ಗುಡ್ಡೆಹೊಸೂರು, ಏ. 5: ಇಲ್ಲಿನ ಸಮುದಾಯಭವನದಲ್ಲಿ ಈ ವಿಭಾಗದ ಬಿ.ಜೆ.ಪಿ. ಕಾರ್ಯಕರ್ತರ ಸಭೆ ನಡೆಯಿತು.
ಸಭೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರತಾಪ್‍ಸಿಂಹ ಮಾತನಾಡಿ, 5 ವರ್ಷದಲ್ಲಿ ತಾವು ಮಾಡಿದ ಕಾರ್ಯದ ಬಗ್ಗೆ ಮತ್ತು ಪ್ರಧಾನ ಮಂತ್ರಿ ಮೋದಿ ಅವರ ಉತ್ತಮ ಆಡಳಿತದ ಬಗ್ಗೆ ಸಭೆಯಲ್ಲಿ ವಿವರಿಸಿದರು.
ದೇಶದ ಭದ್ರತೆಯ ದೃಷ್ಟಿಯಿಂದ ಬಿ.ಜೆ.ಪಿ.ಗೆ ಮತ ನೀಡುವ ಮೂಲಕ ಮತ್ತೆ ಮೋದಿ ಅವರನ್ನು ಪ್ರಧಾನಿ ಮಾಡಲು ಬೂತ್ ಮಟ್ಟದಿಂದಲೇ ಕಾರ್ಯಕರ್ತರು ಶ್ರಮಿಸುವಂತೆ ಕರೆ ನೀಡಿದರು. ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಕೊಡಗಿನಲ್ಲಿ ಮಳೆ ದುರಂತ ಸಂದರ್ಭ ಕೇಂದ್ರ ಸರಕಾರ ನೆರವಿನ ಬಗ್ಗೆ ವಿವರಿಸಿದರು. ಎಂ.ಎಲ್.ಸಿ. ಸುನಿಲ್ ಸುಬ್ರಮಣಿ ಮಾತನಾಡಿ, ಬಿ.ಜೆ.ಪಿ.ಯ ಗೆಲವಿಗೆ ಶ್ರಮಿಸುವಂತೆ ಕೋರಿದರು.
ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ಕೇಂದ್ರ ಸರಕಾರದ ವಿವಿಧ ಯೋಜನೆಯ ಬಗ್ಗೆ ತಿಳಿಸಿದರು. ವೇದಿಕೆಯಲ್ಲಿ ಗುಡ್ಡೆಹೊಸೂರು ಬಿ.ಜೆ.ಪಿ. ಮುಖಂಡ ಎಂ.ಆರ್. ಉತ್ತಪ್ಪ, ತಾ.ಪಂ. ಸದಸ್ಯೆ ಪುಷ್ಪ, ಜಿಲ್ಲಾ ಬಿ.ಜೆಪಿ. ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೆಶ್, ನಂಜರಾಯಪಟ್ಟಣ ಸಹಕಾರ ಸಂಘದ ಅಧ್ಯಕ್ಷ ಬಲ್ಯಾಟಚೆಂಡ ಮುರುಳಿಮಾದಯ್ಯ ಮತ್ತು ರಾಬಿನ್ ದೇವಯ್ಯ, ಪಂಚಾಯಿತಿ ಸದಸ್ಯರು ಹಾಜರಿದ್ದರು. ಈ ಸಂದರ್ಭ ಗಣೇಶ್ ಕುಡೆಕ್ಕಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.