ಮಡಿಕೇರಿ, ಏ. 8: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ನಗರಸಭೆಯೊಳಗೆ ಜನರ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಸರಕಾರದಿಂದ 236 ಹುದ್ದೆಗಳು ಮಂಜೂರಾಗಿದ್ದು, ಈ ಪೈಕಿ ಕೇವಲ 77 ಮಂದಿ ಮಾತ್ರ ಕರ್ತವ್ಯದಲ್ಲಿದ್ದು, 158 ಹುದ್ದೆಗಳು ಭರ್ತಿಗೊಳ್ಳದೆ ಖಾಲಿಯಿರುವ ಪರಿಸ್ಥಿತಿ ಬೆಳಕಿಗೆ ಬಂದಿದೆ. ಜಿಲ್ಲೆಯಲ್ಲಿ ಏಕೈಕ ನಗರಸಭಾ ಆಡಳಿತ ಹೊಂದಿರುವ ಈ ಕೇಂದ್ರ ಸ್ಥಳದಲ್ಲಿ ಸಾರ್ವಜನಿಕರ ಯಾವದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂಬ ಅಸಮಾಧಾನ ಜನವಲಯದಲ್ಲಿದೆ.ಈಚೆಗೆ 5 ವರ್ಷಗಳ ಅಧಿಕಾರ ಪೂರೈಸಿರುವ ಜನಪ್ರತಿನಿಧಿಗಳನ್ನು ಒಳಗೊಂಡಿರುವ ಆಡಳಿತ ಮಂಡಳಿ ಕೂಡ ಈ ದಿಸೆಯಲ್ಲಿ ಸಾರ್ವತ್ರಿಕ ಟೀಕೆಗೆ ಒಳಗಾಗಿತ್ತು. ಈ ದಿಸೆಯಲ್ಲಿ ‘ಶಕ್ತಿ’ ವಾಸ್ತವ ತಿಳಿಯಲು ಪ್ರಯತ್ನಿಸಿದಾಗ ಸರಕಾರಗಳು ನಗರಸಭೆಯ ಬಹುತೇಕ ಹುದ್ದೆಗಳಿಗೆ ಸಿಬ್ಬಂದಿಗಳನ್ನು ನೇಮಿಸದಿರುವ ಸಂಗತಿ ಬಹಿರಂಗಗೊಂಡಿದೆ. ಪರಿಣಾಮ ಇರುವಷ್ಟು ಸಿಬ್ಬಂದಿ ಒತ್ತಡದ ನಡುವೆ ದೈನಂದಿನ ಕೆಲಸಗಳನ್ನು ನಿರ್ವಹಿಸುವಂತಾಗಿದೆ.

ನಗರಸಭೆಯೊಳಗೆ ದೈನಂದಿನ ಕೆಲಸಗಳನ್ನು ರೂಪಿಸಲು ಸಹಾಯಕ ಕಾರ್ಯಪಾಲಕ ಅಭಿಯಂತರರೇ ಇಲ್ಲಿ ಇಲ್ಲ; ಜೊತೆಗೆ ಮಾಹಿತಿ ತಂತ್ರಜ್ಞಾನ ಸಿಬ್ಬಂದಿ, ಸಹಾಯಕ ಅಭಿಯಂತರ, ಲೆಕ್ಕ ಅಧೀಕ್ಷಕ ಸೇರಿದಂತೆ ಪ್ರಮುಖವಾಗಿ ಪರಿಸರ ಅಭಿಯಂತರ ಹುದ್ದೆ ಕೂಡ ಖಾಲಿ ಬಿದ್ದಿರುವದು ಗೋಚರಿಸಿದೆ. ಇನ್ನು ಸಾರ್ವಜನಿಕ ಸಂಪರ್ಕ ಅಧಿಕಾರಿ, ಕಂದಾಯ ಅಧಿಕಾರಿ, ಲೆಕ್ಕಿಗ, ಕಿರಿಯ ಅಭಿಯಂತರ, ಹಿರಿಯ ಆರೋಗ್ಯ ನಿರೀಕ್ಷಕ ಹುದ್ದೆಯೂ ಖಾಲಿಯಾಗಿದೆ.

