ಆಲೂರು-ಸಿದ್ದಾಪುರ, ಏ. 5: ‘ನಿಸ್ವಾರ್ಥ ಸೇವಾ ಮನೋಭಾವನೆ, ಆಧ್ಯಾತ್ಮಿಕ ಚಿಂತನೆಗಳಿಂದ ಮನುಷ್ಯನ ಆರೋಗ್ಯ ವೃದ್ಧಿಯಾಗಿ ತುಂಬು ಜೀವನ ನಡೆಸಬಹುದು’ ಎಂದು ಕಲ್ಲುಮಠದ ಮಹಾಂತ ಸ್ವಾಮೀಜಿಗಳು ಅಭಿಪ್ರಾಯಪಟ್ಟರು. ಕೊಡ್ಲಿಪೇಟೆ ಕಲ್ಲುಮಠದ ಶಾಲಾ ಅವರಣದಲ್ಲಿ ಹಮ್ಮಿಕೊಂಡಿದ್ದ ತುಮಕೂರು ಸಿದ್ಧಗಂಗೆ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರ 112 ನೇ ಜನ್ಮ ದಿನಾಚರಣೆ ಮಹೋತ್ಸವ ಹಾಗೂ ಗುರುವಂದನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಿದ್ಧಗಂಗೆ ಮಠಾಧೀಶ ಡಾ.ಶಿವಕುಮಾರಸ್ವಾಮೀಜಿ ಅವರು ಜಗತ್ತಿಗೆ ಮಾದರಿಯಾದ ಮಹಾನ್ ಪುರುಷರಾಗಿದ್ದಾರೆ ಎಂದರು.
ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರು ತಮ್ಮ ಆರೋಗ್ಯವನ್ನು ಬಹುದೊಡ್ಡ ಸಂಪತ್ತು ಎಂದು ಭಾವಿಸಿಕೊಂಡರೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಜೀವನ ನಡೆಸಬಹುದು ಎಂದರು. ತೊರೆನೂರು ಮಠದ ಮಲ್ಲೇಶ ಸ್ವಾಮೀಜಿ ಮಾತನಾಡಿ, ತಾಯಿಂದಿರು ಮಕ್ಕಳಿಗೆ ಮೊದಲ ಗುರುಗಳಾಗುತ್ತಾರೆ, ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಒಳ್ಳೆಯ ಮೌಲ್ಯಾಧರಿತ ವಿಚಾರಗಳನ್ನು ಹೇಳಿಕೊಡಬೇಕು ಎಂದರು.
ಅರಕಲಗೂಡಿನ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಸಿದ್ಧಗಂಗೆ ಮಠಾಧೀಶರಾದ ಡಾ.ಶಿವಕುಮಾರ ಸ್ವಾಮೀಜಿಗಳು ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿ ಸೇವೆಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ, ಇಲ್ಲಿ ಶಿಕ್ಷಣ ಪಡೆದ ಅನೇಕರು ದೇಶ ವಿದೇಶಗಳಲ್ಲಿ ಉನ್ನತ ಉದ್ಯೋಗದೊಂದಿಗೆ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶಿಡಿಗಳಲೆ ಮಠದ ಶಿವಲಿಂಗ ಸ್ವಾಮೀಜಿ, ಮಾಜಿ ಸೈನಿಕ ಮಂಜುನಾಥ್, ಲಲಿತಮ್ಮ, ರುದ್ರಪ್ಪ, ಶಿವಕುಮಾರ್ ಮುಂತಾದವರು ಮಾತನಾಡಿದರು. ವೇದಿಕೆಯಲ್ಲಿ ದೇವರಾಜ್, ಖಲೀಲ್ ಉರ್ರೆಹಮಾನ್ ಮುಂತಾದವರಿದ್ದರು.