ಮಡಿಕೇರಿ, ಏ. 7: ಹಾದಿ ಬೀದಿಯಲ್ಲಿ ಭಿಕ್ಷೆ ಬೇಡಿ ತಿನ್ನುತ್ತಾ, ನಿಶೆಯ ಅಮಲಿನಲ್ಲಿ ಸಿಕ್ಕವರನ್ನು ನಿಂದಿಸುತ್ತಾ ತಿರುಗುತ್ತಿದ್ದಾತನನ್ನು, ಕೂಲಿ ಕಾರ್ಮಿಕನೊಬ್ಬ ಕೊಂದು ಪರಾರಿಯಾದ ಬೆನ್ನಲ್ಲೇ ಹತ್ಯೆಗೀಡಾದ ಭಿಕ್ಷುಕನ ಜತೆಗಾರರು ನೀಡಿದ ಸುಳಿವಿನ ಮೇರೆಗೆ ಪೊಲೀಸರು ಕ್ಷಿಪ್ರಗತಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಕೊಲೆಗೀಡಾಗಿರುವ ವ್ಯಕ್ತಿ ನಿಖರವಾಗಿ ಎಲ್ಲಿಯವನೆಂದು ಪತ್ತೆ ಹಚ್ಚುವ ದಿಸೆಯಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಬಂಧಿತ ಆರೋಪಿ ನಾಪೋಕ್ಲು ಬಳಿ ಬೇತು ಗ್ರಾಮದ ತೋಟವೊಂದರ ಕಾರ್ಮಿಕ ಗಣೇಶ್ ಎಂದು ಖಾತರಿಯಾಗಿದೆ.ಆರೋಪಿಯು ಈಚೆಗೆ ತನ್ನ ಪತ್ನಿಯನ್ನು ಅನಾರೋಗ್ಯದ ಕಾರಣ ಇಲ್ಲಿನ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ರಾತ್ರಿ ಪಾರ್ಕ್ನಲ್ಲಿ ಬಂದು ಮಲಗುತ್ತಿದ್ದನೆನ್ನಲಾಗಿದೆ. ಈ ಸಂದರ್ಭ ಮೃತ ವ್ಯಕ್ತಿ ಹಾಗೂ ಇತರ ಮೂವರು ಭಿಕ್ಷುಕಿಯರು ಅಲ್ಲಿಯೇ ತಂಗುತ್ತಿದ್ದರೆಂದು ಗೊತ್ತಾಗಿದೆ. ತಾ. 4 ರಂದು ಆರೋಪಿ ತನ್ನ ಪತ್ನಿಯನ್ನು ಆಸ್ಪತ್ರೆಯಿಂದ ತೇರ್ಗಡೆಗೊಳಿಸಿದ ಬಳಿಕ ರಾತ್ರಿ ತಂಗಲು ಇದೇ ಪಾರ್ಕ್ಗೆ ಬಂದು; ಆಕೆಯನ್ನು ಅಲ್ಲಿ ಕುಳ್ಳರಿಸಿ ಪಕ್ಕದ ಹೊಟೇಲ್ನಿಂದ ಊಟ ತರಲು ತೆರಳಿದ್ದಾಗಿ ತಿಳಿದು ಬಂದಿದೆ.
ಅಲ್ಲದೆ, ಗಂಡ ಹೆಂಡತಿ ಇಬ್ಬರು ನಿತ್ಯ ಕುಡಿದು ಮಲಗುವ ದುಶ್ಚಟದವರೆಂದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಕೃತ್ಯ ನಡೆಯುವ ಮುನ್ನ ಕೂಡ ಇಬ್ಬರು ಮದ್ಯ ಸೇವಿಸಿದ್ದಾರೆ. ಈ ವೇಳೆ ದಂಪತಿ ಜತೆ ಕಲಹಕ್ಕಿಳಿದಿರುವ ಭಿಕ್ಷುಕ ಬೆದರಿಕೆ ಕೂಡ ಹಾಕಿದ್ದನೆನ್ನಲಾಗಿದೆ. ಆ ವೇಳೆಗೆ ಮೊದಲೇ ನಿಶೆಯ ಗುಂಗಿನಲ್ಲಿದ್ದ ಆರೋಪಿ ಅಲ್ಲೆ ಇದ್ದ ಕಲ್ಲೊಂದನ್ನು ಎತ್ತಿ ಹಾಕಿದ್ದು, ಕ್ಷಣಾರ್ಧ ದಲ್ಲಿ ಆತ ಸತ್ತು ಹೋಗಿದ್ದಾನೆ.
