ಮಡಿಕೇರಿ, ಏ. 8: ನಗರದ ಸಂತ ಜೋಸೆಫರ ಶಾಲೆಯಲ್ಲಿ ನಡೆದ ಲೋಕಸಭಾ ಚುನಾವಣಾ ತರಬೇತಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಇಂದು ಭೇಟಿ ನೀಡಿ ಚುನಾವಣಾ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.

ಮತಗಟ್ಟೆ ಅಧಿಕಾರಿಗಳು ಒಬ್ಬರಿಗೊಬ್ಬರು ಪರಿಚಯ ಮಾಡಿಕೊಂಡು, ತಂಡವಾಗಿ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಇದೇ ತಾ. 18ರ ಮತದಾನ ದಂದು ಮತಗಟ್ಟೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಈ ಬಾರಿ 22 ಮಂದಿ ಅಭ್ಯರ್ಥಿಗಳು ಕಣದಲ್ಲಿರುವದ ರಿಂದ ಎರಡು ಬ್ಯಾಲೆಟ್ ಯೂನಿಟ್ ಬಳಸಲಾಗುತ್ತದೆ. ಆದ್ದರಿಂದ ಯಾವದೇ ರೀತಿಯ ತೊಂದರೆ ಉಂಟಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.

ಚುನಾವಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಶಾಂತಿಯುತ ಹಾಗೂ ವ್ಯವಸ್ಥಿತ ಚುನಾವಣೆಗೆ ಎಲ್ಲರೂ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ನಗರದ ಸಂತ ಜೋಸೆಫರ ಶಾಲೆ ಹಾಗೂ ವಿರಾಜಪೇಟೆ ಸಂತ ಅನ್ನಮ್ಮ ಶಾಲೆಯಲ್ಲಿ ಎರಡು ದಿನಗಳ ಕಾಲ ಮತಗಟ್ಟೆ ಅಧಿಕಾರಿಗಳಿಗೆ ನಡೆದ ತರಬೇತಿ ಕಾರ್ಯಕ್ರಮದಲ್ಲಿ ತಲಾ 15 ಕೊಠಡಿಗಳಂತೆ, ಒಂದು ಕೊಠಡಿಗೆ 50 ಮಂದಿಯಂತೆ ಮತಗಟ್ಟೆ ಅಧಿಕಾರಿಗಳಿಗೆ ಪ್ರತ್ಯೇಕವಾಗಿ ತರಬೇತಿ ನೀಡಲಾಯಿತು.

ಹಾಗೆಯೇ ಹೆಚ್ಚುವರಿ ಜಿಲ್ಲಾಧಿಕಾರಿ ಪಿ. ಶಿವರಾಜು ವೀರಾಜಪೇಟೆಯ ಸಂತ ಅನ್ನಮ್ಮ ಶಾಲೆಗೆ ಭೇಟಿ ನೀಡಿ ಚುನಾವಣೆ ಸಂಬಂಧ ಮಾಹಿತಿ ನೀಡಿದರು. ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಸಹಾಯಕ ಚುನಾವಣಾಧಿಕಾರಿ ಶ್ರೀನಿವಾಸ್, ಮಾಸ್ಟರ್ ತರಬೇತಿ ಷಂಶುದ್ದೀನ್, ತಹಶೀಲ್ದಾರರಾದ ನಟೇಶ್, ಗೊವಿಂದರಾಜು ಇತರರು ಇದ್ದರು.