ಮಡಿಕೇರಿ, ಏ. 8: ಸಂಪಾಜೆಯ ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಅವರ ಪೂರ್ವ ನಿಯೋಜಿತ ಕೊಲೆ ಪ್ರಕರಣದ ಬಂಧಿತ ಆರೋಪಿಗಳೊಂದಿಗೆ, ಅಕ್ರಮ ಇಂಧನ ದಂಧೆ ಹಾಗೂ ಮರಳು ಮಾಫಿಯಾಕ್ಕೆ ನಂಟಿದ್ದು, ಈ ಸಂಬಂಧ ಸಿಓಡಿ ತನಿಖೆ ನಡೆಸಬೇಕೆಂದು; ಮೃತರ ಕುಟುಂಬ ಮತ್ತು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಬಗ್ಗೆ ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಹಾಗೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಲಿಖಿತ ಮನವಿ ಸಲ್ಲಿಸಲಾಗಿದೆ.
ಮೃತ ಬಾಲಚಂದ್ರ ಕಳಗಿ ಅವರ ತಂದೆ ವೆಂಕಪ್ಪಗೌಡ ಕಳಗಿ ಹಾಗೂ ಪತ್ನಿ ರಮಾದೇವಿ ಸಹಿತ ಗ್ರಾಮಸ್ಥರು ಸಲ್ಲಿಸಿರುವ ಮನವಿಯಲ್ಲಿ; ಈಗಾಗಲೇ ಕೊಡಗು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿರುವ ಬಗ್ಗೆ ಶ್ಲಾಘಿಸಿದ್ದಾರೆ. ಬದಲಾಗಿ ಬಂಧಿತ ಆರೋಪಿಗಳಿಗೂ, ಕಾನೂನು ಬಾಹಿರ ಕೃತ್ಯಗಳ ಮಾಫಿಯಾದವರಿಗೂ ನಿಕಟ ಸಂಪರ್ಕ ಇರುವದಾಗಿ ಶಂಕೆ ವ್ಯಕ್ತಪಡಿಸಿರುವ ಗ್ರಾಮಸ್ಥರು, ಕೊಲೆ ಆರೋಪಿಗಳು ಮತ್ತು ಅಕ್ರಮ ಮಾಫಿಯಾದಿಂದ ಆತಂಕ ಹುಟ್ಟುಕೊಂಡಿದೆ ಎಂದು ಉಲ್ಲೇಖಿಸಿದ್ದಾರೆ.ಸಂಪಾಜೆಯಲ್ಲಿ ಓರ್ವ ಪ್ರಾಮಾಣಿಕ ಜನಪ್ರತಿನಿಧಿಗಳಾಗಿದ್ದ ಕಳಗಿ ಬದುಕಿರುವ ವೇಳೆ ಎಲ್ಲ ಅಕ್ರಮಗಳಿಗೆ ಕಡಿವಾಣ ಹಾಕುವ ಮೂಲಕ, ಸಮಾಜದಲ್ಲಿ ಎಲ್ಲ ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಪ್ರಸಕ್ತ ಅವರ ಹತ್ಯೆಯಿಂದ ಸಂಪಾಜೆ ಸುತ್ತಮುತ್ತಲಿನ
(ಮೊದಲ ಪುಟದಿಂದ) ಜನತೆಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ಕಳವಳ ತೋಡಿಕೊಂಡಿದ್ದಾರೆ.ಅಲ್ಲದೆ ಈಗ ಬಂಧನದಲ್ಲಿರುವ ಕೊಲೆ ಆರೋಪಿಗಳಿಗೆ ಅಕ್ರಮ ಮಾಫಿಯಾ ನಂಟಿನ ಮಂದಿ ಜೈಲಿನೊಳಗೆ ರಾಜಾತಿಥ್ಯದೊಂದಿಗೆ ಮೊಬೈಲ್ ಇತ್ಯಾದಿ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದು ಶಂಕಿಸಿರುವ ಗ್ರಾಮಸ್ಥರು, ಭವಿಷ್ಯದಲ್ಲಿ ಆರೋಪಿತರಿಗೆ ಜಾಮೀನು ಲಭಿಸಿದರೆ ಮತ್ತೆ ಸಂಪಾಜೆಯಲ್ಲಿ ಕಾನೂನು ಬಾಹಿರ ಕೃತ್ಯ ಎಸಗುವ ಭಯವಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಇಂತಹ ಸಂಶಯಕ್ಕೆ ಪೂರಕವಾಗಿ, ಮಾ. 19 ರಂದು ಕಳಗಿ ಅವರ ಪೂರ್ವ ನಿಯೋಜಿತ ಹತ್ಯೆ ಬೆನ್ನಲ್ಲೇ ಅಪಘಾತವೆಸಗಿದ ಘಟನೆ ಸ್ಥಳದಿಂದ ತರಾತುರಿಯಲ್ಲಿ ವಾಹನಗಳನ್ನು ತೆರವುಗೊಳಿಸಲಾಗಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿರುವ ಗ್ರಾಮಸ್ಥರು, ಈ ಹಿಂದೆ ಕೆಲವು ಶಂಕಿತ ವ್ಯಕ್ತಿಗಳ ವಿಚಾರಣೆಗೆ ಕೋರಿದ್ದರೂ ತನಿಖೆಗೆ ಒಳಪಡಿಸಿಲ್ಲವೆಂದು ದೂಷಿಸಿದ್ದಾರೆ.
ಹೀಗಾಗಿ ಬಾಲಚಂದ್ರ ಕಳಗಿ ಹತ್ಯೆಯಲ್ಲಿ ಬಂಧಿಸಿರುವ ಮೂವರು ಆರೋಪಿಗಳೊಂದಿಗೆ ಇತರ ಅಕ್ರಮ ಮಾಫಿಯಾದೊಂದಿಗಿನ ನಂಟನ್ನು ಬಯಲಿಗೆಳೆಯುವ ದಿಸೆಯಲ್ಲಿ ಸಿಓಡಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಈ ಸಂಬಂಧ ಕರ್ನಾಟಕ ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕರಿಗೂ ದೂರಿನ ಪ್ರತಿ ರವಾನಿಸಿದ್ದಾರೆ.