ಪೊಲೀಸರಿಗೆ ಸುಳಿವು : ಮಡಿಕೇರಿ ನಗರ ಪೊಲೀಸ್ ಠಾಣಾ ಸರಹದ್ದಿನ
(ಮೊದಲ ಪುಟದಿಂದ) ಓಂಕಾರೇಶ್ವರ ದೇವಾಲಯ ಪಕ್ಕದ ಡಿಹೆಚ್ಓ ಕಚೇರಿಯ ಬಳಿ ನಿರ್ವಹಣೆ ಇಲ್ಲದ ಈ ಪಾರ್ಕ್ನಲ್ಲಿ ತಾ. 6 ರಂದು ಬೆಳಿಗ್ಗೆ ಮಡಿಕೇರಿ ನಗರ ಸಭೆಯ ಕಸ ತುಂಬಿಸುವ ವಾಹನದ ಚಾಲಕ ಜೆ.ಆರ್. ವಸಂತ್ಕುಮಾರ್, ನೌಕರ ತಿಪ್ಪೇಸ್ವಾಮಿಯೊಂದಿಗೆ ಕಸ ತೆಗೆಯುವ ಸಲುವಾಗಿ ಬೆಳಿಗ್ಗೆ 7 ಗಂಟೆ ಸುಮಾರಿಗೆ ಹೋದಾಗ, ಪಾರ್ಕ್ನ ಒಳಗಡೆ ಕಾಂಪೌಂಡ್ ಗೋಡೆ ಬಳಿ ಅಂದಾಜು 55 ಪ್ರಾಯದ ಯಾರೋ ಅಪರಿಚಿತ ವ್ಯಕ್ತಿ ಮಕಾಡೆಯಾಗಿ ಬಿದ್ದಿದ್ದು ಗೋಚರಿಸಿದೆ. ಮೃತ ಶರೀರ ಸುಟ್ಟಂತೆ ಕಾಣುತ್ತಿದ್ದು, ಶರೀರದ ಪಕ್ಕದಲ್ಲಿ ರಕ್ಷದ ಕಲೆಗಳಿರುವ ಒಂದು ಕಾಡು ಕಲ್ಲು ಸಹ ಕಂಡು ಬಂದಿದೆ. ಸದರಿ ವ್ಯಕ್ತಿಯನ್ನು ತಾ. 5 ರಂದು ರಾತ್ರಿ ವೇಳೆಯಲ್ಲಿ ಯಾರೋ ಮುಖಕ್ಕೆ ಕಲ್ಲನ್ನು ಎತ್ತಿ ಹಾಕಿ ಕೊಲೆ ಮಾಡಿ ಸಾಕ್ಷಿ ನಾಶ ಪಡಿಸುವ ಯತ್ನ ಎಸಗಿಸಿರುವ ಸುಳಿವು ಲಭಿಸಿದೆ. ಅಲ್ಲದೆ ಶವವನ್ನು ಬೆಂಕಿ ಹಚ್ಚಿ ಸುಟ್ಟಿರುವದು ಗೋಚರಿಸಿದೆ. ಈ ಬಗ್ಗೆ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕೆಂದು ಜೆ.ಆರ್. ವಸಂತ್ಕುಮಾರ್ ನೀಡಿದ ಪುಕಾರಿನ ಮೇರೆಗೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಮೊ.ಸಂ. 209/2019 ಕಲಂ 302, 201 ಐಪಿಸಿ ರೀತ್ಯ ಪ್ರಕರಣ ದಾಖಲಾಗಿದೆ.