ನಗರಸಭೆಯೊಳಗೆ ಪ್ರಥಮ ದರ್ಜೆ ಸಹಾಯಕ ಸಹಿತ ಪ್ರಥಮ ದರ್ಜೆ ಕಂದಾಯ ಅಧಿಕಾರಿಗಳ ಎರಡು ಹುದ್ದೆ ಖಾಲಿ ಇವೆ. ಅಂತೆಯೇ ಸ್ಟೆನೋಗ್ರಾಫಿ 2 ಹುದ್ದೆ, ಸಮುದಾಯ ಸಂಘಟಕ ಹಾಗೂ ನೀರು ಸರಬರಾಜು ಸಹಾಯಕರ 8 ಹುದ್ದೆಗಳಿಗೆ ಇದುವರೆಗೆ ಯಾರೂ ನೇಮಕಗೊಳ್ಳದೆ ಸಾಕಷ್ಟು ಸಮಸ್ಯೆ ಎದುರಾಗಿದೆ. ಮುಖ್ಯವಾಗಿ ಮೂವರು ಕಂಪ್ಯೂಟರ್ ನಿರ್ವಾಹಕರು, ಕಿರಿಯ ಆರೋಗ್ಯ ನಿರೀಕ್ಷಕರು ಸೇರಿದಂತೆ 6 ಹುದ್ದೆಗಳು ಖಾಲಿ ಇವೆ. ಮೂವರು ದ್ವಿತೀಯ ದರ್ಜೆ ಸಹಾಯಕರು, ಎಲೆಕ್ಟ್ರಾನಿಕ್ ಗ್ರೇಡ್ -1, ಹುದ್ದೆ,

(ಮೊದಲ ಪುಟದಿಂದ) ಇಬ್ಬರು ಬಿಲಿ ಕಲೆಕ್ಟರ್ ಸಹಿತ ನಾಲ್ವರು ವಾಹನ ಚಾಲಕ ಹುದ್ದೆಗಳು ಭರ್ತಿಯಾಗಿಲ್ಲ. ಅಂತೆಯೇ ನೀರು ಸರಬರಾಜು ಸಹಾಯಕ ಹುದ್ದೆಗಳು 8 ಹಾಗೂ ಇತರ ವಿದ್ಯುತ್ ತಂತ್ರಜ್ಞಾನ ಇತ್ಯಾದಿ ಇಬ್ಬರು ತಾಂತ್ರಿಕ ಸಿಬ್ಬಂದಿ ಹುದ್ದೆ ಖಾಲಿಯಾಗಿವೆ.

ಇನ್ನೊಂದೆಡೆ ಸ್ವಚ್ಛತಾ ವಿಭಾಗದ ಬೇರೆ ಬೇರೆ ಕೆಲಸಗಳ ಉಸ್ತುವಾರಿ ನೋಡಿಕೊಳ್ಳಲು ಏಳು ಮಂದಿಯೊಂದಿಗೆ ಇತರ 81 ಮಂದಿ ಪೌರ ಕಾರ್ಮಿಕರ ಕೊರತೆಯಿದೆ. ಮಾತ್ರವಲ್ಲದೆ 16 ಮಂದಿ ಲೋಡರ್ಸ್ ಹುದ್ದೆ, ಕ್ಲೀನರ್ಸ್ ನಾಲ್ವರು, ಇಬ್ಬರು ನೀರು ಸರಬರಾಜು ವಿಭಾಗ ನೌಕರರು ಸೇರಿದಂತೆ ಪ್ರಸಕ್ತ ನಗರಸಭೆಯಲ್ಲಿ 158 ಹುದ್ದೆಗಳು ಖಾಲಿ ಇವೆ.

ಪರಿಣಾಮ ನಗರಸಭೆಯ ದೈನಂದಿನ ಕೆಲಸ ಕಾರ್ಯಗಳಿಗೆ ಹತ್ತು ಹಲವು ತೊಡಕುಗಳ ನಡುವೆ, ಸಾರ್ವಜನಿಕರು ತಮ್ಮ ದೈನಂದಿನ ಸಮಸ್ಯೆಗಳಿಗಾಗಿ ಕಚೇರಿಗೆ ಬಂದು ಬರಿಗೈನಲ್ಲಿ ಹಿಂತಿರುಗುತ್ತಿದ್ದಾರೆ. ಇನ್ನು ಚುನಾವಣೆಯ ಕಾರಣ ನಡುವೆ ಕಚೇರಿಯ ಬಹುತೇಕ ಕುರ್ಚಿಗಳು ಖಾಲಿಯಾಗಿದ್ದು, ಇಲ್ಲಿ ಸಮಸ್ಯೆಗಳನ್ನು ಆಲಿಸುವವರು ಇಲ್ಲವೆಂಬ ಅಸಮಾಧಾನ ವ್ಯಕ್ತಗೊಳ್ಳುವಂತಾಗಿದೆ. ಸರಕಾರ ಕೂಡ ಹಲವಷ್ಟು ವಿನೂತನ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದರೂ, ಖಾಲಿ ಹುದ್ದೆಗಳ ಭರ್ತಿಗೆ ಗಮನ ಹರಿಸುತ್ತಿಲ್ಲವೆಂದು ಒತ್ತಡಗಳಲ್ಲಿ ಸಿಲುಕಿರುವ ಸಿಬ್ಬಂದಿಯ ಅಳಲು ಕೇಳಿ ಬರುತ್ತಿದೆ.