ, ಧರ್ಮಪ್ಪ, ಕುಶಾಲಪ್ಪ, ಸಬಿತ, ಪಕ್ಷದ ಮುಖಂಡರಾದ ವಿ.ಎಂ. ವಿಜಯ, ಎಸ್.ಬಿ. ಭರತ್‍ಕುಮಾರ್, ಜಲಜಾ ಶೇಖರ್, ಪ್ರಭಾಕರ್, ಸುಮಾ ಸುದೀಪ್, ಬಿ.ಆರ್. ಮಹೇಶ್, ಭುವನೇಶ್ವರಿ, ಜೆ.ಸಿ. ಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.