ಮಡಿಕೇರಿ, ಏ.8 : ಕೊಡಗಿಗೆ ರೈಲು - ಚತುಷ್ಪಥ ರಸ್ತೆ ಯೋಜನೆಯ ಹೇಳಿಕೆಗಳು ಕೇವಲ ಬಿಜೆಪಿಯ ಚುನಾವಣಾ ಗಿಮಿಕ್ ಹೊರತು ಬೇರೇನೂ ಅಲ್ಲವೆಂದು ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಪಕ್ಷದ ಪ್ರಮುಖರು ಟೀಕಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಟಿ.ಸುರೇಶ್ ಕೊಡಗಿಗೆ ರೈಲು ಸಂಪರ್ಕ ಕಲ್ಪಿಸುವದಾಗಿ ಕಳೆದ 5 ವರ್ಷಗಳಿಂದ ಹೇಳುತ್ತಾ ಬಂದಿರುವ ಸಂಸದ ಪ್ರತಾಪ್‍ಸಿಂಹ ಅವರು ಇದೀಗ ಚುನಾವಣೆಯ ಸಮಯದಲ್ಲೂ ರೈಲು ಮಾರ್ಗದ ಬಗ್ಗೆ ಮಾತನಾಡುತ್ತಿದ್ದಾರೆ. ಮೈಸೂರು-ಮಡಿಕೇರಿ ಚತುಷ್ಪಥ ರಸ್ತೆಗೆ ಅನುದಾನ ಬಿಡುಗಡೆಯಾಗಿದ್ದು, ಚುನಾವಣೆಯ ಬಳಿಕ ಕಾಮಗಾರಿ ಆರಂಭಿಸುವದಾಗಿ ಸುಳ್ಳು ಹೇಳುತ್ತಿದ್ದಾರೆ ಎಂದರು.

ದೇಶದಲ್ಲಿ ಶಾಂತಿ ಸಾಮರಸ್ಯ ಉಳಿಯಬೇಕಾದರೆ ಬಿಜೆಪಿಗೆ ಅಧಿಕಾರ ನೀಡಬೇಕು ಎಂದು ಸಂಸದರು ಹೇಳಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಹಿಂದಿನಿಂದಲೂ ಮುಸ್ಲಿಂ, ಕ್ರೈಸ್ತರು ಮತ್ತು ಬಹುಜನರ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡ ಪಕ್ಷಗಳಾಗಿವೆ ಎಂದು ಸುರೇಶ್ ಹೇಳಿದರು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಷರೀಫ್ ಮಾತನಾಡಿ, ಕಸ್ತೂರಿರಂಗನ್ ವರದಿಯನ್ನು ಜಾರಿ ಮಾಡಲು ಬಿಡುವದಿಲ್ಲ ಎಂದು ಭರವಸೆ ನೀಡಿದ್ದ ಬಿಜೆಪಿಯವರು ಇದೀಗ ವರದಿ ಜಾರಿಗೆ ಮುಂದಾಗಿದ್ದು, ಕೊಡಗಿನ ತೋಟಗಾರಿಕಾ ಬೆಳೆಗಳ ನಾಶಕ್ಕೆ ಈ ವರದಿ ಕಾರಣವಾಗಲಿದೆ ಎಂದು ಅಭಿಪ್ರಾಯಪಟ್ಟರು. ಗ್ರಾಮಗಳಿಗೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಸ್ತೆ ನಿರ್ಮಿಸು ವದಾಗಿ ಹೇಳಿದ್ದರೂ, ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಬೆಳೆಹಾನಿಗೆ ಪರಿಹಾರ ಕೊಡಿಸುವ ಭರವಸೆಯನ್ನು ಈಡೇರಿಸಿಲ್ಲ ಎಂದು ಆರೋಪಿಸಿದರು.

ಜೆಡಿಎಸ್ ಜಿಲ್ಲಾ ವಕ್ತಾರ ಕುಸಮ್ ಕಾರ್ಯಪ್ಪ ಮಾತನಾಡಿ, ಭಾರತೀಯ ಯೋಧರು ಸರ್ಜಿಕಲ್ ಸ್ಟ್ರೈಕ್ ಮಾಡಿ ಪಾಕಿಸ್ತಾನದ ಉಗ್ರರನ್ನು ಸದೆ ಬಡಿದಿದ್ದು, ಇದೀಗ ಬಿಜೆಪಿ ಅದನ್ನು ಚುನಾವಣೆಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಸಾಮಾಜಿಕ ಜಾಲತಾಣ ಘಟಕದ ಸಂಚಾಲಕ ಸೂರಜ್ ಮಾತನಾಡಿ, ಬಿಜೆಪಿಯವರು ಇಂದಿಗೂ ಕಾಂಗ್ರೆಸ್ - ಜೆಡಿಎಸ್ ಮೈತ್ರಿಯ ಬಗ್ಗೆ ಅಪಸ್ವರ ಎತ್ತುತ್ತಿದ್ದಾರೆ. ಆದರೆ ಈ ಮೈತ್ರಿಯಡಿ ನಾವು ಸಾಕಷ್ಟು ಮುಂದೆ ಸಾಗಿ ಬಂದಿದ್ದೇವೆ ಎಂದರು. ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸುರಯ್ಯ ಅಬ್ರಾರ್ ಮಾತನಾಡಿ, ತಾವು ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವದಾಗಿ ಬಿಜೆಪಿ ಕಳೆದ ಚುನಾವಣೆಯ ಸಂದರ್ಭ ಹೇಳಿತ್ತು. ಆದರೆ ಇದುವರೆಗೂ ಅದನ್ನು ಈಡೇರಿಸಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದಲ್ಲಿ ಮಹಿಳಾ ಮೀಸಲಾತಿಗೆ ಜಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.