ಸೋಮವಾರಪೇಟೆ, ಏ. 5 ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆಗೆ ತಾಲೂಕಿನ ಅರೆಯೂರು, ಹೊಸಳ್ಳಿ ಸುತ್ತಮುತ್ತಲ ಗ್ರಾಮದ ಕೃಷಿಕರು ತತ್ತರಿಸಿದ್ದಾರೆ. ನೀರಿನ ಅಲಭ್ಯತೆಯ ನಡುವೆಯೂ ತರಕಾರಿ ಸೇರಿದಂತೆ ಇನ್ನಿತರ ಕೃಷಿಯನ್ನು ಕೈಗೊಂಡಿದ್ದ ರೈತರಿಗೆ, ಆಲಿಕಲ್ಲು ಮಳೆ ಗಧಾಪ್ರಹಾರ ಮಾಡಿದ್ದು, ಕೃಷಿ ಸಂಪೂರ್ಣ ನಷ್ಟಗೊಂಡಿದೆ.
ಹೊಸಳ್ಳಿ ಗ್ರಾಮಸ್ಥರು ಮದಲಾಪುರದ ಹೊಳೆ ಬಸವೇಶ್ವರ ದೇವಾಲಯಕ್ಕೆ ತೆರಳಿ ಸಾಮೂಹಿಕವಾಗಿ ಮಳೆಗಾಗಿ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸಿದ್ದರು. ಇದಾಗಿ ಕೆಲ ಸಮಯದಲ್ಲೇ ಅರೆಯೂರು-ಹೊಸಳ್ಳಿ ಭಾಗದಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ ಯಾಗಿದ್ದು, ಮಳೆಯೊಂದಿಗೆ ಎರಡು ಗಂಟೆಗಳ ಕಾಲ ಆಲಿಕಲ್ಲುಗಳು ಸುರಿದ ಹಿನ್ನೆಲೆ ಈ ಭಾಗದ ಕೃಷಿ ಸಂಪೂರ್ಣ ನಷ್ಟಗೊಂಡಿದೆ.
ಒಂದೊಂದು ಆಲಿಕಲ್ಲು ಅರ್ಧ ಕೆ.ಜಿ.ಗೂ ಅಧಿಕ ತೂಕವಿತ್ತು ಎಂದು ಹೊಸಳ್ಳಿ ಗ್ರಾಮದ ಪ್ರಮೋದ್ ಮತ್ತು ಹೆಚ್.ಎ. ರಾಜೇಶ್ ಅವರುಗಳು ಮಾಹಿತಿ ನೀಡಿದ್ದಾರೆ. ಪ್ರಸಕ್ತ ವರ್ಷ ಕಾಫಿ ತೋಟಕ್ಕೆ ನೀರಿನ ಅಲಭ್ಯತೆ ಉಂಟಾಗಿದ್ದು, ಬೋರ್ವೆಲ್ ಸೌಕರ್ಯ ಹೊಂದಿರುವ ಕೃಷಿಕರು ಸ್ಪಿಂಕ್ಲರ್ ಮೂಲಕ ನೀರು ಹಾಯಿಸಿದ್ದರು. ಪರಿಣಾಮ ಹೂಗಳು ಅರಳಿ ಕಾಯಿಗಳು ಮೂಡಲಾರಂಭಿ ಸಿದ್ದವು. ಇಂತಹ ಸಮಯದಲ್ಲಿ ಭಾರೀ ಪ್ರಮಾಣದ ಆಲಿಕಲ್ಲುಗಳು ಸುರಿದಿದ್ದು, ಕಾಫಿ ತೋಟದ ಎಲೆ, ಕಾಯಿ ಸೇರಿದಂತೆ ಕೊಂಬೆಗಳು ಕೆಳಬಿದ್ದಿವೆ.
ಇದರೊಂದಿಗೆ ಹೊಲ, ಗದ್ದೆಗಳಲ್ಲಿ ಕೃಷಿಕರು ಬೇಸಿಗೆ ಬೆಳೆಯಾಗಿರುವ ವಿವಿಧ ತರಕಾರಿ, ಶುಂಠಿ, ಕ್ಯಾನೆ ಗೆಣಸು, ಕೆಸ, ಬೀನ್ಸ್, ಹಸಿ ಮೆಣಸು ಕೃಷಿ ಮಾಡಿದ್ದು, ಆಲಿಕಲ್ಲು ಮಳೆಗೆ ಇನ್ನಿಲ್ಲದಂತೆ ನಷ್ಟಗೊಂಡಿವೆ.
ಹೊಸಳ್ಳಿ ಗ್ರಾಮದ ಲೋಕೇಶ್, ಪ್ರಮೋದ್, ಮಾದಪ್ಪ, ಬಿ.ಎಂ. ರಾಜೀವ, ಎಂ.ಟಿ. ಸುರೇಶ್, ಜೋಯಪ್ಪ, ಕೃಷ್ಣಪ್ಪ, ಹೆಚ್.ಎ. ರಾಜೇಶ್, ರತನ್ ಸೇರಿದಂತೆ ಇನ್ನಿತರ ಕೃಷಿಕರು ಬೆಳೆದಿದ್ದ ಕೃಷಿ ಸಂಪೂರ್ಣವಾಗಿ ನಾಶಗೊಂಡಿವೆ.
ಆಲಿಕಲ್ಲು ಮಳೆಗೆ ಹಲವಷ್ಟು ಮನೆಗಳ ಹೆಂಚು, ಸಿಮೆಂಟ್ ಶೀಟ್, ಫೈಬರ್ ಬಾಗಿಲುಗಳು ಜಖಂ ಗೊಂಡಿದ್ದು, ಇತಿಹಾಸದಲ್ಲಿಯೇ ಇಂತಹ ಆಲಿಕಲ್ಲು ಮಳೆ ನೋಡಿಯೇ ಇಲ್ಲ ಎಂದು ಗ್ರಾಮದ 76 ವರ್ಷ ಪ್ರಾಯದ ರಾಜು, ಓ.ಬಿ. ಈರಪ್ಪ ಸೇರಿದಂತೆ ಇತರರು ಅಭಿಪ್ರಾಯಿಸಿದ್ದಾರೆ. ಆಲಿಕಲ್ಲು ಮಳೆಯಿಂದ ಕೃಷಿ ಫಸಲು ಹಾನಿಗೀಡಾಗಿರುವದರಿಂದ ಆ ಭಾಗದ ಕೃಷಿಕರು ಪರಿಹಾರಕ್ಕಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ.
- ವಿಜಯ್ ಹಾನಗಲ್