ಈ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡುವ ಬಗ್ಗೆ ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಡಿ.ಪಿ. ನಿರ್ದೇಶನದಂತೆ ಮಡಿಕೇರಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಕೆ.ಎಸ್. ಸುಂದರ್ರಾಜ್ ಮಾರ್ಗದರ್ಶನದಲ್ಲಿ ನಗರ ಪೊಲೀಸ್ ವೃತ್ತ ನಿರೀಕ್ಷಕ ಎನ್.ಸಿ. ನಾಗೇಗೌಡ, ನಗರ ಪೊಲೀಸ್ ಠಾಣಾ ಉಪ ನಿರೀಕ್ಷಕ ಷಣ್ಮುಗ ಹಾಗೂ ಸಿಬ್ಬಂದಿಗಳಾದ ಕಿರಣ್, ಚರ್ಮಣ ಕೆ.ಕೆ. ದಿನೇಶ್, ಗಣಪತಿ, ನಾಗರಾಜ್ ಎಸ್. ಕಡಗಣ್ಣವರ್ ಮತ್ತು ಮಹಿಳಾ ಪೊಲೀಸ್ ಗಾಯತ್ರಿ ಅವರುಗಳ ತಂಡವನ್ನು ರಚಿಸಲಾಗಿತ್ತು.
ಸದರಿ ಪ್ರಕರಣದಲ್ಲಿ ಮೃತನ ಮತ್ತು ಆರೋಪಿಯ ಬಗ್ಗೆ ಯಾವದೇ ಕುರುಹುಗಳು ಹಾಗೂ ತಾಂತ್ರಿಕ ಮಾಹಿತಿ ಇಲ್ಲದೇ ಇದ್ದರೂ ಸಹ, ಕೂಡಲೇ ಕಾರ್ಯ ಪ್ರವೃತ್ತರಾಗಿ ಕೇವಲ 12 ಗಂಟೆಯ ಒಳಗೆ ಪೊಲೀಸರು ಕೊಲೆಗಾರರನ್ನು ಬಂಧಿಸಿದ್ದಾರೆ. ಈ ಕೃತ್ಯವನ್ನು ಚಾಣಕ್ಷತನದಿಂದ ಭೇದಿಸಿ ಕೃತ್ಯವೆಸಗಿದ ಆರೋಪಿ ಎ.ಆರ್. ಗಣೇಶ್ (54) ಎಂಬಾತನನ್ನು ನಾಪೋಕ್ಲು ಬಳಿಯ ಬೇತು ಗ್ರಾಮದಲ್ಲ ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ. ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿದ್ದಾರೆ. ಅಲ್ಲದೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸಾಕ್ಷ್ಯ ನಾಶ ಯತ್ನ : ಆರೋಪಿ ಗಣೇಶ್, ಭಿಕ್ಷುಕನ ಕೊಂದ ಬಳಿಕ ಆತ ಸಂಗ್ರಹಿಸಿ ಇಟ್ಟುಕೊಂಡಿದ್ದ ಗ್ಯಾರೇಜಿನ ಅನುಪಯುಕ್ತ ವಸ್ತುಗಳ ಚೀಲಕ್ಕೆ ಬೆಂಕಿ ಹಚ್ಚಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದಾಗಿ ಪೊಲೀಸರ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆÉ. ರಾತ್ರಿ ಪಾರ್ಕ್ನಲ್ಲೇ ಕಳೆದು ಬೆಳಗಿನ ಜಾವ ಪತ್ನಿಯೊಂದಿಗೆ ಪರಾರಿಯಾಗಿದ್ದಾಗಿ ಬಾಯ್ಬಿಟ್ಟಿದ್ದಾನೆ.
ಜತೆಗಾರ್ತಿಯರು ಸುಳಿವು : ಈ ಕೊಲೆ ಸಂಬಂಧ ತನಿಖೆ ಆರಂಭಿಸಿದ ಪೊಲೀಸರಿಗೆ ಅದೇ ಪಾರ್ಕ್ನಲ್ಲಿ ರಾತ್ರಿ ತಂಗುತ್ತಿದ್ದ ಇತರ ಭಿಕ್ಷುಕಿಯರು ಸುಳಿವು ನೀಡಿದ್ದಾರೆ. ಯಾರೋ ದಂಪತಿ ರಾತ್ರಿ ತಂಗುವದರೊಂದಿಗೆ ಈ ಕೃತ್ಯ ಎಸಗಿರಬಹುದೆಂದೂ ಮೃತನು ಎಲ್ಲಿಯವನೆಂದು ಗೊತ್ತಿಲ್ಲ; ಆತನ ಹೆಸರು ರವಿ ಎಂದಿದ್ದು, ಕನ್ನಡ ಹಾಗೂ ಕೊಡವ ಭಾಷೆ ಮಾತನಾಡುತ್ತಿದ್ದನೆಂದು ಸುಳಿವು ನೀಡಿದ್ದಾರೆ.