ಭಾಗಮಂಡಲ, ಏ. 8: ಕಳೆದ ಮೂರು ದಿನಗಳಿಂದ ತಲಕಾವೇರಿ ಕ್ಷೇತ್ರದ ಅಗಸ್ತ್ಯೇಶ್ವರ ಸಾನ್ನಿಧ್ಯದಲ್ಲಿ ಪುನರ್‍ಪ್ರತಿಷ್ಟೆ ಅಷ್ಟಬಂಧ ಬ್ರಹ್ಮಕಲಶ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಕ್ಷೇತ್ರದ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ 15ಜನರ ತಂಡದಿಂದ ಸೋಮವಾರ ವಿವಿಧ ಕಾರ್ಯಕ್ರಮಗಳು ಜರುಗಿದವು. ಬೆಳಿಗ್ಗೆ ಗಣಪತಿ ಹೋಮ, ತ್ರಿಕಾಲಪೂಜೆ, ಅಂಕುರ ಪೂಜೆ ತತ್ವಕಲಶಪೂಜೆ, ತತ್ವಹೋಮ ಹಾಗೂ ತತ್ವಕಲಶಾಭಿಷೇಕ ಜರುಗಿದವು. ಸಂಜೆ ತ್ರಿಕಾಲ ಪೂಜೆ ಹಾಗೂ ಅಂಕುರ ಪೂಜೆಗಳನ್ನು ನೆರವೇರಿಸಲಾಯಿತು.

ಮಂಗಳವಾರ ಗಣಪತಿಹೋಮ, ಅಂಕುರಪೂಜೆ, ಸಂಹಾರ ತತ್ವಕಲಶಪೂಜೆ ಸಂಹಾರ ತತ್ವಹೋಮ, ಸಂಹಾರ ತತ್ವಕಲಶಾಭಿಷೇಕ, ಜೀವಕಲಶಪೂಜೆ, ಜೀವೋದ್ವಾಸನೆ ಹಾಗೂ ಜೀವಕಲಶ ಶಯ್ಯಾಗಮನ ನೆರವೇರಲಿದೆ. ಸಂಜೆ ಶಿರತತ್ವಹೋಮ, ಬ್ರಹ್ಮಕಲಶಪೂಜೆಗಳು ನೆರವೇರಲಿವೆ. ತಾ. 10ರಂದು ಬುಧವಾರ ಬೆಳಿಗ್ಗೆ ಗಣಪತಿ ಹೋಮದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು 6.37ರನಂತರ ರೋಹಿಣಿ ನಕ್ಷತ್ರ ಮೇಷರಾಶಿಯಲ್ಲಿ ಅಗಸ್ತ್ಯೇಶ್ವರ ಸಾನ್ನಿಧ್ಯ ಪುನರ್‍ಪ್ರತಿಷ್ಟೆ ನೆರವೇರಲಿದೆ. ಮಧ್ಯಾಹ್ನ ಬ್ರಹ್ಮಕಲಶಾಭಿಷೇಕ ನಡೆದ ಬಳಿಕ ಮಹಾಪೂಜೆ ಕೈಗೊಂಡು ಭಕ್ತರಿಗೆ ಪ್ರಸಾದ ವಿತರಿಸಲಾಗುವದು ಎಂದು ಭಗಂಡೇಶ್ವರ - ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ಸದಸ್ಯರು ತಿಳಿಸಿದ್ದಾರೆ.

ಪುನರ್‍ಪ್ರತಿಷ್ಟೆ ಅಷ್ಟಬಂಧ ಬ್ರಹ್ಮಕಲಶ ಅಂಗವಾಗಿ ತಾ. 10 ಮತ್ತು 11 ರಂದು ನಡೆಯುವ ಕಾರ್ಯಕ್ರಮದಲ್ಲಿ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಕಾಣಿಯೂರು ಮಠದ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹಾಗೂ ಕೇರಳದ ಕಣ್ಣನೂರಿನ ಅಗಸ್ತ್ಯೇಶ್ವರ ಆಶ್ರಮದ ಶ್ರೀ ಶ್ರೀ ರಮೇಶ್ ಗುರೂಜಿ ಪಾಲ್ಗೊಳ್ಳಲಿದ್ದಾರೆ.

-ಸುನಿಲ್ ಕುಯ್ಯಮುಡಿ