ಮಡಿಕೇರಿ, ಏ. 5: ಲೋಕಸಭಾ ಚುನಾವಣೆ ಹಿನ್ನೆಲೆ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಳೆದ ಮೂರು ದಿನಗಳಿಂದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಮತದಾನದ ಮಹತ್ವ ಕುರಿತ ಸಂದೇಶ ಒಳಗೊಂಡ ಮಾಹಿತಿಯ ವಸ್ತು ಪ್ರದರ್ಶನ ನಡೆಯಿತು.
ಚುನಾವಣಾ ಆಯೋಗದ ಸಹಯೋಗದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ವಿಶೇಷ ವಸ್ತು ಪ್ರದರ್ಶನವನ್ನು ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ಅಧ್ಯಕ್ಷರಾದ ಕೆ.ಲಕ್ಷ್ಮಿಪ್ರಿಯಾ ವೀಕ್ಷಣೆ ಮಾಡಿದರು.
ಮತದಾರರಲ್ಲಿ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಚುನಾವಣೆಯ ವಿವಿಧ ಘೋಷ ವಾಕ್ಯಗಳು ಹಾಗೂ ಕಾರ್ಟೂನ್ ಚಿತ್ರಗಳನ್ನು ಬಳಸಿಕೊಂಡು ಸಿದ್ಧಪಡಿಸಿರುವ ಪ್ರಚಾರ ಫಲಕಗಳು ನೋಡುಗರ ಗಮನ ಸೆಳೆದವು. ಮೊಬೈಲ್ ಆ್ಯಪ್ ಸಿ-ವಿಜಿಲ್ ಚುನಾವಣಾ ಆ್ಯಪ್ ಬಳಕೆ, ವೋಟ್ ಮಾಡಿದವನೇ ಹೀರೋ, ವಿಶೇಷಚೇತನರಿಗೆ ಸೌಲಭ್ಯ, ಮತದಾನ ಮಾಡುವದು ಅರ್ಹರೆಲ್ಲರ ಕರ್ತವ್ಯ, ಹೀಗೆ ಹಲವು ಮತ ಜಾಗೃತಿ ಘೋಷ ವಾಕ್ಯಗಳು ಪ್ರಚಾರ ಫಲಕದಲ್ಲಿ ಮನ ಸೆಳೆದವು.
ಆಮಿಷಕ್ಕೆ ಮರುಳಾಗದಿರಿ, ವಿವೇಚನೆಯಿಂದ ಮತ ಚಲಾಯಿಸಿ, ಮಾಡಿ ಮಾಡಿ ಮತದಾನ, ಇರಲಿ ದೇಶದ ಮೇಲೆ ಅಭಿಮಾನ, ಯಾವದೇ ಮತದಾರ ಮತದಾನದಿಂದ ಹೊರ ಗುಳಿಯಬಾರದು. ಪ್ರಜಾತಂತ್ರದಲ್ಲಿ ಮತದಾನವೇ ಹಬ್ಬ ಮತ್ತಿತರ ಸಂದೇಶಗಳಿದ್ದವು. ಜಿ.ಪಂ. ಸಹಾಯಕ ಕಾರ್ಯದರ್ಶಿ ಮಧುಕರ್, ವಾರ್ತಾಧಿಕಾರಿ ಚಿನ್ನಸ್ವಾಮಿ, ಸತೀಶ್ ಇತರರು ಇದ್ದರು.