ಸದಾಶಿವ ಸ್ವಾಮೀಜಿ ಆಶಯ
ಶನಿವಾರಸಂತೆ, ಏ. 5: ಸಮಾಜಮುಖಿಯಾಗಿ ಜೀವನ ನಡೆಸುವವರು ಜನಮಾನಸದಲ್ಲಿ ಉಳಿಯುತ್ತಾರೆ. ಸಿದ್ಧಗಂಗಾ ಮಠಾಧೀಶ ಶಿವಕುಮಾರ ಸ್ವಾಮೀಜಿ ಜಗತ್ತಿನ ಪುಟಗಳಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡಿದ್ದಾರೆ ಎಂದು ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು.
ಗುಡುಗಳಲೆ ಜಾತ್ರಾ ಮೈದಾನದ ಬಸವೇಶ್ವರ ದೇವಾಲಯದಲ್ಲಿ ದೇವಾಲಯ ಸಮಿತಿ ವತಿಯಿಂದ ಸಿದ್ಧಗಂಗಾ ಶ್ರೀಗಳ ಜನ್ಮ ದಿನಾಚರಣೆ ಹಾಗೂ ಗುರುವಂದನಾ ಕಾರ್ಯಕ್ರಮದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಶಿಡಿಗಳಲೆ ಮಠದ ಇಮ್ಮಡಿ ಶಿವಲಿಂಗ ಸ್ವಾಮೀಜಿ ಮಾತನಾಡಿ, ಶಿವಕುಮಾರ ಸ್ವಾಮೀಜಿ ಗಂಧದ ಕೊರಡಿನಂತೆ ಜೀವನ ಪೂರ್ತಿ ಸವೆಸಿದವರು. ಅವರ ಸಂಸ್ಕಾರವನ್ನು ಬದುಕಿನಲ್ಲಿ ಅಳವಡಿಸಕೊಂಡರೆ ಅದೇ ಅವರಿಗೆ ಸಲ್ಲಿಸುವ ಶ್ರದ್ಧಾಂಜಲಿ ಎಂದರು.
ಕಲ್ಲುಮಠದ ಮಹಾಂತ ಸ್ವಾಮೀಜಿ ಆಶೀರ್ವಚನ ನೀಡಿದರು. ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಕೆ.ಬಿ. ಹಾಲಪ್ಪ ಹಾಗೂ ನಿವೃತ್ತ ಪ್ರಾಂಶುಪಾಲ ಸಿ.ಎಂ. ಪುಟ್ಟಸ್ವಾಮಿ ಮಾತನಾಡಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್, ಬಸವೇಶ್ವರ ದೇವಾಲಯ ಸಮಿತಿ ಕಾರ್ಯದರ್ಶಿ ಎಸ್.ಎಂ. ಉಮಾಶಂಕರ್, ಮುಖಂಡರಾದ ಡಿ.ಬಿ. ಸೋಮಪ್ಪ, ಜಿ.ಎಂ. ಕಾಂತರಾಜ್, ಮಹಾದೇವ, ಕಂದಾಯ ಅಧಿಕಾರಿ ನಂದಕುಮಾರ್ ಇತರರು ಉಪಸ್ಥಿತರಿದ್ದರು. ಧಾರ್ಮಿಕ ಸಭೆಗೂ ಮೊದಲು ದೇವಾಲಯದಲ್ಲಿ ಬಸವೇಶ್ವರ ದೇವರಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು.