ಗೋಣಿಕೊಪ್ಪ ವರದಿ, ಏ. 5: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಅವರು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಲ್ಲಿ 50 ಸಾವಿರ ಮತಗಳ ಅಂತರದಲ್ಲಿ ಜಯ ಸಾಧಿಸಲಿದ್ದಾರೆ ಎಂದು ಕೆಪಿಸಿಸಿ ವೀಕ್ಷಕ ಟಿ.ಎಂ. ಶಾಹಿದ್ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಕೋಮುವಾದದಲ್ಲಿ ತೊಡಗಿಕೊಂಡು ಮುನ್ನಡೆಯುತ್ತಿದೆ. ಆದರೆ, ಜಾತ್ಯತೀತ ಮನೋಭಾವನೆ ಯಲ್ಲಿ ಮುಂದುವರಿಯುತ್ತಿರುವ ಮೈತ್ರಿ ಸರ್ಕಾರವು ಅಭಿವೃದ್ಧಿ ಪರ ತೊಡಗಿಕೊಂಡಿರುವದರಿಂದ ಹೆಚ್ಚು ಮತಗಳ ಗೆಲವಿಗೆ ಕಾರಣವಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಬಾರಿಯ ಚುನಾವಣೆ ಧರ್ಮ ಮತ್ತು ಅಧರ್ಮದ ನಡುವಿನ ಚುನಾವಣೆಯಾಗಿ ಬಿಂಬಿತವಾಗಿದೆ. ಕೊಡಗಿನ ಶಾಸಕರುಗಳು ಹಾಗೂ ಸಂಸದರಿಂದ ಜಿಲ್ಲೆಗೆ ಪ್ರಯೋಜನ ವಾಗುತ್ತಿಲ್ಲ ಎಂದರು.

ಕೇಂದ್ರ ಸರ್ಕಾರವು ರಾಷ್ಟ್ರೀಕರಣದ ಮೂಲಕ ಅಭಿವೃದ್ಧಿಗೆ ಒತ್ತು ನೀಡದೆ, ಖಾಸಗೀಕರಣಕ್ಕೆ ಮುಂದಾಗುವ ಮೂಲಕ ಸರ್ಕಾರಿ ಸೇವೆಗಳು ಖಾಸಗಿಯಾಗುತ್ತಿದೆ. ಸಾಕಷ್ಟು ಉದ್ಯೋಗಿಗಳು ಸಂಬಳ ಪಡೆಯಲಾಗದೆ ಆರ್ಥಿಕವಾಗಿ ತೊಂದರೆಯಲ್ಲಿ ಸಿಲುಕಿ ಕೊಂಡಂತಾಗಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತೀರ ಧರ್ಮಜ ಮಾತನಾಡಿ, ಕೇಂದ್ರ ಸರ್ಕಾರ ಅಭಿವೃದ್ಧಿ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳದ ಕಾರಣ ಮೈತ್ರಿ ಅಭ್ಯರ್ಥಿ ಗೆಲವು ಪಡೆಯಲಿದ್ದಾರೆ. ಕಾಫಿ, ಕಾಳುಮೆಣಸು ಧಾರಣೆಯಲ್ಲಿ ಕುಸಿತಕ್ಕೆ ಕೇಂದ್ರ ಸರ್ಕಾರ ಕಾರಣ ಎಂದು ಆರೋಪಿಸಿದರು.

ಮಾಜಿ ಎಂಎಲ್‍ಸಿ ಅರುಣ್ ಮಾಚಯ್ಯ ಮಾತನಾಡಿ, ಕೃಷಿಕರಿಗೆ ಕೇಂದ್ರ ಸರ್ಕಾರದಿಂದ ಯಾವದೇ ಸಬ್ಸಿಡಿ ಕಳೆದ 5 ವರ್ಷಗಳಿಂದ ಲಭಿಸುತ್ತಿಲ್ಲ. ಯುಪಿಎ ಸರ್ಕಾರವಿದ್ದ ಸಂದರ್ಭ ಕೃಷಿ ಪೂರಕ ಯೋಜನೆಗಳ ಮೂಲಕ ಸಬ್ಸಿಡಿ ನೀಡಲಾಗುತ್ತಿತ್ತು. ಕೃಷಿಕನಿಗೆ ಕೇಂದ್ರದಿಂದ ಏನು ಸಿಗುತ್ತಿಲ್ಲ ಎಂದರು.

ಗೋಷ್ಠಿಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಅಬ್ದುಲ್ ರೆಹಮಾನ್, ಹಿಂದುಳಿದ ವರ್ಗಗಳ ಘಟಕ ಅಧ್ಯಕ್ಷ ಸರಾ ಚೆಂಗಪ್ಪ ಉಪಸ್ಥಿತರಿದ್ದರು.