ವೀರಾಜಪೇಟೆ, ಏ. 7: ಯುಗಾದಿಯ ಸಂಭ್ರಮದೊಂದಿಗೆ ತನ್ನ ಸ್ನೇಹಿತನ ವಿವಾಹ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ವಿವಾಹಿತ ಯುವಕನೊಬ್ಬ, ನಿನ್ನೆ ಮಧ್ಯರಾತ್ರಿ ಕಲ್ಯಾಣ ಮಂಟಪದಿಂದ ಔತಣ ಕೂಟ ಮುಗಿಸಿ ಹಿಂತೆರಳುವ ವೇಳೆ, ಹೆದ್ದಾರಿಯಲ್ಲಿ ನಿರ್ಮಾಣ ಹಂತದ ಸೇತುವೆಯ ಸುಮಾರು 20 ಅಡಿ ಗುಂಡಿಗೆ ಬಿದ್ದು, ದಾರುಣ ಸಾವನ್ನಪ್ಪಿ ರುವ ದುರ್ಘಟನೆ ಪೆರುಂಬಾಡಿ ಬಳಿ ಸಂಭವಿಸಿದೆ. ಪೆರುಂಬಾಡಿ ನಿವಾಸಿ, ನಾರಾಯಣ ಎಂಬವರ ಪುತ್ರ ವಿನೋದ್ (28) ಮೃತ ದುರ್ದೈವಿ, ಮಧ್ಯರಾತ್ರಿ 1.30ರ ಸುಮಾರಿಗೆ ವೀರಾಜಪೇಟೆ ಮಹಿಳಾ ಸಮಾಜದಲ್ಲಿ ಔತಣ ಕೂಟ ಮುಗಿಸಿ ಹೊಸದಾಗಿ ಖರೀದಿಸಿರುವ (ನೋಂದಾಣಿಯಾಗ ಬೇಕಿದೆ) ‘ಟಿವಿಎಸ್ ವಿಗೋ ಸ್ಕೂಟಿ’ಯಲ್ಲಿ ಮನೆಗೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ.ಕಳೆದ ತಿಂಗಳು ಕೆಲಸ ನಿಮಿತ್ತ ಬೆಂಗಳೂರಿಗೆ ತೆರಳಿದ್ದ ಬಿ.ಎನ್. ವಿನೋದ್, ನಿನ್ನೆಯಷ್ಟೇ ತನ್ನ ಪತ್ನಿ ಹಾಗೂ ಮೂರು ವರ್ಷದ ಪುತ್ರನೊಂದಿಗೆ ಗ್ರಾಮಕ್ಕೆ ಆಗಮಿಸಿ ದ್ದರು. ಸ್ಕೂಟಿಯಲ್ಲಿ ವೀರಾಜಪೇಟೆಗೆ ಆಗಮಿಸಿ ತಡರಾತ್ರಿಯ ತನಕವೂ, ಮಹಿಳಾ ಸಮಾಜದಲ್ಲಿ ಏರ್ಪಡಿಸಲಾಗಿದ್ದ ಸ್ನೇಹಿತರ ವಿವಾಹ ಸಂಬಂಧ ರಾತ್ರಿ ಕಾರ್ಯಕ್ರಮದಲ್ಲಿ (ಚಪ್ಪರ) ಭಾಗವಹಿಸಿ ಹಿಂತೆರಳಿದ್ದರು.
ಈ ವೇಳೆ ಆರ್ಜಿ ಗ್ರಾಮದ ‘ಅನ್ವರ್ಲ್ಲಾಹುದಾ ಸೆಂಟರ್’ ಎದುರು ನಿರ್ಮಾಣಗೊಳ್ಳುತ್ತಿರುವ ಸೇತುವೆಗಾಗಿ ಅಗೆದಿರುವ ಅಂದಾಜು 20 ಅಡಿಯಷ್ಟು ಆಳದ ಗುಂಡಿಗೆ ಸ್ಕೂಟಿ ಸಹಿತ ಬಿದ್ದ ವೇಳೆ, ತಲೆಗೆ ಮಾರಣಾಂತಿಕ ಪೆಟ್ಟಾಗಿ ರಕ್ತಸ್ರಾವ ನಡುವೆ ಸ್ಥಳದಲ್ಲೇ ಕೊನೆಯುಸಿರೆಳೆ ದಿರುವದಾಗಿ ಪೊಲೀಸ್ ಠಾಣಾಧಿಕಾರಿ ಸಂತೋಷ್ ಕಶ್ಯಪ್ ಖಚಿತಪಡಿಸಿದ್ದಾರೆ.ರಾತ್ರಿ ಕತ್ತಲೆಯ ನಡುವೆ ಅಪಾಯದ ಅರಿವಿಲ್ಲದೆ ತೆರಳುತ್ತಿದ್ದ ವಿನೋದ್ ಗುಂಡಿಗೆ ವಾಹನ ಸಹಿತ ಬಿದ್ದು ಪ್ರಾಣ ಕಳೆದುಕೊಂಡಿದ್ದು, ಪ್ರಪಾತದಲ್ಲಿ ಬಿದ್ದಿದ್ದ ಸ್ಕೂಟಿಯ ಬೆಳಕು ಗಮನಿಸಿ ಆ ಮಾರ್ಗವಾಗಿ ತೆರಳುತ್ತಿದ್ದ ಇತರ ವಾಹನ ಚಾಲಕರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಆ ಮೇರೆಗೆ ಬೆಳಗಿನ ಜಾವ ಸ್ಥಳಕ್ಕೆ ತೆರಳಿದ ಪೊಲೀಸರು ಧಾರುಣ ಅಂತ್ಯಕಂಡಿದ್ದ ವಿನೋದ್ ಹಾಗೂ ವಾಹನವನ್ನು ಗುಂಡಿಯಿಂದ ತೆಗೆಸಿದ್ದಾರೆ.
ಮೊಕದ್ದಮೆ ದಾಖಲು : ಅಲ್ಲದೆ ಸೇತುವೆ ನಿರ್ಮಾಣ ಕಾಮಗಾರಿ ಸಂದರ್ಭ ಮುಂಜಾಗ್ರತಾ ಕ್ರಮ ವಹಿಸಿದೆ, ಹೆದ್ದಾರಿಯಲ್ಲಿ ನಿತ್ಯ ಸಂಚರಿಸುವ ವಾಹನಗಳ ಸವಾರರು, ಚಾಲಕರಿಗೆ ಯಾವದೇ ಅಪಾಯದ ಮುನ್ಸೂಚನೆ ನೀಡದಿರುವ ಮತ್ತು ಸೂಚನಾ ಫಲಕಗಳನ್ನು ಅಳವಡಿಸದಿ ರುವ ಕಾರಣ, ಸಂಬಂಧಿಸಿದ ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಸಂಬಂಧ ಮೃತರ ಸಂಬಂಧಿ ಸುಧಾಕರ್ ಎಂಬವರು ನೀಡಿರುವ ದೂರಿನ ಮೇರೆಗೆ ಡಿವೈಎಸ್ಪಿ ನಾಗಪ್ಪ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿರು ವದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಮೃತರ ಬಂಧುಗಳಿಗೆ ಒಪ್ಪಿಸಲಾಯಿತು. -ಕೆ.ಕೆ.ಎಸ್.